ಕೇರಳ | ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣ – 6 ಮಂದಿ ಪಿಎಫ್‌ಐ ಸದಸ್ಯರು ತಪ್ಪಿತಸ್ಥರೆಂದ ನ್ಯಾಯಾಲಯ

ಮೊದಲ ಹಂತದಲ್ಲಿ 13 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಲಾಗಿತ್ತು

ಕೇರಳ: 2010ರಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕಡಿದ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಆರು ಮಂದಿ ಸದಸ್ಯರನ್ನು ದೋಷಿ ಎಂದು ರಾಜ್ಯದ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಪಿಎಫ್‌ಐ ಸಂಘಟನೆಯನ್ನು ಒಕ್ಕೂಟ ಸರ್ಕಾರ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ.

ಪ್ರಕರಣದ ಎರಡನೇ ಹಂತದ ವಿಚಾರಣೆಯಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು, ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊಲೆ ಯತ್ನ, ಪಿತೂರಿ ಮತ್ತು ಇತರ ವಿವಿಧ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು. ಶಿಕ್ಷೆ ಪ್ರಮಾಣವನ್ನು ಗುರುವಾರ ಮಧ್ಯಾಹ್ನ ಘೋಷಿಸಲಾಗುತ್ತದೆ.

ಕೆಲವು ಆರೋಪಿಗಳನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಅಪರಾಧಿಗಳೆಂದು ಪರಿಗಣಿಸಲಾಗಿದೆ. ಪ್ರಕರಣದ ಇತರ ಐವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಇದನ್ನೂ ಓದಿ: ಪಿಎಫ್‌ಐ ಮಾಡೆಲ್‌ ಹೋರಾಟ ಮತ್ತು ಫ್ಯಾಸಿಸ್ಟ್ ಆಡಳಿತದಲ್ಲಿ ಮುಸ್ಲಿಮ್ ಸಮುದಾಯ ಇಡಬೇಕಾದ ಎಚ್ಚರಿಕೆಯ ಹೆಜ್ಜೆಗಳು

ಮೊದಲ ಹಂತದಲ್ಲಿ, 31 ಆರೋಪಿಗಳು ವಿಚಾರಣೆಯನ್ನು ಎದುರಿಸಿದ್ದರು. ಅವರಲ್ಲಿ 10 ಜನರನ್ನು ನ್ಯಾಯಾಲಯವು 2015 ರ ಏಪ್ರಿಲ್‌ನಲ್ಲಿ ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಶಿಕ್ಷೆ ವಿಧಿಸಿತು. ಈ ಹತ್ತು ಮಂದಿಗೆ ತಲಾ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೂವರನ್ನು ಅಪರಾಧಿಗಳಿಗೆ ಆಶ್ರಯ ನೀಡಿದ ಕಾರಣಕ್ಕೆ ತಪ್ಪಿತಸ್ಥರೆಂದು ತೀರ್ಪು ನೀಡಿತು. ಈ ವೇಳೆ ಪ್ರಕರಣದಲ್ಲಿ 18 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.

2010ರ ಜುಲೈ 4 ರಂದು ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿರುವ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಆಗಿದ್ದ ಟಿ.ಜೆ. ಜೋಸೆಫ್ ಅವರ ಬಲಗೈಯನ್ನು ಪಿಎಫ್‌ಐ ಕಾರ್ಯಕರ್ತರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿರುವ ಚರ್ಚ್‌ನಲ್ಲಿ ಭಾನುವಾರದ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡು ಕುಟುಂಬದೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ದಾಳಿ ನಡೆದಿತ್ತು.

ಏಳು ಜನರಿದ್ದ ಗುಂಪಿನ ದಾಳಿಕೋರರು ಪ್ರೊಫೆಸರ್ ಅವರನ್ನು ವಾಹನದಿಂದ ಹೊರಗೆಳೆದು, ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರ ಬಲಗೈಯನ್ನು ಕತ್ತರಿಸಲಾಗಿತ್ತು. ಪ್ರೊಫೆಸರ್‌ ಅವರ ಕೈ ಕತ್ತರಿಸಿದ ಪ್ರಮುಖ ಆರೋಪಿ ಸವಾದ್ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: ಪಿಎಫ್‍ಐ- ಎಸ್‍ಡಿಪಿಐ ತೀವ್ರವಾದಿ ಸಂಘಟನೆಗಳು: ಕೇರಳ ಹೈಕೋರ್ಟ್.

ಆರೋಪಿಗಳು ನ್ಯೂಮನ್ ಕಾಲೇಜಿನಲ್ಲಿ ಬಿಕಾಂ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಧಾರ್ಮಿಕ ಅವಹೇಳನಕಾರಿ ಹೇಳಿಕೆಗಳಿಗಾಗಿ ಜೋಸೆಫ್ ಅವರನ್ನು ಕೊಲ್ಲಲು ಬಯಸಿದ್ದರು ಎಂದು ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *