‘ಅಮ್ಮ’ ಪ್ರಶಸ್ತಿ ವಿಜೇತ ‘ರಂಗಕೈರಳಿ’

 

ಒಟ್ಟಿನಲ್ಲಿ ಪ್ರಸ್ತುತ ಕೃತಿ ಚಿಕ್ಕದಾದರೂ, ಕನ್ನಡಕ್ಕೆ ಒಂದಿಷ್ಟು ಹೊಸ ಸಂದೇಶವನ್ನು ನೀಡಿದೆ. ನಾಟಕ, ಸಂಗೀತ, ಮತ್ತು ಸಮಗ್ರ ಕಲಾಪ್ರಕಾರಗಳ ಉಳಿವು ಮತ್ತು ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸರಕಾರವೂ ಅಲ್ಲಿಯ ಸ್ಥಳೀಯ ಸಂಸ್ಕೃತಿಯ ಉಳಿವಿಗಾಗಿ ಸಂಸ್ಕೃತಿ ಇಲಾಖೆಯ ಮೂಲಕ ಮಾಡುತ್ತಿರುವ ರಚನಾತ್ಮಕ ಕೆಲಸಗಳಾಗಲೀ, ರಂಗ ಸಂಘಟನೆಗಳ ಚಟುವಟಿಕೆಗಳಾಗಲಿ, ಸ್ವಾಯತ್ತ ಕಲಾ ಸಂಘಟನೆಗಳಾಗಲೀ ಸಮರ್ಪಣಾ ಭಾವದಿಂದ ದುಡಿಯುತ್ತಿರುವುದು ನಮಗೆ ಮಾದರಿಯಾಗಬೇಕು.. .. ನಮ್ಮ ಸರಕಾರದ ಕಾಟಾಚಾರದ ಸಾಂಸ್ಕೃತಿಕ ಸಾಹಿತ್ಯಿಕ ಲಲಿತಕಲೆಗಳ ಜಾತ್ರೆಗೆ ಕೇರಳದ ಸಂಸ್ಕೃತಿ ಪ್ರೀತಿ ಮತ್ತು ಇಚ್ಛಾಶಕ್ತಿಯ ಪ್ರಭಾವ ಬೀಳುವಂತಾದರೆ, ನಮ್ಮ ಕಲೆಗಳೂ ಉಳಿದು ಬಾಳಿಯಾವು……….

ಸುಬ್ರಾಯ ಮತ್ತೀಹಳ್ಳಿ.

ಆಧುನಿಕ ಬದುಕಿನ ಆತುರದ ಕ್ಷಣದಲ್ಲಿ, ಮಾಹಿತಿ ಮನರಂಜನೆಯ ಮಾಯಾ ಪ್ರವಾಹದಲ್ಲಿ, ಮೌನದ ಧ್ಯಾನದ ಆಪ್ತ ಓದಿನ ಸುಖವನ್ನೇ ಸಾಮೂಹಿಕವಾಗಿ ಕಳೆದುಕೊಳ್ಳುತ್ತಿದ್ದೇವೆಯೇನೋ ಅನ್ನಿಸುತ್ತಿರುವಾಗಲೇ ಕೋವಿಡ್ ಸಂಕಟ ಧುತ್ ಎಂದು ಮನೋಭಿತ್ತಿಯ ಮೇಲೆ ಆಕ್ರಮಿಸಿ ಎಲ್ಲೆಲ್ಲೂ ಘೋರ ತಲ್ಲಣವನ್ನು ಸೃಷ್ಟಿಸಿದ್ದ ನಿರ್ವಾತ ಕ್ಷಣದಲ್ಲಿ, ಆಕರ್ಷಕ ಮುದ್ರಣ, ಕಣ್ಸೆಳೆಯುವ ಕಲಾತ್ಮಕ ವರ್ಣಮಯ ಮುಖಪುಟ, ಮತ್ತು ಪುಟ್ಟ ಪುಟ್ಟ ನುಡಿಗುಚ್ಛಗಳ, ಚಿಕ್ಕಪುಸ್ತಕವೊಂದು ಕಣ್ಣೆದುರು ಪ್ರತ್ಯಕ್ಷಗೊಂಡು ಮುದನೀಡಿತು. ಹೊಚ್ಚ ಹೊಸ ಆಹ್ಲಾದಕರ ಜಗತ್ತೊಂದನ್ನು ಅಂಗೈಯಲ್ಲಿ ಇಟ್ಟು ನಗು ಬೀರಿತು.

ಪ್ರಸ್ತುತ ಕೃತಿ ಮತ್ಯಾರದ್ದೂ ಅಲ್ಲ. ನಮ್ಮ ಶಿರಸಿಯಲ್ಲಿಯೇ ಎರಡು ದಶಕಗಳ ಕಾಲ ಬಿ.ಎಸ್.ಎನ್.ಎಲ್ ‌ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತ, ತಮ್ಮ ಬಿಡುವಿನ ಎಲ್ಲ ಸಮಯವನ್ನೂ ರಂಗಚಟುವಟಿಕೆಗಳಿಗೆ ಮೀಸಲಾಗಿಟ್ಟು, ರಂಗಸಂಚಲನ ಮೂಡಿಸಿದ್ದ “ಕಿರಣಭಟ್” ರವರದ್ದು. ರಂಗತಜ್ಞ ವಿ.ಟಿ. ಹೆಗಡೆಯವರ ಕೆಲವು ಆಧುನಿಕ ರಂಗಪ್ರಯೋಗಗಳಾಗಿ ಹಲವು ದಶಕಗಳೇ ಕಳೆದುಹೋಗಿದ್ದವು. ಪ್ರಾಯೋಗಿಕ ರಂಗಚಟುವಟಿಕೆಯ ದೃಷ್ಟಿಯಲ್ಲಿ, ಶಿರಸಿ ನಿರ್ವಾತವಾಗಿತ್ತು. ತೊಂಭತ್ತರ ದಶಕದಲ್ಲಿ ಉದ್ಯೋಗ ನಿಮಿತ್ತ ಶಿರಸಿಗೆ ಆಗಮಿಸಿದ ಕಿರಣ ಭಟ್ಟರು, ರಂಗಸಂಗವೆಂಬ ಸ್ನೇಹಿತರ, ಕಲಾಸಕ್ತರ ತಂಡವೊಂದನ್ನು ಕಟ್ಟಿ, ತಮ್ಮಬಿಡುವಿನ ಸಮಯಕ್ಕೆ, ರಂಗಚಟುವಟಿಕೆಯ ರಂಗುರಂಗಿನ ಪೋಷಾಕು ತೊಡಿಸಿದ್ದು ಈಗ ಇತಿಹಾಸ. ಹತ್ತು ಹಲವು ಗಂಭೀರ ರಂಗಪ್ರಯೋಗಗಳೊಂದಿಗೆ , ಮಕ್ಕಳ ರಂಗಭೂಮಿಯನ್ನೂ ಹುಟ್ಟುಹಾಕಿ, ನೂರಾರು ಮಕ್ಕಳನ್ನು ರಂಗಭೂಮಿಗೆ ಆಕರ್ಷಿಸಿದ್ದು ಅವರ ಬಹುಮುಖ್ಯ ಸಾಧನೆಯೆನ್ನಿಸಿದೆ.

ಕಿರಣ ಭಟ್

ಅಧ್ಯಯನ, ಅನುಷ್ಠಾನ, ಮತ್ತುತಜ್ಞರ ಸಾಮೀಪ್ಯ, ಜೊತೆಗೆ ಹಲವು ರಾಜ್ಯಗಳ ವಿವಿಧ ರಂಗಪ್ರಯೋಗಗಳ ವೀಕ್ಷಣೆ, ಕಿರಣ ಭಟ್ಟರನ್ನು ಪ್ರತಿಭಾವಂತ ರಂಗ ಪರಿಣತರನ್ನಾಗಿ ರೂಪಿಸಿದೆ ಎಂದು ತಿಳಿದಿದ್ದೇನೆ. ತೊಂಭತ್ತರ ದಶಕದಲ್ಲಿ ಅವರು ಕೈಗೊಂಡ ಪಾಠನಾಟಕ ಸರಣಿ, ಆಕಾಲದ ಅತ್ಯಂತ ಅಪರೂಪದ ಪರಿಕಲ್ಪನೆಯಾಗಿತ್ತು. ಶಿಕ್ಷಣದಲ್ಲಿ ರಂಗಭೂಮಿಯ ಪ್ರಾಮುಖ್ಯತೆ ಎಷ್ಟೆಂದು, ಇನ್ನೂ ಮನದಟ್ಟಾಗಿರದ ಕಾಲದಲ್ಲಿ ಪಾಠನಾಟಕಗಳು, ರಾಜ್ಯದಲ್ಲಿ ಕುತೂಹಲ ಮೂಡಿಸಿದ್ದವು. ಮಕ್ಕಳ ರಂಗಭೂಮಿಗೊಂದು ಹೊಸ ಆಯಾಮವನ್ನೇ ನೀಡಿತ್ತು.
ಪ್ರಸ್ತುತ ನಮ್ಮೆದುರಿರುವʻರಂಗಕೈರಳಿʼಕೃತಿಯನ್ನು ಗಮನಿಸಿದಾಗ, ಕಿರಣ ಭಟ್ಟರು ತಮ್ಮ ಸುದೀರ್ಘ ರಂಗಾನುಭವಗಳನ್ನು ಅಕ್ಷರದಲ್ಲಿ ದಾಖಲಿಸಲು ಕೊಂಚ ತಡಮಾಡಿದರೇನೋ ಎಂದೆನ್ನಿಸುತ್ತಿದೆ.  ಹೇಗೇ ಇರಲಿ, ಅವರ ಕೇರಳ ರಾಜ್ಯದ ರಂಗಾನುಭವಗಳ, ಸೂಕ್ಷ್ಮ ಸರಳ ಸುಂದರ ಕೃತಿಯೊಂದು ಈ ವರ್ಷ ಬೆಳಕು ಕಂಡಿದೆ.

ಕೇರಳ, ಕಮ್ಯುನಿಷ್ಟ್ ಚಳವಳಿಗೋ, ಅಸಂಖ್ಯಾತ ದೇವಾಲಯಗಳಿಗೋ ಮಾತ್ರ ಪ್ರಸಿದ್ಧವಲ್ಲ. ಅದಕ್ಕೂ ಮೊದಲು ಅಲ್ಲಿಯ ವೈಶಿಷ್ಟ್ಯಪೂರ್ಣ ಸಂಸ್ಕೃತಿ, ವೈವಿಧ್ಯಮಯ ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ದೇಶದಲ್ಲಿ ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಈವರೆಗೂ ಕಾಯ್ದುಕೊಂಡಿದೆ. ಆ ಬಗೆಗೆ ಸಾಕಷ್ಟು ಅಧ್ಯಯನಗಳೂ ಆಗಿವೆ. ಆದರೆ, ಆಧುನಿಕ ಪ್ರಾಯೋಗಿಕ ರಂಗ ಚಳವಳಿಯೂ ಅಷ್ಟೇ ಸುಪ್ರಸಿದ್ಧವಾದುದು ಎಂಬ ಸಂಗತಿ ಮಾತ್ರ ಕೇರಳದಿಂದ ಹೊರರಾಜ್ಯಕ್ಕೆ ಇನ್ನೂ ತಲುಪಿಲ್ಲ. ಕಿರಣ ಭಟ್ ಕೇರಳ ರಂಗ ಕಿರಣಗಳನ್ನು ತಮ್ಮ ಕೃತಿ ಕಿಟಕಿಯ ಮೂಲಕ ಕನ್ನಡ ಸಹೃದಯರೆದುರು ಬೀರುವ ಪ್ರಯತ್ನಗೈದಿರುವುದು ಖುಷಿನೀಡುವ ಸಂಗತಿ.

ಅವರೇ ಹೇಳಿಕೊಂಡಂತೆ ಇದೊಂದು ರಂಗಪ್ರವಾಸ ಕಥನ. ಕೇರಳದ ಸಮೃದ್ದ ಶ್ರೀಮಂತ ರಂಗಭೂಮಿಯ ತೋರಣ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಭಟ್ಟರು ತಮ್ಮ ಪ್ರಾರಂಭದ ನುಡಿಯಲ್ಲಿ, “ಈ ಬಾರಿ ಕೇರಳವನ್ನೆಲ್ಲ ಸುತ್ತಾಡಿ ಒಂದಿಷ್ಟು ಸಾಂಸ್ಕೃತಿಕ ಅನುಭವ ಗಳಿಸೋದು ನನ್ನ ಆಸೆ. ನನ್ನ ಬಯಕೆ ಹುಸಿಯಾಗಲಿಲ್ಲ. ಅಲ್ಲಿದ್ದ ಎರಡು ವರ್ಷಗಳಲ್ಲಿ ಸಾಕಷ್ಟು ನಾಟಕಗಳನ್ನು ನೋಡಿದೆ. ಸಂಗೀತ ಕೇಳಿದೆ. ಜಾನಪದ ಉತ್ಸವಗಳಲ್ಲಿ ಪಾಲ್ಗೊಂಡೆ. ಮಲಯಾಳೀ ಮಕ್ಕಳ ಜೊತೆಗೆ ರಂಗಭೂಮಿಯ ಕೆಲಸಮಾಡಿದೆ. ನೋಡಿದ್ದನ್ನೆಲ್ಲ ಫೋಟೋ ಹೊಡೆದುಕೊಳ್ಳುತ್ತ ಸ್ವಲ್ಪ ವಿವರಗಳೊಂದಿಗೆ ನಿರಂತರವಾಗಿ ಫೇಸ್ ಬುಕ್ ನಲ್ಲಿ ದಾಖಲಿಸ್ತಾ ಬಂದೆ. ನಾಟಕಗಳ ಒಂದೊಂದು ಚಿತ್ರವೂ ರಂಗಭೂಮಿಯ ವಿದ್ಯಾರ್ಥಿಗೆ ಕಲಿಕೆಯ ಟೂಲ್‌ ಅನ್ನುವುದು ನನ್ನ ಅನಿಸಿಕೆ ” ಎಂದು ಹೇಳಿಕೊಂಡಂತೆ  ಬರಹವನ್ನು ಪ್ರಾರಂಭಿಸುವಾಗ ಅದು ಕೇವಲ ಆ ಕ್ಷಣದ ಡಿಜಿಟಲ್ ‌ಪ್ರತಿಕ್ರಿಯೆಯಾಗಿತ್ತು. ಆದರೆ ಆ ಎಲ್ಲ ಬರಹಗಳು ತನ್ನ ಅಪರೂಪದ ಗುಣಗಳಿಂದ ಒಂದು ಪುಟ್ಟ ಕೃತಿಯಾಗಿಯೇ ದಾಖಲುಗೊಂಡಿತು.

ಅವರ ಫೇಸ್ ಬುಕ್ ಪ್ರಕ್ರಿಯೆ ಅವಧಿಯ ಜಿ.ಎನ್ ಮೋಹನರ ಗಮನಕ್ಕೆ ಬಂದಾಗ ತಮ್ಮ ಬ್ಲಾಗಿನ ಬಾಗಿಲು ತೆರೆದು, ಬರೆಯಲು ಪ್ರೇರೇಪಿಸುತ್ತಾರೆ. ಅಸಂಖ್ಯಾತ ಕುತೂಹಲಿಗಳ ಗಮನಕ್ಕೆ, ಕಿರಣರ ನುಡಿಚಿತ್ರಗಳು ಬೀಳತೊಡಗಿದಾಗ, ಪುಸ್ತಕವನ್ನಾಗಿಸುವ ವಿಚಾರ ಮೋಹನರವರಲ್ಲಿ ಮೂಡಿ, ಇದೀಗ ಮುದ್ರಿತ ರಂಗಾನುಭವ ನಮ್ಮೆದುರಿಗಿದೆ.

ಕೃತಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರಾಗುತ್ತಿರುವ ರಂಗ ನಿರ್ದೇಶಕ ಶ್ರೀಪಾದ ಭಟ್‌ ತಮ್ಮ ಸುದೀರ್ಘ ಮುನ್ನುಡಿಯಲ್ಲಿ,
“ಕಿರಣನ ಬರಹದಲ್ಲಿ ಆಡುಮಾತಿನ ಉತ್ಸಾಹೀ ಲಯವಿದೆ. ಕ್ಲುಪ್ತವಾಗಿ ಹೇಳಬಲ್ಲ ಗುಣವಿದೆ. ಕನ್ನಡಾಂಗ್ಲ ಪದಗಳನ್ನು ಬೆಸೆಯುವಲ್ಲಿ ಕೈಲಾಸಂ ಮೊಮ್ಮಗ ಈತ. ರಂಗಪ್ರಯೋಗದ ವಿಶ್ಲೇಷಣೆಯಲ್ಲೂ  ಕೆಲ ಹೊಸಪದಗಳನ್ನು ಟಂಕಿಸಿದ್ದಾನೆ. ಲೋಕಲ್‌ಟ್ರೇನ್‌ ತರಹ ಎಲ್ಲಿ ಬೇಕಿದ್ದರೂ ಹತ್ತಿಳಿಯಬಹುದಾದ್ದ ಸೌಲಭ್ಯ ಇಲ್ಲಿಯ ಬರಗಹಗಳಿಗಿದೆ.” ಎಂದು ಬೆನ್ನುತಟ್ಟುತ್ತಲೇ, “ನಾಟಕಗಳ ಕುರಿತ ವಿಶ್ಲೇಷಣೆ, ಮತ್ತು ತಾಂತ್ರಿಕ ವಿವರಗಳು, ಇನ್ನಷ್ಟು ಬೇಕೆನಿಸುತ್ತವೆ” ಎಂಬ ಎಚ್ಚರವನ್ನೂ ಮೂಡಿಸುತ್ತಾರೆ.

ಹಾಗೆಂದು ಕೃತಿಯ ಉದ್ದೇಶ ಕೇರಳ ರಂಗಭೂಮಿಯ ಅಧ್ಯಯನವಲ್ಲ. ವಿಮರ್ಶೆಯಲ್ಲ. ಲೇಖಕರು ಎರಡು ವರ್ಷಗಳ ಕಾಲ ತಾವು ಕಂಡ ಅಸಂಖ್ಯಾತ ರಂಗಪ್ರಯೋಗಗಳಲ್ಲಿ, ಆಕರ್ಷಕವಾದ, ಮನಸ್ಸನ್ನು ತಟ್ಟಿ ಮುಟ್ಟಿದ ನಾಟಕಗಳ ವೈಶಿಷ್ಟ್ಯವನ್ನು, ಅವುಗಳ ರಸಸ್ಥಳವನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುವುದೇ ಆಗಿದೆ. ಅದರಲ್ಲಿಯೂ ಫೇಸ್ ಬುಕ್ಕಿನ ಮಿತಿಯಲ್ಲಿ, ನಂತರ ವಿದ್ಯುನ್ಮಾನ ಪತ್ರಿಕೆಯ ಅಂಕಣದ ಚೌಕಟ್ಟಿನಲ್ಲಿ ಹೇಳಿದ ಮಾತುಗಳೇ ಹೂಬೇ ಹೂಬಾಗಿ ಕೃತಿಯಲ್ಲಿಯೂ ಇಳಿದು ಬಂದುದರಿಂದ, ಅವರು ಕಟ್ಟಿಕೊಡುವ ಹೊಚ್ಚ ಹೊಸ ರಂಗ ಚಿತ್ರಣಗಳು, ಒಮ್ಮೆ ಖುಷಿ ನೀಡುತ್ತವೆ. ಆದರೆ ಓದುಗನ ಕುತೂಹಲವನ್ನು ತಣಿಸುವುದಿಲ್ಲ. ಇನ್ನಷ್ಟು ರಸಪೂರ್ಣ ವಿವರಗಳನ್ನು ಕೊಟ್ಟು ಆ ಕೊರತೆಯನ್ನು ನಿವಾರಿಸಬಹುದಿತ್ತು. ಆದರೂ ಕೃತಿ ಯಶ ಕಾಣುವುದು ಅವರೇ ಕ್ಲಿಕ್ಕಿಸಿದ ಆಕರ್ಷಕ ಭಾವಚಿತ್ರಗಳಿಂದ. ಸರಳ ಸುಂದರ ಭಾಷಾಶೈಲಿಯಿಂದ. ಮತ್ತು ಅಚ್ಚುಕಟ್ಟಾದ ಪುಸ್ತಕ ರೂಪದಿಂದ.

