- ತ್ರಿಕ್ಕಕರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್ ಅಭ್ಯರ್ಥಿ
- 25,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು
ತಿರುವನಂತಪುರ: ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್ ಗೆಲುವು ದಾಖಲಿಸಿದ್ದಾರೆ. ಗೆಲುವಿನ ಅಂತರ 22 ಸಾವಿರ ಮತಗಳಾಗಿವೆ.
ಕಾಂಗ್ರೆಸ್ ಶಾಸಕ ಪಿ.ಟಿ. ಥಾಮಸ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ಘೋಷಣೆಯಾಗಿತ್ತು. ದಿವಂಗತ ಶಾಸಕರ ಪತ್ನಿ ಉಮಾ ಥಾಮಸ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆಡಳಿತಾರೂಢ ಎಡರಂಗ ಸರ್ಕಾರದಿಂದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದಿಂದ ಹೃದ್ರೋಗ ತಜ್ಞ ಡಾ. ಜೋ ಜೋಸೆಫ್ ಅವರನ್ನು ಸ್ಪರ್ಧೆಗಿಳಿಸಿತ್ತು.
ಬಿಜೆಪಿ ಪಕ್ಷವು ಎ.ಎನ್. ರಾಧಾಕೃಷ್ಣನ್ ರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್ ತನ್ನ ಪ್ರತಿಸ್ಪರ್ಧಿ ಡಾ.ಜೋ ಜೋಸೆಫ್ ಅವರನ್ನು 25,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ವಿಧಾನಸಭಾ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮತ ಎಣಿಕೆಯ ಆರಂಭದಿಂದಲೇ ಉಮಾ ಥಾಮಸ್ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಸುತ್ತಿನಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡು, 2021 ರಲ್ಲಿ ತನ್ನ ಪತಿ ಪಿ.ಟಿ. ಥಾಮಸ್ ದಾಖಲಿಸಿದ್ದ ಜಯದ ದಾಖಲೆಯನ್ನು ಮುರಿದಿದ್ದಾರೆ. ಈ ಚುನಾವಣೆಯಲ್ಲಿ 1.96 ಲಕ್ಷ ಮತದಾರರ ಪೈಕಿ 1.35 ಲಕ್ಷ ಮಂದಿ ಮತದಾನ ಮಾಡಿದ್ದು, ಶೇ.68.77ರಷ್ಟು ಮತದಾನವಾಗಿದೆ ಎಂಬುವುದು ತಿಳಿದುಬಂದಿದೆ. ಉಮಾ ಥಾಮಸ್ 72,000 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಸಿಪಿಐ(ಎಂ)ನ ಜೋಸೆಫ್ 47,000 ಮತ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವೆದಲ್ಲಿ ಮರಳಿ ಅಧಿಕಾರವನ್ನು ದಾಖಲಿಸಿ ಇತಿಹಾಸವನ್ನು ನಿರ್ಮಿಸಿತ್ತು. ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ನಡುವೆ ಪ್ರಬಲವಾದ ಸ್ಪರ್ಧಿ ಏರ್ಪಟ್ಟಿತ್ತು.