ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಿನಗೂಲಿಯನ್ನು ಕಳೆದುಕೊಂಡ ಮೀನುಗಾರರ ಕುಟುಂಬಗಳಿಗೆ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ` 3,000 ಪರಿಹಾರ ನಿಧಿಯಾಗಿ ಘೋಷಿಸಿದ್ದಾರೆ. ರಾಜ್ಯದ ಸುಮಾರು 1.60 ಲಕ್ಷ ಮೀನುಗಾರರಿಗೆ ಈ ನಿಧಿ ಸಂದಾಯವಾಗಲಿದೆ.
ಕೇರಳದ ರಾಜ್ಯ ಎಡರಂಗ ಸರ್ಕಾರದ ಸಚಿವ ಸಂಪುಟ ಸಭೆಯು ಇಂದು ನಡೆದಿದ್ದು, ಮೀನುಗಾರರಿಗೆ ಪರಿಹಾರ ನಿಧಿಯನ್ನು ಘೋಷಣೆ ಮಾಡಿದೆ.
“ಭಾರೀ ಮಳೆಯಿಂದಾಗಿ ಅಧಿಕ ಪ್ರಮಾಣದ ದಿನಗಳಲ್ಲಿ ಕೆಲಸ ನಷ್ಟವಾಗಿ ಆದಾಯ ಕಳೆದುಕೊಂಡಿರುವ ಮೀನುಗಾರರು, ಅಂದರೆ, ಸುಮಾರು 1,59,481 ಮೀನುಗಾರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಯಿಂದ ಹಣವನ್ನು ನೀಡಲಾಗುವುದು” ಎಂದು ಪಿಣರಾಯಿ ವಿಜಯನ್ ಘೋಷಣೆ ಮಾಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರೀ ಮಳೆಯಿಂದಾಗಿ ಮೀನುಗಾರಿಕೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೀನುಗಾರ ಸಮುದಾಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ʻವಿಪತ್ತು ಪರಿಹಾರ ನಿಧಿಯಿಂದ ತಕ್ಷಣವೇ `47.84 ಕೋಟಿ ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂದು ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲನ್ ಹೇಳಿದರು.
ಸರ್ಕಾರದ ಮಾನದಂಡಗಳ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೀನುಗಾರಿಕೆ ಸಚಿವ ಸಾಜಿ ಚೆರಿಯನ್ ಹೇಳಿದರು.
ಈ ಹಿಂದೆ ಆರು ತಿಂಗಳ ಅವಧಿಗೆ ಪ್ರತಿ ವ್ಯಕ್ತಿಗಳಿಗೆ 1,200 ರೂಪಾಯಿ ಪರಿಹಾರ ಧನಸಹಾಯವನ್ನು ಕೇರಳದ ಎಡರಂಗ ಸರ್ಕಾರ ವಿತರಿಸಿತ್ತು.
ಮಳೆ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಅಕ್ಟೋಬರ್ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರ 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಿತ್ತು. ಅಲ್ಲದೆ, ನಿರಂತರ ಮಳೆಯಿಂದ ಮನೆ ಕೊಚ್ಚಿಹೋದ ಜನರಿಗೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿತು.
ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಮುಂಗಾರು ಮಳೆಯ ಸಂದರ್ಭದಲ್ಲಿ ಕೇರಳ ಅಧಿಕ ಪ್ರಮಾಣದಲ್ಲಿ ವಿಪತ್ತನ್ನು ಎದುರಿಸುತ್ತಿದೆ.