ಕೇರಳ ಸ್ಥಳೀಯ ಚುನಾವಣೆ : ಎಡರಂಗ ಮುನ್ನಡೆ, ಕಮಲಕ್ಕೆ ಹಿನ್ನಡೆ

ತಿರುವನಂತಪುರಂ : ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌  ಭಾರೀ ಮುನ್ನಡೆಯನ್ನು  ಕಾಯ್ದುಕೊಂಡಿದೆ. ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಯುಡಿಎಫ್‌) ಎರಡನೇ ಸ್ಥಾನದಲ್ಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಎರಡು ಮುನ್ಸಿಪಲ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.  ಬಹುತೇಕ ಮುನ್ನಡೆ ಇರುವ ಕ್ಷೇತ್ರಗಳಲ್ಲಿ  ಮತಗಳ ಅಂತರ ಹೆಚ್ಚಿದ್ದು ಎಲ್.ಡಿ.ಎಫ್  ಗೆಲುವಿನ ನಗೆ ಬೀರಲಿದೆ.

941 ಗ್ರಾಮಪಂಚಾಯ್ತಿಗಳಲ್ಲಿ ಎಲ್‌ಡಿಎಫ್‌ 517, ಯುಡಿಎಫ್‌ 374, ಎನ್‌ಡಿಎ 22, ಇತರರು 28ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 6 ಕಾರ್ಪೊರೇಶನ್‌ಗಳ ಪೈಕಿ ಎಲ್‌ಡಿಎಫ್‌ 4, ಯುಡಿಎಫ್‌ 2ರಲ್ಲಿ ಮುನ್ನಡೆಯಲ್ಲಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದನೆ ಮಾಡಿದೆ. ತಿರುವನಂತರದ 100 ವಾರ್ಡ್‌ಗಳ ಪೈಕಿ ಎಲ್‌ಡಿಎಫ್‌ 50ರಲ್ಲಿ, ಬಿಜೆಪಿ 30ರಲ್ಲಿ ಹಾಗೂ ಯುಡಿಎಫ್‌ 9ರಲ್ಲಿ ಮನ್ನಡೆ ಕಾಯ್ದುಕೊಂಡಿವೆ. ಕಳೆದ ಸಲ ಬಿಜೆಪಿ 34 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್‌ಡಿಎಫ್‌ ಎದುರು ಬಿಜೆಪಿ ಮತ್ತೆ ಸೋಲು ಕಂಡಿದೆ.

86 ಮುನ್ಸಿಪಲ್‌ಗಳಲ್ಲಿ ಎಲ್‌ಡಿಎಫ್‌ 45, ಯುಡಿಎಫ್‌ 35, ಇತರರು 4 ಹಾಗೂ ಬಿಜೆಪಿ 2ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 14 ಜಿಲ್ಲಾ ಪಂಚಾಯ್ತಿಗಳಲ್ಲಿ ಎಲ್‌ಡಿಎಫ್‌ 10, ಯುಡಿಎಫ್‌ 4 ರಲ್ಲಿ ಮುನ್ನಡೆಯಲಿದ್ದು ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಕೇರಳದಲ್ಲಿ ಬಿಜೆಪಿಯ ಮ್ಯಾಜಿಕ್, ಚುನಾವಣಾ ತಂತ್ರಗಳು ಫಲಿಸದೆ  ಹಿನ್ನಡೆ ಅನುಭವಿಸುವಂತಾಗಿದೆ. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿಯವರ ಪ್ರತಿನಿಧಿಸುವ ಕ್ಷೇತ್ರದಲ್ಲಿ  ಹಾಗೂ ಪ್ರತಿಪಕ್ಷ ನಾಯಕ  ರಮೇಶ್ ಚೆನ್ನಿಥಾಳ , ಕೇರಳ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರನ್  ಕ್ಷೇತ್ರದಲ್ಲಿ ಎಲ್.ಡಿ.ಎಫ್ ಮುನ್ನಡೆ ಸಾಧಿಸಿದೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು. ಮೊದಲ ಹಂತದಲ್ಲಿ 72.67% ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ 76.38% ಮತ್ತು ಮೂರನೇ ಹಂತದಲ್ಲಿ ದಾಖಲೆಯ 78.64% ಮತದಾನವಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ವಿಧಾನಸಭಾ ಚುನಾವಣೆಯಲ್ಲಿನ ಪಕ್ಷಗಳ ನಿರ್ಧಾರಗಳಿಗೆ ಸೂಚಕವಾಗಿ ಪರಿಗಣಿಸಲಾಗುತ್ತದೆ. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಈ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

Donate Janashakthi Media

Leave a Reply

Your email address will not be published. Required fields are marked *