ತಿರುವನಂತಪುರಂ: ಕೇರಳ ರಾಜ್ಯದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅವರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಸದಸ್ಯರು ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ತೀವ್ರ ಗದ್ದಲಕ್ಕೆ ಮುಂದಾದ ಕಾರಣದಿಂದ ವಿಧಾನಸಭೆ ಕಲಾಪ ಸುಗಮವಾಗಿ ನಡೆದಿಲ್ಲ.
2015ರ ಕೇರಳ ವಿಧಾನಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಶಿವನ್ ಕುಟ್ಟಿ ಸೇರಿದಂತೆ ಎಲ್‌ಡಿಎಫ್‌ನ ಕೆಲ ಶಾಸಕರ ವಿರುದ್ಧದ ಮೇಲಿರುವ ಮೊಕದ್ದಮೆ ಹಿಂಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ. ಇದೇ ವಿಚಾರವನ್ನು ಬಳಸಿಕೊಂಡ ವಿರೋಧ ಪಕ್ಷದ ಕೆಲ ಶಾಸಕರು ಸದನದಲ್ಲಿ ಶಿವನ್ ಕುಟ್ಟಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಸತತ ಎರಡನೇ ದಿನವೂ ಸದನದ ಕಲಾಪಕ್ಕೆ ಅಡ್ಡಿ ಆಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಶಿವನ್ ಕುಟ್ಟಿ ಅವರ ರಾಜೀನಾಮೆ ಪಡೆಯಲು, ಯಾವುದೇ ಸಕಾರಣವಿಲ್ಲ. ಸುಪ್ರೀಂ ಕೋರ್ಟ್ ಆದೇಶದಲ್ಲಿ ಅವರ ವಿರುದ್ಧ ಯಾವುದೇ ನಿರ್ದಿಷ್ಟ ಪ್ರಕರಣಗಳೂ ಉಲ್ಲೇಖವಾಗಿಲ್ಲʼ ಎಂದು ಪುನರುಚ್ಚರಿಸಿದ್ದಾರೆ.
ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರಕಟಿಸಿದೆ.