ತಿರುವನಂತಪುರಂ: ಮಣಿಪುರ ಹಿಂಸಾಚಾರ ವಿಚಾರದಲ್ಲಿ ಕಳವಳ ವ್ಯಕ್ತಪಡಿಸದ ಕೇಂದ್ರ ಸರ್ಕಾರ, ಸರ್ಕಾರವನ್ನು ಮುನ್ನಡೆಸುತ್ತಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಂಸದ, ಚಲನಚಿತ್ರ ನಟ ಸುರೇಶ್ ಗೋಪಿಯನ್ನು ಕೇರಳದ ತ್ರಿಶೂರ್‌ನ ಸೈರೋ-ಮಲಬಾರ್ ಚರ್ಚ್‌ನ ಆರ್ಚ್‌ಡಯಾಸಿಸ್ ತೀವ್ರವಾಗಿ ಟೀಕಿಸಿದೆ. ತನ್ನ ಮುಖವಾಣಿಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆರ್ಚ್‌ಡಯಾಸಿಸ್ “ಮಣಿಪುರವನ್ನು ಮರೆಯುವುದಿಲ್ಲ” ಎಂದು ಹೇಳಿದೆ.
“ಕ್ಯಾಥೋಲಿಕಸಭಾ” ಎಂಬ ಹೆಸರಿನ ತನ್ನ ಮುಖವಾಣಿಯ ನವೆಂಬರ್ ಆವೃತ್ತಿಯ ಮುಖಪುಟದಲ್ಲಿ “ಮಣಿಪುರವನ್ನು ಮರೆಯುವುದಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಲೇಖನವನ್ನು ಪ್ರಕಟಿಸಲಾಗಿದೆ. “ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಜನರು ಮಣಿಪುರದ ಸಮಸ್ಯೆಯಲ್ಲಿ ಪ್ರಧಾನಿಯವರ ಮೌನಕ್ಕೆ ಕಾರಣವೇನು ಎಂದು ಊಹಿಸಬಹುದು. ಈ ಮೌನವು ಗಲಭೆಗೆ ಪರವಾನಗಿಯಾಗಿದ್ದು, ಪ್ರಜಾಪ್ರಭುತ್ವ ಭಾರತ ಇದನ್ನು ಸುಲಭವಾಗಿ ಮರೆಯುವುದಿಲ್ಲ” ಎಂದು ಲೇಖನದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಛತ್ತೀಸ್‌ಘಡ | ಚುನಾವಣೆ ಚಿಹ್ನೆ ಕಳೆದುಕೊಂಡ 7 ಸಿಪಿಐ ಅಭ್ಯರ್ಥಿಗಳು!
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಸ್ಪರ್ಧಿಸಲು ಸಾಧ್ಯತೆಯಿರುವ ನಟ, ಬಿಜೆಪಿ ನಾಯಕ ಸುರೇಶ್ ಗೋಪಿ, “ಕೇರಳದ ಜನರು ಮಣಿಪುರ ಮತ್ತು ಉತ್ತರ ಪ್ರದೇಶದ ಬಗ್ಗೆ ಚಿಂತಿಸಬೇಕಾಗಿಲ್ಲ. ಅಲ್ಲಿನ ಸಮಸ್ಯೆಯನ್ನು ನಿಭಾಯಿಸಲು ಗಂಡು ಮಕ್ಕಳಿದ್ದಾರೆ” ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ “ಕ್ಯಾಥೋಲಿಕಸಭಾ” ತೀವ್ರ ಟೀಕೆ ವ್ಯಕ್ತಪಡಿಸಿದೆ.
“ಕ್ಯಾಥೋಲಿಕಸಭಾ”ದ ಲೇಖನವು ಸುರೇಶ್ ಗೋಪಿಯನ್ನು, “ಮಣಿಪುರ ಹೊತ್ತಿ ಉರಿಯುತ್ತಿರುವಾಗ ‘ಈ ಗಂಡು ಮಕ್ಕಳು’ ಏನು ಮಾಡುತ್ತಿದ್ದರು?. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಶ್ನೆಯನ್ನು ಕೇಳಲು ನಿಮಗೆ ಧೈರ್ಯವಿದೆಯೇ?” ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ತೆಲಂಗಾಣ | ಆಡಳಿತರೂಢ ಬಿಆರ್‌ಎಸ್‌ಗೆ ಓವೈಸಿ ಬೆಂಬಲ
ತ್ರಿಶೂರ್‌ನಲ್ಲಿ ಬಿಜೆಪಿಗೆ “ಅರ್ಹ ಗಂಡು ಮಕ್ಕಳು” ಇರಲಿಲ್ಲವೇ, ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾಕೆ ಯೋಜಿಸುತ್ತಿದ್ದಾರೆ ಎಂದು ಸುರೇಶ್ ಗೋಪಿಯನ್ನು ಪ್ರಶ್ನಿಸಿರುವ ಲೇಖನವು ಅವರನ್ನು ಮತ್ತಷ್ಟು ಅಣಕಿಸಿದೆ. ಅಲ್ಲದೆ, ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಕೇರಳವನ್ನು ಮತ್ತೊಂದು ಮಣಿಪುರ ಮಾಡುತ್ತೀರಾ? ಎಂದು ಅದು ಕೇಳಿದೆ.
ಮಣಿಪುರವನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖವಾಣಿ ತನ್ನ ಪ್ರಶ್ನೆಗಳನ್ನು ಕೇಳಿದ್ದು, “ಮಣಿಪುರದಲ್ಲಿ ಚರ್ಚ್‌ಗಳಿಗೆ ಬೆಂಕಿ ಹಚ್ಚಿದಾಗಲೂ ಮೋದಿ ಮೌನವಾಗಿದ್ದರು. ಮಣಿಪುರವನ್ನು ನಿರ್ಲಕ್ಷಿಸುವ ವೋಟ್ ಬ್ಯಾಂಕ್ ರಾಜಕೀಯದ ಬಗ್ಗೆ ಕೇರಳದ ಜನರು ತಿಳಿದಿದ್ದಾರೆ ಮತ್ತು ಯಾವಾಗಲೂ ಜಾಗೃತರಾಗಿದ್ದಾರೆ” ಎಂದು ಕ್ಯಾಥೋಲಿಕಸಭಾದ ಲೇಖನವು ಹೇಳಿದೆ.
ವಿಡಿಯೊ ನೋಡಿ: ‘ತುಘಲಕ್’ ನಾಟಕವನ್ನು ಕಟ್ಟಿ ಕೊಟ್ಟಿದ್ದರ ಹಿಂದೆ ರೋಚಕ ಕಥೆ ಇದೆ – ಡಾ. ಶ್ರೀಪಾಧ್ ಭಟ್