“ಚುನಾವಣಾ ಆಯೋಗ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವಂತಾಗಬಾರದು”- ಸಿಪಿಐ(ಎಂ) ನಿಂದ ಇನ್ನೊಂದು ಪತ್ರ
ದೆಹಲಿ : ಎಪ್ರಿಲ್ 21 ರಂದು ಕೇರಳದ ಮೂವರು ರಾಜ್ಯಸಭಾ ಸದಸ್ಯರು ತಮ್ಮ ಅವಧಿ ಮುಗಿಯುವುದರಿಂದಾಗಿ ನಿವೃತ್ತಿ ಹೊಂದಲಿದ್ದು, ಈ ಸ್ಥಾನಗಳಿಗೆ ಕೇರಳ ವಿಧಾನಸಭೆಯಿಂದ ಚುನಾವಣೆಯ ಪ್ರಕ್ರಿಯೆ ಮಾರ್ಚ್ 24ರಿಂದ ಆರಂಭವಾಗುತ್ತದೆ ಎಂದು ಚುನಾವಣಾ ಆಯೋಗ ಮಾರ್ಚ್ 17ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ಚುನಾವಣಾ ಆಯೋಗ, ಕೊನೆಯ ಗಳಿಗೆಯಲ್ಲಿ ಅದನ್ನು ತಡೆಹಿಡಿದದ್ದರ ಕುರಿತು ಆಘಾತ ವ್ಯಕ್ತಪಡಿಸಿ, ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಮಾರ್ಚ್ 25ರಂದು ಪತ್ರ ಬರೆದಿದ್ದರು. ಈ ಕುರಿತು ಚುನಾವಣಾ ಆಯೋಗದ ಪತ್ರಿಕಾ ಹೇಳಿಕೆ ಪ್ರಕಟವಾದ ಕೂಡಲೇ ಅದನ್ನು ಸಂಪರ್ಕಿಸಿ ಭೇಟಿ ಮಾಡುವ ಪ್ರಯತ್ನ ವಿಫಲವಾದ್ದರಿಂದ ಈ ಪತ್ರ ಬರೆಯಬೇಕಾಯಿತು ಎಂದು ಅವರು ಹೇಳಿದ್ದರು.
ಮರುದಿನ, ಮಾರ್ಚ್ 26ರಂದು ಚುನಾವಣಾ ಆಯೋಗ ಭೇಟಿಗೆ ಅವಕಾಶ ನೀಡಿತು. ನೀಲೋತ್ಪಲ ಬಸು ಅವರು ಚುನಾವಣಾ ಆಯೋಗವನ್ನು ಭೇಟಿಯಾದರು. ಆದರೆ ಈ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ದಿಲ್ಲಿಯಲ್ಲಿ ಇರದ್ದರಿಂದ ಹಾಜರಿರಲಿಲ್ಲ.
ಬಸು ಅವರು ತಮ್ಮ ಪತ್ರದಲ್ಲಿ ಬರೆದಿದ್ದ ಅಂಶಗಳನ್ನು ಎತ್ತಿದರು. ಹಾಜರಿದ್ದ ಆಯುಕ್ತರುಗಳು ಆಯೋಗದ ಮಾರ್ಚ್ 24 ರ ಹೇಳಿಕೆಯಿಂದ ಈ ಇಡೀ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ಭಾವಿಸಬೇಕಾಗಿಲ್ಲ, ಇದು ಈ ಕುರಿತು ಕೇಂದ್ರ ಸರಕಾರದಿಂದ ಒಂದು ಉಲ್ಲೇಖ ಬಂದಿದೆ ಎಂಬುದನ್ನು ತಿಳಿಸಲು ಎಂದು ವಿವರಿಸಲು ಪ್ರಯತ್ನಿಸಿದರು.
ಅಂದರೆ ಇದು ಸರಕಾರ ಮತ್ತು ಆಯೋಗದ ನಡುವಿನ ದ್ವಿಪಕ್ಷೀಯ ವಿಚಾರ ಎಂದಂತಾಯಿತು. ಆದರೆ ಆಯೋಗದ ಪತ್ರಿಕಾ ಹೇಳಿಕೆ ಆಯೋಗದ ಸ್ವಾತಂತ್ರ್ಯಕ್ಕೆ ಕುಂದು ಬಂದಿದೆ ಎಂಬ ಭಾವನೆಯನ್ನು ಕೊಡುತ್ತದೆ. ಸರಕಾರದ ಉಲ್ಲೇಖವನ್ನು ಆಯೋಗ ಪರಿಗಣನೆಗೆ ತಗೊಂಡಿದೆ ಎಂದನಿಸುತ್ತಿರುವುದರಿಂದ ಈ ಚುನಾವಣಾ ಪ್ರಕ್ರಿಯೆ ಮುಂದುವರಿಯುವ ಬಗ್ಗೆ ಸಂದೇಹ ಮೂಡುತ್ತದೆ ಎಂದು ನೀಲೋತ್ಪಲ ಬಸು ಪಕ್ಷದ ಅಭಿಪ್ರಾಯವನ್ನು ಮುಂದಿಟ್ಟರು.
ಒಂದು ವೇಳೆ ಆಯೋಗ ಇಡೀ ಪ್ರಕ್ರಿಯೆಯನ್ನು ತಡೆಹಿಡಿದಿಲ್ಲವಾದರೆ, ಈ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟೀಕರಣ ನೀಡಬೇಕು ಮತ್ತು ಸರಕಾರದ ಉಲ್ಲೇಖದ ವಿವರಗಳನ್ನು ಕೂಡ ತಿಳಿಯಪಡಿಸಬೇಕು ಎಂದು ಬಸು ಅವರು ಹೇಳಿದಾಗ, ಆಯೋಗ ಈ ವಿಷಯವನ್ನು ಜಾಗರೂಕತೆಯಿಂದ ಪರಿಶೀಲಿಸುತ್ತದೆ ಎಂಬ ಆಶ್ವಾಸನೆಯನ್ನು ಕೊಡಲಾಯಿತು.
ಈ ನಡುವೆ ಕೇರಳ ಹೈಕೋರ್ಟಿನಲ್ಲಿ ಈ ಕುರಿತ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಆಯೋಗ ಗಂಭೀರ ಪರಿಣಾಮಗಳನ್ನು ಉಂಟುಮಾಡುವಂತಹ ನಿಲುವು ತಳೆದಿರುವದರಿಂದ ಈ ಕುರಿತು ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 1 ರಂದು ಇನ್ನೊಂದು ಪತ್ರವನ್ನು ಬರೆದಿದ್ದಾರೆ.
ಈ ಬೆಳವಣಿಗೆಗಳು ಸಿಪಿಐ(ಎಂ)ನ ಆತಂಕವನ್ನು ಇನ್ನಷ್ಟು ಸಾಬೀತುಪಡಿಸುವಂತಿವೆ ಎಂದು ಈ ಪತ್ರದಲ್ಲಿ ಹೇಳಲಾಗಿದೆ. ಕೇರಳದ ಈಗಿನ ವಿಧಾನಸಭೆಯ ಸದಸ್ಯರುಗಳ ಅವಧಿ ಮುಗಿಯುವ ಮೊದಲೇ ರಾಜ್ಯಸಭೆಗೆ ಚುನಾವಣೆಗಳನ್ನು ನಡೆಸಲಾಗುವುದು ಎಂದು ನ್ಯಾಯಾಲಯದ ಎದುರು ಮೌಖಿಕವಾಗಿ ಹೇಳಿದ ನಂತರ ಈ ಬಗ್ಗೆ ಸ್ಪಷ್ಟ ಹೇಳಿಕೆಯನ್ನು ಕೊಡಲು ಆಯೋಗ ನಿರಾಕರಿಸುತ್ತಿರುವುದಕ್ಕೆ ಕಾರಣ ತಿಳಿಯದು. ಸಂದೇಹವನ್ನು ಇನ್ನೂ ಹೆಚ್ಚಿಸುವ ಸಂಗತಿಯೆಂದರೆ, ಮಾರ್ಚ್ 17ರ ಅಧಿಸೂಚನೆಯಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಆಯೋಗದ ಆಶಯವನ್ನು ಬದಲಿಸಲು ಕಾರಣವಾದಂತಿರುವ ಸರಕಾರದ ಉಲ್ಲೇಖದಲ್ಲಿ ಏನಿದೆ ಎಂಬುದನ್ನು ತಿಳಿಸಲು ಅದು ಈಗಲೂ ಹಿಂದೇಟು ಹಾಕುತ್ತಿದೆ.
ಆದ್ದರಿಂದ ಆಯೋಗ ಕಾನೂನಿನ ಪ್ರಕಾರ ವರ್ತಿಸಬೇಕು, ಪ್ರಸಕ್ತ ವಿಧಾನಸಭಾ ಸದಸ್ಯರ ಕಾರ್ಯಕಾಲ ಮುಗಿಯುವ ಮೊದಲು ಚುನಾವಣೆಗಳನ್ನು ನಡೆಸಬೇಕು ಎಂದು ಸಿಪಿಐ(ಎಂ) ದೃಢವಾಗಿ ಆಗ್ರಹಿಸುವುದಾಗಿ ಬಸು ತಮ್ಮ ಈ ಪತ್ರದಲ್ಲಿ ಹೇಳಿದ್ದಾರೆ. ಭಾರತದ ಚುನಾವಣಾ ಆಯೋಗದಂತಹ ಒಂದು ಸ್ವತಂತ್ರ ಸಂವಿಧಾನಿಕ ಪ್ರಾಧಿಕಾರ ಪಾರದರ್ಶಕ ವರ್ತನೆಯ ದೃಷ್ಟಿಯಿಂದ ಸರಕಾರದ ಉಲ್ಲೇಖದಲ್ಲಿ ಏನಿದೆ ಎಂಬುದರ ವಿವರಗಳನ್ನು ಹಂಚಿಕೊಳ್ಳಬೇಕು ಎನ್ನುತ್ತ ಚುನಾವಣಾ ಆಯೋಗ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುತ್ತಿದೆ ಎಂಬ ಭಾವನೆ ಉಂಟಾಗದ ರೀತಿಯಲ್ಲಿ ವರ್ತಿಸುತ್ತದೆ ಎಂಬ ನಿರೀಕ್ಷೆಯನ್ನು ನೀಲೋತ್ಪಲ ಬಸು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 17 ರ ತನ್ನ ಅಧಿಸೂಚನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂಬ ಚುನಾವಣಾ ಆಯೋಗದ ಪ್ರಕಟಣೆಯನ್ನು ಪ್ರಶ್ನಿಸಿ ಕೇರಳ ವಿಧಾನಸಭೆಯ ಕಾರ್ಯದರ್ಶಿ ಮತ್ತು ಕೇರಳದ ಒಬ್ಬ ಸಿಪಿಐ(ಎಂ) ಶಾಸಕರು ಕೇರಳ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಚುನಾವಣಾ ಆಯೋಗದ ವಕೀಲರು ಎಪ್ರಿಲ್ 21 ರಂದು ತೆರವಾಗಲಿರುವ ಮೂರು ರಾಜ್ಯ ಸಭಾ ಸ್ಥಾನಗಳಿಗೆ ಕೇರಳ ವಿಧಾನಸಭೆಯಿಂದ ಚುನಾವಣೆಯನ್ನು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವುದರೊಳಗೆ ನಡೆಸಲಾಗುವುದು ಎಂದು ಹೈಕೋರ್ಟಿಗೆ ಆಶ್ವಾಸನೆ ನೀಡಿದರು.
ಆದರೆ ನ್ಯಾಯಾಲಯ ಇದನ್ನು ದಾಖಲಿಸಿಕೊಂಡು ವಿಚಾರಣೆ ಮುಗಿದ ಕೆಲವೇ ನಿಮಿಷಗಳಲ್ಲಿ ಆ ವಕೀಲರು ತನ್ನ ಮೌಖಿಕ ಹೇಳಿಕೆಯನ್ನು ದಾಖಲಿಸಿಕೊಳ್ಳಬಾರದು ಎಂದು ನ್ಯಾಯಾಲಯವನ್ನು ಕೋರಿದರು. ಇದರಂತೆ ಈಗ ಈ ವಿಷಯವನ್ನು ಎಪ್ರಿಲ್ 5 ರಂದು ಪರಿಶೀಲಿಸಲಾಗುವುದು ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಈ ಎರಡನೇ ಪತ್ರ ಬರೆದಿದ್ದಾರೆ.