ಕೇರಳ ;ಜ, 04:ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯುವ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.

ಈಗಾಗಲೇ ದೇಶಾದ್ಯಂತ ಸುದ್ದಿಯಾಗಿರುವಂತೆ ತಿರುವನಂತಪುರದ 21 ವರ್ಷದ ಆರ್ಯಾ ರಾಜೇಂದ್ರನ್ ದೇಶದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಆಗಿ ಡಿಸೆಂಬರ್ 28ರಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಹಿಂದಿನ ದಿನವಷ್ಟೇ 21 ವರ್ಷ ಪೂರೈಸಿದ ರೇಷ್ಮಾ ಮರಿಯಮ್ ರಾಯ್ ಚುನಾವಣೆ ಗೆದ್ದು ಈಗ ದೇಶದ ಅತ್ಯಂತ ಕಿರಿಯ ವಯಸ್ಸಿನ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ. ಅವರು ಡಿಸೆಂಬರ್ 30ರಂದು ಪಟ್ಟಣಮಿತ್ತ ಜಿಲ್ಲೆಯ ಅರ್ವಪುಳಂ ಗ್ರಾಮ ಪಂಚಾಯತಿನ ಅಧ್ಯಕ್ಷೆಯಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಈ ಚುನಾವಣೆಗಳಲ್ಲಿ ಯುವತಿಯರ ಗೆಲುವಿನ ಇನ್ನೂ ಹಲವು ಉದಾಹರಣೆಗಳು ಈಗ ಪ್ರಕಟಗೊಳ್ಳುತ್ತಿವೆ. ಸಿಪಿಐ(ಎಂ) ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಹಲವು ಎಸ್‌ಎಫ್‌ಐ, ಡಿವೈಎಫ್‌ಐ ಮುಖಂಡರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಅವರಲ್ಲಿ ಹೆಚ್ಚಿನವರು ಗೆದ್ದು ಬಂದಿದ್ದಾರೆ.

ತಿರುವನಂತಪುರ ಮಹಾನಗರಪಾಲಿಕೆಗೆ ಇನ್ನಿಬ್ಬರು ಎಸ್‌ಎಫ್‌ಐ ಮುಖಂಡೆಯರು, ಗಾಯತ್ರಿ ಎಸ್ ಬಾಬು ಮತ್ತು ಎಸ್.ಎಸ್.ಶರಣ್ಯ ಆಯ್ಕೆಯಾಗಿದ್ದಾರೆ. 20ವರ್ಷ ವಯಸ್ಸಿನ ಸಿಪಿಐ ಮುಖಂಡೆ ಅನ್ಸಿಯಾ ಕೊಚ್ಚಿ ಮಹಾನಗರಪಾಲಿಕೆಯ ಉಪಮೇಯರ್ ಆಗಿ ಚುನಾಯಿತರಾಗಿದ್ದಾರೆ. ಒಳವಣ್ಣ ಪಂಚಾಯತಿನ ಅಧ್ಯಕ್ಷೆಯಾಗಿ 22ವರ್ಷ ವಯಸ್ಸಿನ ಎಲ್.ಎಲ್.ಬಿ. ವಿದ್ಯಾರ್ಥಿನಿ ಮತ್ತು ಎಸ್.ಎಫ್.ಐ.-ಡಿ.ವೈ.ಎಫ್.ಐ. ಮುಖಂಡೆ ಪಿ. ಶೃತಿ ಆಯ್ಕೆಯಾಗಿದ್ದಾರೆ. ಇತ್ತೀಚಿನ ಭೀಕರ ಪ್ರವಾಹದ ವೇಳೆಯಲ್ಲಿ ಈಕೆ ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.

ಇನ್ನೊಬ್ಬರು ಎಸ್‌ಎಫ್‌ಐ-ಡಿವೈಎಫ್‌ಐ ಮುಖಂಡೆ 23 ವರ್ಷಗಳ ಅನಸ್ ರೋಸ್ನ ಸ್ಟೆಫಿ ವೈನಾಡ್ ಜಿಲ್ಲೆಯ ಪೊಝುತನ ಗ್ರಾಮ ಪಂಚಾಯತಿನ ಅಧ್ಯಕ್ಷರಾಗಿದ್ದಾರೆ. ಈಕೆ ಅನಾಹುತ ನಿರ್ವಹಣೆ ವಿಷಯದಲ್ಲಿ ಸ್ವನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ.
22ವರ್ಷ ವಯಸ್ಸಿನ ಅಮೃತಾ ಕೊಳ್ಳಂ ಜಿಲ್ಲೆಯ ಇತ್ತಿವ ಗ್ರಾಮ ಪಂಚಾಯತಿನ ಅಧ್ಯಕ್ಷೆಯಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

23 ವರ್ಷವಯಸ್ಸಿನ ಎಂಎ ವಿದ್ಯಾರ್ಥಿನಿ ರಾಧಿಕಾ ಎಂ ಮಾಲಂಪುಳ ಗ್ರಾಮ ಪಂಚಾಯತಿನ ಅಧ್ಯಕ್ಷೆ ಯಾಗಿದ್ದಾರೆ. ಇವರು ಎಳಕುಟಂಪಾರ ಬುಡಕಟ್ಟು ಕಾಲನಿಯಲ್ಲಿ ಡಿಗ್ರಿ ಪಡೆದ ಮೊದಲಿಗರು. ಇದಲ್ಲದೆ ಎಲ್‌ಡಿಎಫ್ ಗೆದ್ದಿರುವ ಐದು ಮಹಾನಗರಪಾಲಿಕೆಗಳಲ್ಲಿ ಮೂರರಲ್ಲಿ ಮಹಿಳೆಯರು ಮೇಯರ್ ಆಗಿ ಚುನಾಯಿತರಾಗಿದ್ದಾರೆ. ತಿರುವನಂತಪುರದ ಆರ್ಯಾ ರಾಜೇಂದ್ರನ್ ಅಲ್ಲದೆ ಕೊಳ್ಳಂ ಮಹಾನಗರಪಾಲಿಕೆಗೆ ಪ್ರಸನ್ನಾ ಅರ್ನೆಸ್ಟ್ ಮತ್ತು ಮತ್ತು ಕೊಹಿಕ್ಕೋಡ್ ಮಹಾನಗರಪಾಲಿಕೆಗೆ ಡಾ. ಬೀನಾ ಕೆ ಫಿಲಿಪ್ ಮೇಯರ್ ಆಗಿ ಚುನಾಯಿತರಾಗಿದ್ದಾರೆ.

ಪತ್ತನಾಪುರಂ ಬ್ಲಾಕ್ ಪಂಚಾಯತ್‌ನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಆನಂದವಲ್ಲಿ ಅದೇ ಕಚೇರಿಯಲ್ಲಿ 10ವರ್ಷದಿಂದ ಅರೆಕಾಲಿಕ ಕಸಗುಡಿಸುವ ಕೆಲಸ ಮಾಡುತ್ತಿದ್ದವರು. ಇವರು ಕುಡುಂಬಶ್ರೀ ಯ ಸಕ್ರಿಯ ಕಾರ್ಯಕರ್ತೆ ಕೊಳ್ಳಂ ಜಿಲ್ಲೆಯ ಪೂತ್ತಕುಳಂ ಪಂಚಾಯತಿನ ಅಧ್ಯಕ್ಷೆಯಾಗಿ ಗೇರುಬೀಜ ಕಾರ್ಖಾನೆಯ ಕಾರ್ಮಿಕರಾದ ಅಮ್ಮಿನಿ ಅಮ್ಮ ಆಯ್ಕೆಯಾಗಿದ್ದಾರೆ. ಇವರು ಜಿಲ್ಲಾ ಗೇರುಬೀಜ ಕಾರ್ಮಿಕರ ಸಮಘದ ಜಿಲ್ಲಾ ಸಂಯೋಜಕರು ಅಲ್ಲದೆ ಸಕ್ರಿಯ ಕುಡುಂಬಶ್ರೀ ಕಾರ್ಯಕರ್ತೆ.