ಅಯ್ಯಂಕಳಿ ನಗರ ಉದ್ಯೋಗ ಖಾತ್ರಿ ಯೋಜನೆ (ಎಯುಇಜಿಎಸ್) ಕೇರಳದಲ್ಲಿ 2006-11ರ ಅವಧಿಯ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಸರಕಾರ 2010ರಲ್ಲಿ ಆರಂಭಿಸಿದ ದೇಶದ ಮೊತ್ತ ಮೊದಲ ನಗರ ಉದ್ಯೋಗ ಖಾತ್ರಿ ಯೋಜನೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಕನಿಷ್ಠ 100 ದಿನಗಳವರೆಗೆ ಉದ್ಯೋಗ ಖಾತರಿಯನ್ನು ಒದಗಿಸುವ ಗುರಿಯೊಂದಿಗೆ ಆರಂಭಿಸಿದ ಈ ಯೋಜನೆಯಲ್ಲಿ ಒಟ್ಟು 2.79 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಇವರಲ್ಲಿ 96,000 ಕುಟುಂಬಗಳು ಸಂಪೂರ್ಣವಾಗಿ ಈ ಸ್ಕೀಮನ್ನೇ ಅವಲಂಬಿಸಿವೆ ಎಂದು ತಿಳಿದು ಬಂದಿದೆ.
ಪ್ರಸಕ್ತ ಎಲ್‍ಡಿಎಫ್ ಸರಕಾರ ಈ ವರ್ಷದ ಬಜೆಟಿನಲ್ಲಿ 150 ಕೋಟಿ ರೂ.ಗಳನ್ನು ಈ ಸ್ಕೀಮಿಗೆ ನೀಡಿದ್ದು, ಮೊದಲ ತ್ರೈಮಾಸಿಕಕ್ಕೆ 29.85 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. ಇದರಲ್ಲಿ 23 ಕೋಟಿ ರೂ.ಗಳನ್ನು 6 ಮಹಾನಗರಪಾಲಿಕೆಗಳು, ಮತ್ತು 56 ನಗರಸಭೆಗಳು ಈಗಾಗಲೇ ಬಳಸಿಕೊಂಡಿರುವುದರಿಂದ ಜುಲೈ 8ರಂದು ಸರಕಾರ ಎರಡನೇ ತ್ರೈಮಾಸಿಕಕ್ಕೆ ಮತ್ತೆ 24 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಸ್ಥಳೀಯ ಸ್ವಯಮಾಡಳಿತ ಮಂತ್ರಿ ಎಂ.ಬಿ.ರಾಜೇಶ್ ಹೇಳಿದ್ದಾರೆ. ಇದನ್ನು ನಗರಸಭೆಗಳು ಈ ಬಾರಿ ಹೊಸ ಕ್ಷೇತ್ರಗಳ ಮೇಲೆ ಮುಖ್ಯವಾಗಿ ತ್ಯಾಜ್ಯ ನಿರ್ವಹಣಾ ಕಾಮಗಾರಿಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ ಎಂದು ಅವರು ಹೇಳಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ, ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರಕಾರಗಳ ಆಡಳಿತದಲ್ಲಿ ಈ ಸ್ಕೀಮಿಗೆ ನೀಡಿರುವ ಮೊತ್ತದಲ್ಲಿ 10 ಪಟ್ಟು ಹೆಚ್ಚಳವಾಗಿದೆ. 2022-23ರಲ್ಲಿ 113.93 ಕೋಟಿ ರೂ.ಗಳಿಂದ 41.11 ಲಕ್ಷ ದಿನಗಳ ಉದ್ಯೋಗ ಖಾತ್ರಿಯನ್ನು ಒದಗಿಸಲು ಸಾಧ್ಯವಾಗಿದೆ. 2015-16ರಲ್ಲಿ 7.48 ಕೋಟಿ ರೂ.ವೆಚ್ಚದಲ್ಲಿ 3ಲಕ್ಷ ಕೆಲಸದ ದಿನಗಳ ಉದ್ಯೋಗವನ್ನು ಕೊಡಲಾಗಿತ್ತು. ಸಂಪೂರ್ಣ ಯೋಜನಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂಬುದು ಗಮನಾರ್ಹ.
ಗ್ರಾಮೀಣ ಉದ್ಯೋಗ ಖಾತ್ರಿಯೊಂದಿಗೆ, ನಗರದ ದುಡಿಮೆಗಾರರಿಗೂ ಉದ್ಯೋಗ ಖಾತ್ರಿಯ ಪ್ರಯತ್ನ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ಮನರೇಗ)ಯನ್ನು 2005 ರಲ್ಲಿ ಪ್ರಾರಂಭಿಸಲಾಯಿತು, ಇದನ್ನು ಎಡ ಪಕ್ಷಗಳ ಮುತುವರ್ಜಿ ಮತ್ತು ಒತ್ತಡದಿಂದಾಗಿ ಮೊದಲ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ(ಸಿಎಂಪಿ)ದಲ್ಲಿ ಸೇರಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ರಸಕ್ತ ಪ್ರಧಾನಿಗಳು ಆರಂಭದಲ್ಲಿ ಎಷ್ಟೇ ಟೀಕೆ ಮಾಡಿದ್ದರೂ, ಇದೀಗ ಜಗತ್ತಿನ ಅತಿ ದೊಡ್ಡ ಉದ್ಯೋಗ ಯೋಜನೆಯಾಗಿದ್ದು, ಇದನ್ನು ನಗರಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಎದ್ದು ಬಂದಿತ್ತು. ಆದರೆ ಇದನ್ನು ಜಾರಿಗೆ ತಂದಿರುವುದು ಕೇರಳದ ಎಲ್‍ಡಿಎಫ್ ಸರಕಾರ ಮಾತ್ರ. ಕೇರಳದ ಸಮಾಜ ಸುಧಾರಕ ಅಯ್ಯಂಕಳಿ ಅವರ ಹೆಸರಿನ ನಗರ ಉದ್ಯೋಗ ಖಾತರಿ ಯೋಜನೆಯನ್ನು ಅದು ರೂಪಿಸಿತು.
ಕೇರಳದಲ್ಲಿ ನಗರೀಕರಣದ ಪ್ರಮಾಣ ದೇಶದ ಸರಾಸರಿಗಿಂತ ಬಹಳ ಹೆಚ್ಚಿದ್ದು ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನಸಂಖ್ಯೆಯಲ್ಲಿ ಬಹಳ ವ್ಯತ್ಯಾಸವೇನಿಲ್ಲ. 2011 ರ ಜನಗಣತಿಯ ಪ್ರಕಾರ ಗ್ರಾಮೀಣ ಪ್ರದೇಶಗಳ ಟ್ಟು ಜನಸಂಖ್ಯೆ 1,74,55,506 ಮತ್ತು ನಗರ ಪ್ರದೇಶಗಳಲ್ಲಿ 1,59,32,171. “ಈ ಸ್ಕೀಮ್ ನಗರ ಪ್ರದೇಶಗಳಲ್ಲಿನ ಜನರ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ನಗರವಾಸಿ ಕುಟುಂಬಗಳಲ್ಲಿ ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸಿದ್ಧರಿರುವ ವಯಸ್ಕ ಸದಸ್ಯರಿಗೆ ವರ್ಷದಲ್ಲಿ 100 ದಿನಗಳ ವೇತನ- ಉದ್ಯೋಗವನ್ನು ಖಾತರಿಪಡಿಸುತ್ತದೆ. ಇತರ ಉದ್ಯೋಗ ಪರ್ಯಾಯಗಳು ವಿರಳವಾಗಿದ್ದಾಗ ಅಥವಾ ಅಸಮರ್ಪಕವಾಗಿದ್ದಾಗ, ಅವಲಂಬಿಸಬಹುದಾದ ಉದ್ಯೋಗದ ಮೂಲವನ್ನು ನೀಡುವ ಮೂಲಕ ಕೇರಳದ ನಗರ ಪ್ರದೇಶಗಳಲ್ಲಿನ ಜನರಿಗೆ ಬಲವಾದ, ಹಕ್ಕು-ಆಧಾರಿತ ಸಾಮಾಜಿಕ ಸುರಕ್ಷತಾ ಜಾಲವನ್ನು ಒದಗಿಸುವ ಗುರಿಯನ್ನು ಇದು
ಹೊಂದಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ:ಕೇರಳದ ಮಾಜಿ ಸಿಎಂ, ಕಾಂಗ್ರೆಸ್ನ ಹಿರಿಯ ನಾಯಕ ಉಮ್ಮನ್ ಚಾಂಡಿ ನಿಧನ
ಈ ಯೋಜನೆಯು ಮನರೇಗಕ್ಕೆ ಸಮಾನವಾದ ಕೂಲಿಯಲ್ಲಿ ನಗರ ಪ್ರದೇಶಗಳಲ್ಲಿನ ಪ್ರತಿ ಮನೆಯ ವಯಸ್ಕ ಸದಸ್ಯರಿಗೆ 100- ದಿನಗಳ ಕೆಲಸವನ್ನು ಭರವಸೆ ನೀಡುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿನ ವಾರ್ಡ್ ಸಭೆಗಳು ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ನಿರ್ಧರಿಸುತ್ತವೆ. ಇತ್ತೀಚೆಗೆ ಸರ್ಕಾರವು ಲೈಫ್ ಮಿಷನ್ ಅಡಿಯಲ್ಲಿ ಮನೆಗಳ ನಿರ್ಮಾಣವನ್ನು ಈ ಯೋಜನೆಯಲ್ಲಿ ಸೇರಿಸಿದೆ. ಕೇರಳದ ಮತ್ತೊಂದು ಮಾದರಿ ಯೋಜನೆ ಎಯುಇಜಿಎಸ್ ಕೇರಳ ಸ್ಥಾಪಿಸಿರುವ ಮತ್ತೊಂದು ಮಾದರಿಯಾಗಿದೆ. ಈ ಯೋಜನೆಯು ನಗರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೇರಳವು ದೇಶದಲ್ಲಿ ಇಂತಹ ಕಾರ್ಯಕ್ರಮವನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ ಎಂದು ಸ್ಥಳೀಯ ಸ್ವಯಮಾಡಳಿತ ಸಚಿವ ಎಂ ಬಿ ರಾಜೇಶ್ ತಿಳಿಸಿದ್ದಾರೆ. ಏಪ್ರಿಲ್ 1,2023 ರಿಂದ ಪೂರ್ವಾನ್ವಯವಾಗುವಂತೆ ದಿನ ಕೂಲಿಯನ್ನು 311 ರಿಂದ 333ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಮಹಿಳೆಯರಿಗೆ ಕನಿಷ್ಠ 50% ಖಾತ್ರಿಯೊಂದಿಗೆ, ಉದ್ಯೋಗಗಳನ್ನು ಒದಗಿಸುವುದರ ಜೊತೆಗೆ, ಇದು ಮೋಂದಾಯಿಸಿದ ವಯಸ್ಕರಿಗೆ ಸಾಮಾಜಿಕ ಕಲ್ಯಾಣ ಕ್ರಮಗಳನ್ನು ಖಚಿತಪಡಿಸುತ್ತದೆ.
ಕಾರ್ಮಿಕರು ಕೆಲಸದ ಸಮಯದಲ್ಲಿ ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದರೆ ಅವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲಿ ಕೂಲಿಯ ಅರ್ಧವನ್ನು ನೀಡಲಾಗುತ್ತದೆ. ತ್ಯಾಜ್ಯ ನಿರ್ವಹಣೆ, ಸುಭಿಕ್ಷಾ ಕೇರಳ, ಮುಂಗಾರು ಪೂರ್ವ ನೈರ್ಮಲ್ಯ, ಆರೋಗ್ಯ ಜಾಗರೂಕತೆ, ಜಲ ಸಂರಕ್ಷಣೆ, ಅರಣ್ಯೀಕರಣ, ಪಶು ಕಲ್ಯಾಣ ಮತ್ತು ಪಿಎಂಎವೈ-ಲೈಫ್ ನ ಅಡಿಯಲ್ಲಿ ಮನೆ ನಿರ್ಮಾಣ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. 2019-20 ರಿಂದ ಹೈನುಗಾರರನ್ನು ಫಲಾನುಭವಿಗಳಾಗಿ ಸೇರಿಸಲಾಗಿದೆ. ತ್ಯಾಜ್ಯ ನಿರ್ವಹಣೆಯ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ” ಎಂದು ರಾಜೇಶ್ ಗಮನಿಸಿದರು.