ವಿವರ ಚಿಕ್ಕದಾದರೂ ಅಚ್ಚಳಿಯದೇ ಮನಸ್ಸಿನಲ್ಲುಳಿಯುವ ಹತ್ತು ಹಲವು ನಾಟಕಗಳ ಚಿತ್ರಣ ಪುಸ್ತಕದ ತುಂಬೆಲ್ಲಾ ಕಾಣತೊಡಗುತ್ತವೆ. “ಅದೊಂದು ಮಾಯಾಬಜಾರು”ನುಡಿಚಿತ್ರಣದಲ್ಲಿ, ಪೌರಾಣಿಕ ನಾಟಕವೊಂದರ ಕಥಾನಾಯಕಿ ವೈಶಾಲಿಯ ಪರಮ ದುರಂತವೊಂದು ಮನಸ್ಸನ್ನುಕಲಕಿದರೆ, ಅರ್ಧಕೋಟಿ ವೆಚ್ಚದ “ಮ್ಯಾಕ್‌ಬೆತ್” ನಾಟಕ ಸಾಂಪ್ರದಾಯಿಕ ರಂಗದಲ್ಲಿ ಬೆರಗು ಮೂಡಿಸುತ್ತದೆ.
ಕೇರಳದ ಪ್ರಾಯೋಗಿಕ ರಂಗಭೂಮಿ ತನ್ನ ಆಧುನಿಕ ನಾಟಕಗಳಲ್ಲಿ ದೇಶದ ಉಳಿದೆಲ್ಲ ರಾಜ್ಯಕ್ಕೂ ಮಾದರಿಯಾಗಿ ಬೆಳೆಯುತ್ತಿದ್ದಂತೇ, ಸಾಂಪ್ರದಾಯಿಕ ರಂಗವನ್ನು ಅಲಕ್ಷಿಸುತ್ತಿಲ್ಲ. ಸಮಾನಾಂತರವಾಗಿ ಅವೆರಡೂ ಸಹಬಾಳ್ವೆ ನಡೆಸುವಲ್ಲಿ ಅಲ್ಲಿಯ ರಂಗಪ್ರಿಯರು, ಮತ್ತು ಸರಕಾರಗಳ ಪ್ರಾಮಾಣಿಕ ಬೆಂಬಲವಿದೆ, ಎಂಬುದನ್ನು ಲೇಖಕರು ಸೂಕ್ಷ್ಮವಾಗಿ ಗುರುತಿಸುತ್ತಾರೆ.

ನೋಬೆಲ್ ವಿಜೇತ ಲೇಖಕ “ಅರ್ನೆಸ್ಟ್‍ ಹೆಮಿಂಗ್‌ವೇ”ಯ “The  Old man  and the  Sea’’ ಕೃತಿಯನ್ನಾಧರಿಸಿದ “ಹಾಯ್‌ ಹೆಮಿಂಗ್‌ವೇ” ನಾಟಕ ಪ್ರಯೋಗ ಕುತೂಹಲ ಹುಟ್ಟಿಸುತ್ತದೆ. ಆದರೆ ರಂಗದಲ್ಲಿ ಹೆಮಿಂಗ್‌ವೇ ಹೇಗೆ ಮಿಂಚಿದ ಎಂಬ ಕುತೂಹಲ ತಣಿಯದೇ ನಿರಾಶೆಯಾಗುತ್ತದೆ. ಏಕೆಂದರೆ ಪ್ರಸ್ತುತ ಕಾದಂಬರಿಯಲ್ಲಿ ತಿಮಿಂಗಲಕ್ಕೂ ಮುದುಕ ಮೀನುಗಾರನಿಗೂ ನಡುವೆ ಬದುಕಿನ ಸೋಲು ಗೆಲುವು ಮತ್ತು ಸಾವಿನ ಬಗೆಗಿನ ತಾತ್ವಿಕ ನೆಲೆಯಲ್ಲಿ ನಡೆಯುವ ವಾಗ್ವಾದ ಸದಾಕಾಡುವಂಥದ್ದು. ಮೀನುಗಾರ ಮುದುಕ ಒಂಟಿಯಾಗಿ ವಿಶಾಲ ಸಾಗರದ ನಡುವೆ, ತಿಮಿಂಗಿಲದ ಬೇಟೆಯಾಡಿ ಗೆದ್ದರೂ, ದಾರುಣ ಸಾವನ್ನಪ್ಪುವ ದೃಶ್ಯ ಮಾತ್ರ ಎಂದೂ ಮರೆಯಲಾಗದ್ದಾಗಿದೆ.

ಮತ್ತೊಂದು ಕುತೂಹಲಕಾರಿ ನಾಟಕ “ಅಡಕ್ಕಳಯಿಲ್‌ನಿನ್ನುಂ ಅರಂಗೇಟ್ಟತ್ತೇಕ್” ಕನ್ನಡಕ್ಕೆ ವಿಚಿತ್ರ ಹೆಸರಾಗಿ ಕಂಡರೂ, ನಾಟಕವೊಂದು ಸಾಮಾಜಿಕ ಅನಿಷ್ಟವೊಂದರ ವಿರುದ್ಧ ಒಂದು ಚಳವಳಿಯಾಗಿ ರೂಪುಗೊಂಡು, ಅನಿಷ್ಟ ನಿವಾರಿಸಿದ ಇತಿಹಾಸ ಬೆರಗು ಮೂಡಿಸುತ್ತದೆ.
ಒಟ್ಟಿನಲ್ಲಿ ಪ್ರಸ್ತುತ ಕೃತಿ ಚಿಕ್ಕದಾದರೂ, ಕನ್ನಡಕ್ಕೆ ಒಂದಿಷ್ಟು ಹೊಸ ಸಂದೇಶವನ್ನು ನೀಡಿದೆ. ನಾಟಕ, ಸಂಗೀತ, ಮತ್ತು ಸಮಗ್ರ ಕಲಾಪ್ರಕಾರಗಳ ಉಳಿವು ಮತ್ತು ಬೆಳವಣಿಗೆಗಳ ಹಿನ್ನೆಲೆಯಲ್ಲಿ,ಸರಕಾರವೂ ಅಲ್ಲಿಯ ಸ್ಥಳೀಯ ಸಂಸ್ಕೃತಿಯ ಉಳಿವಿಗಾಗಿ ಸಂಸ್ಕೃತಿ ಇಲಾಖೆಯ ಮೂಲಕ ಮಾಡುತ್ತಿರುವ ರಚನಾತ್ಮಕ ಕೆಲಸಗಳಾಗಲೀ, ರಂಗ ಸಂಘಟನೆಗಳ ಚಟುವಟಿಕೆಗಳಾಗಲಿ, ಸ್ವಾಯತ್ತ ಕಲಾ ಸಂಘಟನೆಗಳಾಗಲೀ ಸಮರ್ಪಣಾ ಭಾವದಿಂದ ದುಡಿಯುತ್ತಿರುವುದು ನಮಗೆ ಮಾದರಿಯಾಗಬೇಕು. ಪ್ರತಿವರ್ಷ ಅಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ ನಾಟಕ ಸಂಗೀತ ಸಮ್ಮೇಳನಗಳಂತೇ ವ್ಯವಸ್ಥಿತವಾಗಿ ನಮ್ಮ ರಾಜ್ಯದಲ್ಲೂ ನಡೆಯುವಂತಾಗಲು, ನಮ್ಮ ಸರಕಾರಗಳೂ ಮನಸ್ಸು ಮಾಡಬೇಕು. ನಮ್ಮ ಸರಕಾರದ ಕಾಟಾಚಾರದ ಸಾಂಸ್ಕೃತಿಕ ಸಾಹಿತ್ಯಿಕ ಲಲಿತಕಲೆಗಳ ಜಾತ್ರೆಗೆ ಕೇರಳದ ಸಂಸ್ಕೃತಿ ಪ್ರೀತಿ ಮತ್ತು ಇಚ್ಛಾಶಕ್ತಿಯ ಪ್ರಭಾವ ಬೀಳುವಂತಾದರೆ, ನಮ್ಮ ಕಲೆಗಳೂ ಉಳಿದು ಬಾಳಿಯಾವು……….

ಪ್ರಸ್ತುತ ಕೃತಿಯಲ್ಲಿ ಕೃತಿಕಾರರು ಮನೋಜ್ಞವಾಗಿ ವರ್ಣಿಸಿದ ಇನ್ನೊಂದು ಘಟನೆಯನ್ನು ಪ್ರಸ್ತಾಪಿಸಲೇ ಬೇಕು. ಐವತ್ತು ಅರವತ್ತು ವರ್ಷಗಳ ಹಿಂದೆ ಕೇರಳದ ಕುಗ್ರಾಮವೊಂದರಿಂದ, ಒಬ್ಬ ಹೆಣ್ಣುಮಗಳು ಮದುವೆಯಾಗಿ, ದೂರದ ಕರ್ನಾಟಕದ ಕುಗ್ರಾಮವೊಂದಕ್ಕೆ ಬರುತ್ತಾಳೆ. ಅವಳು ಇದೀಗ ಹಣ್ಣು ಹಣ್ಣು ಮುದುಕಿ. ಇಲ್ಲಿ ಬಂದ ಮೇಲೆ ತನ್ನ ತವರನ್ನು ಒಂದುಬಾರಿಯೂ ನೋಡಿಲ್ಲ. ಅಲ್ಲಿಯ ಸಂಪರ್ಕದಿಂದಲೇ ದೂರವಾಗಿ, ಅಲ್ಲಿಯ ಭಾಷೆಯಿಂದಲೂ ದೂರವಾಗಿದ್ದಳು. ಆದರೂ ತವರಿನ ಕನಸು ಮಾತ್ರ ಅಚ್ಚಳಿಯದೇ ಉಳಿದಿತ್ತು. ಮುದುಕಿಯ ಮಕ್ಕಳು ಲೇಖಕರ ದೂರದ ಸಂಬಂಧಿಗಳು. ಕಿರಣ ಭಟ್ಟರು ಕೇರಳದಲ್ಲಿದ್ದಾರೆಂಬ ವರ್ತಮಾನ ತಿಳಿದ ಕೂಡಲೇ ಅವರನ್ನು ಸಂಪರ್ಕಿಸಿ ತಮ್ಮ ತಾಯಿಯ ತವರನ್ನು ಶೋಧಿಸಿಕೊಡಲು ವಿನಂತಿಸಿಕೊಳ್ಳುತ್ತಾರೆ. ಲೇಖಕರು ತಿಂಗಳು ಕಾಲ ವಿಚಾರಿಸಿ ಪತ್ತೆ ಹಚ್ಚಿ ತವರಿನವರನ್ನು ಉತ್ತರಕನ್ನಡದ ಹಳ್ಳಿಗೆ ಕಳುಹಿಸುತ್ತಾರೆ. ತನ್ನ ತವರು ತನಗೆ ದೊರಕಿದ ವೃದ್ಧ ಹೆಣ್ಣುಮಗಳ ಕಣ್ಣಲ್ಲಿ ಆನಂದ ಭಾಷ್ಪವನ್ನು ಕಂಡ ಕಿರಣಭಟ್ಟರಿಗೆ ಧನ್ಯತೆಯ ಭಾವ ಮೂಡುತ್ತದೆ.

ಪ್ರಸ್ತುತ ಘಟನೆ ರಂಗಭೂಮಿಗೆ ಸಂಬಂಧಿಸದಿದ್ದರೂ, ರಂಗ ಕಾರ್ಯಾಚರಣೆಗಳ ವೀಕ್ಷಣೆಗಾಗಿ ತಿರುಗಾಡುತ್ತಿರುವಾಗಲೇ ಅವಳ ತವರಿನ ಮಾಹಿತಿ ದೊರಕಿದ್ದು, ದೂರವಾಗಿದ್ದ ಮನುಷ್ಯ ಸಂಬಂಧ ಮತ್ತೆ ಬೆಸೆಯುವಂತಾಗಿದ್ದು, ನಿಜಕ್ಕೂ ಅಚ್ಚರಿಪಡುವಂಥ ಸಂದರ್ಭವಾಗಿದೆ. ಎಷ್ಟೆಂದರೂ ರಂಗಕ್ರಿಯೆ ಎ0ದರೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಅಲ್ಲವೇ…?
ಮುದ್ದಾದ ರಂಗಚಿತ್ರಣ ನಮ್ಮ ಕೈಲಿದೆ. ಸಾಕಷ್ಟು ಪ್ರಾಯೋಗಿಕ ಅನುಭವ ಕೃತಿಕಾರರ ಮನೋಭಿತ್ತಿಯಲ್ಲಿದೆ. ಇನ್ನೂ ಆಳಕ್ಕೆ, ಇನ್ನೂ ವಿಸ್ತಾರಕ್ಕೆ ರಂಗಪ್ರಿಯರನ್ನು ಕೊಂಡೊಯ್ಯುವ ಪ್ರಕ್ರಿಯೆ ಪ್ರಸ್ತುತ ಕೃತಿ “ರಂಗ ಕೈರಳಿ”ಯ ಮೂಲಕ ಪ್ರಾರಂಭಗೊಳ್ಳಲೆಂದು ಹಾರೈಸುತ್ತಿದ್ದೇನೆ.

 

 

 

 

 

 

 

 

 

 

 

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *