ಕೇರಳದಲ್ಲಿ ಐತಿಹಾಸಿಕ ನಡೆ: ದೇಗುಲಗಳಿಗೆ ಪರಿಶಿಷ್ಟ ಸಮುದಾಯದ ಅರ್ಚಕರ ನೇಮಕ

  • ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಒಟ್ಟು 133 ಬ್ರಾಹ್ಮಣೇತರ ಅರ್ಚಕರ ನೇಮಕ

ತಿರುವನಂತಪುರ:  ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಸದ್ಯದಲ್ಲೇ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಅರ್ಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಟಿಡಿಬಿ ಸ್ವಾಯತ್ತ ದೇವಸ್ಥಾನ ಮಂಡಳಿಯಾಗಿದ್ದು, ಶಬರಿಮಲೆ ಅಯ್ಯಪ್ಪ ದೇಗುಲ ಸೇರಿದಂತೆ ರಾಜ್ಯದಲ್ಲಿ 1,200 ದೇಗುಲಗಳ ನಿರ್ವಹಣೆ ಮಾಡುತ್ತಿದೆ. ಈ ದೇಗುಲಗಳಲ್ಲಿ ಅರೆಕಾಲಿಕ ಅವಧಿಗೆ ಪರಿಶಿಷ್ಟ ಜಾತಿಗೆ ಸೇರಿದ 18 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದಂತೆ ಒಬ್ಬರನ್ನು ಮಂಡಳಿ ಅರ್ಚಕರನ್ನಾಗಿ ನಿಯೋಜಿಸಲಿದೆ. ಈ ಮೂಲಕ ಕೇರಳದ ದೇವಸ್ಥಾನಗಳಲ್ಲಿ ಪರಿಶಿಷ್ಟ ಸಮುದಾಯದವರಿಗೂ ಪೂಜೆ ನೆರವೇರಿಸುವುದಕ್ಕೆ ಅವಕಾಶ ದೊರೆತಂತಾಗುತ್ತದೆ. ಇದೊಂದು ಐತಿಹಾಸಿಕ ನಿರ್ಧಾರ ಎನ್ನಲಾಗಿದೆ.

ಈ ವಿಚಾರವನ್ನು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಅವರೂ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ನೇಮಕಾತಿಯಡಿಯಲ್ಲಿ ಪರಿಶಿಷ್ಟ ಸಮುದಾಯದವರು ಅರೆಕಾಲಿಕ ಅರ್ಚಕರಾಗಿ ದೇವಸ್ಥಾನಗಳಿಗೆ ನೇಮಕವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2017ರಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಪ್ರಕಟಿಸಿದ ರ‍್ಯಾಂಕ್ ಪಟ್ಟಿಯಲ್ಲಿ 310 ಜನರು ಅರೆಕಾಲಿಕ ಅರ್ಚಕರ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಅದರಲ್ಲಿ ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳು ಇರಲಿಲ್ಲ. ಬಳಿಕ ವಿಶೇಷ ಅಧಿಸೂಚನೆ ಹೊರಡಿಸಲಾಯಿತು. ಎಸ್‌.ಟಿ ಸಮುದಾಯದವರಿಗೆ 4 ಹುದ್ದೆಗಳು ಖಾಲಿ ಇದ್ದರೂ ಕೇವಲ ಒಂದು ಅರ್ಜಿ ಸಲ್ಲಿಕೆಯಾಗಿತ್ತು ಎಂದು ಹೇಳಿದ್ದಾರೆ.

ಎಡಪಂಥೀಯ ವಿಚಾರಧಾರೆ ಹೊಂದಿರುವ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ನೇಮಕಾತಿ ಮಂಡಳಿಯನ್ನು ಪುನರ್‌ರಚಿಸಲಾಯಿತು. ಆಗ ತಿರುವಾಂಕೂರು, ಕೊಚ್ಚಿ, ಮಲಬಾರ್‌ ದೇವಸ್ವಂ ಬೋರ್ಡ್‌ಗಳಿಗೆ 815 ಮಂದಿ ಆಯ್ಕೆಯಾಗಿದ್ದರು. ಸದ್ಯ ಅಧಿಕಾರದಲ್ಲಿರುವ ಸರ್ಕಾರದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಒಟ್ಟು 133 ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *