ಕೇರಳ: ಸತತ ಎರಡನೇ ಬಾರಿ ಅಧಿಕಾರಕ್ಕೆ ಪಿಣರಾಯಿ ನೇತೃತ್ವದ ಎಡರಂಗ ಸರಕಾರ

ತಿರುವನಂತಪುರಂ : ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ದಿನಾಂಕ ಸಮೀಪಿಸುತ್ತಿದೆ. ಚುನಾವಣಾ ಪೂರ್ವ ಸಮೀಕ್ಷಗಳ ಪ್ರಕಾರ ಜನತೆಯ ನಿರ್ಧಾರದ ಹಿನ್ನೆಲೆಯನ್ನು ಹಲವು ಸುದ್ಧಿ ಸಂಸ್ಥೆಗಳೂ  ಸಮೀಕ್ಷೆ ನಡೆಸಿದೆ. ಕೇರಳದಲ್ಲಿ ಈ ಬಾರಿ ಮತ್ತೆ ಪಿಣರಾಯಿ ವಿಜಯನ್‌ ನೇತೃತ್ವದ ಎಡರಂಗ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ನಿಲುವನ್ನು ಜನತೆ ವ್ಯಕ್ತಪಡಿಸಿದ್ದಾರೆ.

ಟೌಮ್ಸ್‌ ನೌ ಸಿ-ವೋಟರ್‌ ಮತ್ತು ಮಾತೃಭೂಮಿ ಸಿ-ವೋಟರ್‌ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಡರಂಗ ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

ಇದನ್ನು ಓದಿ : ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್‌ ಯುಡಿಎಫ್‌ ನಡುವೆ ನಡೆದಿದೆ ನೇರ ಹಣಾಹಣಿ

ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್‌) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ರಂಗ(ಯುಡಿಎಫ್‌) ನಡುವಿನ ಸ್ಪರ್ಧೆ ಅತ್ಯಂತ ಬಿರುಸಿನಿಂದ ಕೂಡಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ ಎಡರಂಗ 77 ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಟೈಮ್ಸ್‌‌‌ ನೌ ಸಿ-ವೋಟರ್ ಸಮೀಕ್ಷೆಯಿಂದ ತಿಳಿದುಬಂದಿದೆ.

ಚುನಾವಣೆಯ ಪ್ರಬಲ ಪೈಪೋಟಿ ಇರುವ ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ರಂಗ 62 ಸ್ಥಾನಗಳನ್ನು ಗಳಿಸಲಿದೆ. ಅಲ್ಲದೇ, ಸಿಪಿಐ(ಎಂ) ನೇತೃತ್ವದ ಎಡರಂಗವು  ಸಂಯುಕ್ತ ರಂಗದ ಹಲವು ಕ್ಷೇತ್ರಗಳನ್ನು ಸಹ ಕಸಿದುಕೊಳ್ಳಲಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಬಿಜೆಪಿ ಒಂದು ಸ್ಥಾನ ಗೆಲ್ಲಬಹುದೆಂಬ ನಿರೀಕ್ಷೆಯಿದೆ.

2016ರ ಚುನಾವಣೆಯಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ಎಡರಂಗವು 91 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವನ್ನು ದಾಖಲಿಸಿತು.

ಇದನ್ನು ಓದಿ : ಟಿಕೇಟ್‌ ಸಿಗದಕ್ಕೆ ಕೇಶಮುಂಡನ! 33 ಶಾಸಕರು ಸ್ಪರ್ಧೆಯಲ್ಲಿಲ್ಲ!! ಅಭ್ಯರ್ಥಿಯನ್ನು ಕೇಳದೆ ಟಿಕೆಟ್‌ ಘೋಷಣೆ!!!

ಮಾತೃಭೂಮಿ ನಡೆಸಿರುವ ಸಮೀಕ್ಷೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಅಧಿಕಾರವನ್ನು ಹಿಡಿಯಲಿದೆ ಎಂದು ತಿಳಿಸಿದೆ. ಮಾತೃಭೂಮಿ ಸಿ-ಮತದಾರರ ಸಮೀಕ್ಷೆಯ ಪ್ರಕಾರ, ಕೇರಳ ವಿಧಾನಸಭಾ ಚುನಾವಣೆ 2021 ರಲ್ಲಿ ಎಡರಂಗ 75 ರಿಂದ 83 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯ ಪೂರ್ವ ಫಲಿತಾಂಶಗಳು ತಿಳಿಸಿವೆ.

ಯುಡಿಎಫ್ 56 ರಿಂದ 64 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಎನ್‌ಡಿಎ 0 ರಿಂದ 2 ಸ್ಥಾನಗಳನ್ನು ಪಡೆಯಲಿದೆ ಎಂದಿದೆ. ಎಲ್‌ಡಿಎಫ್ ಶೇ.40.9 ರಷ್ಟು ಮತಗಳನ್ನು ಗಳಿಸಿದರೆ, ಯುಡಿಎಫ್ ಶೇ 37.9 ಮತ್ತು ಎನ್‌ಡಿಎ 16.6 ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮತದಾರರು ರಾಜ್ಯದಲ್ಲಿ ತಾವು ಎದುರಿಸಿದ ಅತಿದೊಡ್ಡ ಸಮಸ್ಯೆಗಳಲ್ಲಿ ಶೇಕಡಾ 41.8 ರಷ್ಟು ನಿರುದ್ಯೋಗ, ಶೇಕಡಾ 10.4 ರಷ್ಟು ಭ್ರಷ್ಟಾಚಾರ ಮತ್ತು ಶೇಕಡಾ 4.8  ಜನರು ಕಾನೂನು ಮತ್ತು ಸುವ್ಯವಸ್ಥೆ ಎಂದು ಹೇಳಿದ್ದಾರೆ.

ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣ ತಮ್ಮ ಮೇಲೆ ಮತದಾನದ ಮೇಲೆ ಪ್ರಭಾವ ಬೀರಲಿದೆ ಎಂದು ಶೇಕಡಾ 25.2 ರಷ್ಟು ಜನರು ಹೇಳಿದರೆ, ಶೇಕಡಾ 20.2 ಮಂದಿ ಶಬರಿಮಲೆ ವಿಷಯದ ಕುರಿತು ಮಾತನಾಡಿದ್ದಾರೆ ಎಂದು ಮಾತೃಭೂಮಿ ಸಮೀಕ್ಷೆ ಹೇಳಿದೆ.

ಕೇರಳ ರಾಜ್ಯ ವಿಧಾನಸಭೆಗೆ ಏಪ್ರಿಲ್‌ 6 ರಂದು ಚುನಾವಣೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 02ರಂದು ಫಲಿತಾಂಶ ಹೊರಬೀಳಲಿದೆ.

Donate Janashakthi Media

Leave a Reply

Your email address will not be published. Required fields are marked *