ಕೇರಳದ ಸಿಲ್ವರ್‌ಲೈನ್ ರೈಲು ಯೋಜನೆ

ಎನ್.ಎಸ್.ಸಜಿತ್

ಕೇರಳದ ದಕ್ಷಿಣದ ತುದಿಯಲ್ಲಿರುವ ತಿರುವನಂತಪುರದಿಂದ ಉತ್ತರದ ತುದಿಯಲ್ಲಿರುವ ಕಾಸರಗೋಡು ವರೆಗಿನ 530 ಕಿ.ಮೀ. ಉದ್ದದ ಸಿಲ್ವರ್‌ಲೈನ್ ವೇಗದ ರೈಲು ಮಾರ್ಗ ಎಲ್‌ಡಿಎಫ್ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಆಶ್ವಾಸನೆ ನೀಡಿದ ಒಂದು ಪ್ರಮುಖ ಮೂಲರಚನಾ ಯೋಜನೆ. ಈಗ ಇದನ್ನು ಜಾರಿ ಮಾಡುವಾಗ ಬಹಳಷ್ಟು ವಿರೋಧಗಳು ಬರುತ್ತಿವೆ. ಈ ಕುರಿತ ರಚನಾತ್ಮಕ ಟೀಕೆಗಳನ್ನು ಕೇಳಲು ಸರ್ಕಾರ ಸದಾ ಸಿದ್ಧವಿದೆ. ಆದರೆ, ಅಭಿವೃದ್ಧಿ ಯೋಜನೆಗಳನ್ನು ಅಡ್ದಿಪಡಿಸುವ ಉದ್ದೇಶದಿಂದಲೇ ಮಾಡುವ  ಯಾವುದೇ ವಿರೋಧವು ಜನರಿಗೆ ನಾವು ನೀಡಿದ ಭರವಸೆಯನ್ನು ಈಡೇರಿಸದಂತೆ ತಡೆಯಲಾರದು. ಕೇರಳದ ಅಭಿವೃದ್ಧಿಗಾಗಿ ನಾವು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ. ಅಂತಹ ಅಭಿವೃದ್ಧಿ ಯೋಜನೆಗಳನ್ನು ಹಳಿತಪ್ಪಿಸಲು ಪ್ರಯತ್ನಿಸಿದರೆ, ಅದು ನಮ್ಮ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ, ಅದಕ್ಕೆ  ಅವಕಾಶ  ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳ ಸರ್ಕಾರವು ವಿಪಕ್ಷಗಳ ಹೆಚ್ಚುತ್ತಿರುವ ಪ್ರತಿಭಟನೆಗಳು ಮತ್ತು ಮಾಧ್ಯಮದ ಒಂದು ವಿಭಾಗದ ಕೈಚಳಕಗಳ ಹೊರತಾಗಿಯೂ,  ಸಿಲ್ವರ್‌ಲೈನ್ ಎಂಬ ಸೆಮಿ- ಹೈಸ್ಪೀಡ್(ಅರೆ-ಉನ್ನತ ವೇಗದ) ರೈಲು ಮಾರ್ಗ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಯು 2021ರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾಗಿದೆ. ಎಲ್‌ಡಿಎಫ್ ಸರ್ಕಾರವು ಇದನ್ನು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಾಗಿ ಪರಿಕಲ್ಪಿಸಿದೆ. ಈ ಯೋಜನೆಯನ್ನು ರಾಜ್ಯದ ಒಂದು ಪ್ರಮುಖ ಕಾಳಜಿಯಾದ ಸಂಚಾರ ದಟ್ಟಣೆ, ರಸ್ತೆ ಅಪಘಾತಗಳು ಮತ್ತು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಪ್ಪಿಸಲು ವಿನ್ಯಾಸಗೊಳಿಸಲಾಗಿದೆ. ರೈಲ್ವೇ ಅಭಿವೃದ್ಧಿ ತೀರಾ ಮಂದಗತಿಯಲ್ಲಿರುವ ಕೇರಳದಂತಹ ರಾಜ್ಯದಲ್ಲಿ ಸಿಲ್ವರ್ ಲೈನ್ ನಂತಹ ಯೋಜನೆ ಅನಿವಾರ್ಯವಾಗಿದೆ.

ಪ್ರಸ್ತುತ ದಕ್ಷಿಣದ ತುದಿಯಲ್ಲಿರುವ ತಿರುವನಂತಪುರದಿಂದ ಉತ್ತರದ ತುದಿಯಲ್ಲಿರುವ ಕಾಸರಗೋಡಿಗೆ ಪ್ರಯಾಣಿಸಲು 16 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಿಲ್ವರ್‌ಲೈನ್ ಯೋಜನೆಯು ಈ ಸಮಸ್ಯೆಗೆ ಪರಿಹಾರವಾಗಿದೆ ಏಕೆಂದರೆ ಯೋಜನೆಯು ಸಾಕಾರವಾದರೆ ಅದು ಕೇವಲ ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಈ ಯೋಜನೆಯು ರಾಜ್ಯದಲ್ಲಿನ ಹೆಚ್ಚಿನ ಜನಸಾಂದ್ರತೆಯನ್ನು ಪರಿಗಣಿಸಿ ಪ್ರತಿ 50 ಕಿಲೋಮೀಟರ್‌ಗಳಿಗೆ ಒಂದರಂತೆ 11 ನಿಲ್ದಾಣಗಳನ್ನು ಕಲ್ಪಿಸುತ್ತದೆ.

ಪ್ರತಿ ಕಿಲೋಮೀಟರ್‌ಗೆ ರೂ. 120 ಕೋಟಿ ವೆಚ್ಚದಲ್ಲಿ ಬರುವ ಈ ಸೆಮಿ- ಹೈಸ್ಪೀಡ್ ರೈಲು ಮಾರ್ಗವನ್ನು ಪ್ರಸ್ತುತ ಸರ್ಕಾರ ನಿರ್ಧರಿಸಲು ಇದು ಒಂದು ಪ್ರಮುಖ ಕಾರಣವಾಗಿದೆ. ಹೈಸ್ಪೀಡ್ ರೈಲ್ವೇಯಲ್ಲಿ ಪ್ರತಿ ಕಿಲೋಮೀಟರ್‌ಗೆ ರೂ. 6.00 ಟಿಕೆಟ್ ದರ ನಿಗದಿಪಡಿಸಲಾಗಿದೆ. ಆದರೆ ಸೆಮಿ ಹೈಸ್ಪೀಡ್ ರೈಲ್ವೇಗೆ ಅನುಗುಣವಾದ ದರವು 2020 ರ ದರದ ದರಗಳ ಪ್ರಕಾರ ಪ್ರತಿ ಕಿಲೋಮೀಟರ್‌ಗೆ ಕೇವಲ ರೂ. 2.75.

ವಿವರವಾದ ಯೋಜನಾ ವರದಿಯ ಪ್ರಕಾರ, ಸಿಲ್ವರ್‌ಲೈನ್‌ನ ವೆಚ್ಚ ರೂ. 63,940 ಕೋಟಿ ಆಗಿದೆ. ರೈಲ್ವೆಗೆ ಸೇರಿದ ಭೂಮಿಯ ಬೆಲೆ ರೂ. 975 ಕೋಟಿಗಳು. ಇದರ ಜೊತೆಗೆ ರೂ.2,150 ಕೋಟಿಗಳು ಕೇಂದ್ರ ಪಾಲು. ರಾಜ್ಯದ ಪಾಲು ರೂ.3,225 ಕೋಟಿಗಳು. ಸಾರ್ವಜನಿಕ ಷೇರು ಪಾಲುದಾರಿಕೆಯಿಂದ ರೂ. 4,252 ಕೋಟಿಗಳನ್ನು ಪಡೆಯಲಾಗುವುದು. ವೆಚ್ಚವನ್ನು ಪೂರೈಸಲು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಾಯವನ್ನು ಸಹ ಬಳಸಲಾಗುತ್ತದೆ. ಹುಡ್ಕೋ ಈಗಾಗಲೇ ರೂ. 3,000 ಕೋಟಿಗಳನ್ನು ಮಂಜೂರು ಮಾಡಿದೆ.

ವಿಶ್ವಸಂಸ್ಥೆಯ ‘ವಿಪತ್ತು ಅಪಾಯ ಕಡಿತ’ (ಡಿಸಾಸ್ಟರ್ ರಿಸ್ಕ್ ರಿಡಕ್ಷನ್)ದ ಕಚೇರಿಯ ಮುಖ್ಯಸ್ಥ ಮುರಳಿ ತುಮ್ಮರುಕುಡಿ ಅವರ ಪ್ರಕಾರ, ಬದಲಾವಣೆಗಳು ಅಗಾಧವಾಗಿರುತ್ತವೆ ಮತ್ತು ಅವುಗಳು ಹಲವಾರು ಹಂತಗಳಲ್ಲಿ ಗ್ರಹಿಕೆಗೆ ಬರುತ್ತವೆ.. “ಎರ್ನಾಕುಲಂನಿಂದ ಯಾರಾದರೂ ಯಾವುದೇ ವ್ಯವಹಾರವನ್ನು ನಡೆಸಲು ತಿರುವನಂತಪುರಕ್ಕೆ ಬಂದರೆ, ರಾತ್ರಿಯ ತಂಗುವಿಕೆ ಅನಿವಾರ್ಯವಾದ ಕಾರಣ ಅದನ್ನು ಪೂರ್ಣಗೊಳಿಸಲು ಕನಿಷ್ಠ ಎರಡು ದಿನಗಳು ಬೇಕಾಗುತ್ತದೆ. ಹೇಗಾದರೂ, ದೂರವನ್ನು ಒಂದೂವರೆ ಅಥವಾ ಎರಡು ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾದರೆ, ಅದು ನಿಸ್ಸಂದೇಹವಾಗಿ ನಮ್ಮ ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸುತ್ತದೆ. ಅಂತಹ ಸೂಪರ್‌ಫಾಸ್ಟ್ ರೈಲು ನಿಜವಾಗಿಯೂ ನಮಗೆ ಅಗತ್ಯವಿದೆಯೇ ಎಂದು ನಾವು  ಯೋಚಿಸಬಹುದು. ಸಂಚಾರ ದಟ್ಟಣೆ ಅತೀ ಹೆಚ್ಚಿರುವಾಗ, ಒಸಾಕಾ ಮತ್ತು ಟೋಕಿಯೊ ನಡುವೆ ಪ್ರತಿ ಮೂರು ನಿಮಿಷಗಳಿಗೊಮ್ಮೆ ಅತೀ ವೇಗದ ಅಥವಾ ಬುಲೆಟ್ ರೈಲು (ಜಪಾನ್‌ನಲ್ಲಿ ಶಿಂಕಾನ್ಸೆನ್ ಎಂದು ಕರೆಯಲ್ಪಡುತ್ತದೆ) ಓಡುತ್ತವೆ. ಕೇರಳ ಆರ್ಥಿಕ ಶಕ್ತಿಯಾಗಿ ವೇಗವಾಗಿ ಬೆಳೆಯುತ್ತಿದೆ. ರಾಜ್ಯದ ಜಿಡಿಪಿ ಪ್ರತಿ ವರ್ಷ ಏರುತ್ತಿದೆ. ಆದ್ದರಿಂದ, ಮೂಲಸೌಕರ್ಯ ಅಭಿವೃದ್ಧಿಯನ್ನು ನಾವು ಇಂದು ನೋಡುತ್ತಿರುವ ಕೇರಳಕ್ಕೆ ಯೋಜಿಸಬಾರದು ಆದರೆ 2030 ಅಥವಾ 2040 ಅಥವಾ 2050 ರ ಕೇರಳಕ್ಕೆ ಯೋಜಿಸಬೇಕಾಗಿದೆ. ನಾವು ಇಂದಿನಂತೆ ಆಗಲೂ 10 ರಿಂದ 12 ಗಂಟೆಗಳ ಪ್ರಯಾಣದಲ್ಲಿ ಕಳೆಯಬೇಕೇ?” ಎಂದು ಮುರಳಿ ಕೇಳುತ್ತಾರೆ.

ಸಿಲ್ವರ್ ಲೈನ್ ಯೋಜನೆಯಿಂದ ಮನೆ, ಕಟ್ಟಡಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸರಿಸುಮಾರು 9,314 ಕಟ್ಟಡಗಳು ಉದ್ದೇಶಿತ ಜೋಡಣೆಯ ಮಾರ್ಗದಲ್ಲಿ ಬರುತ್ತವೆ ಎಂಬುದು ನಿಜವಾದರೂ, ಆ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದಲ್ಲದೆ, ಸಂಪೂರ್ಣ ಮನೆಗಳನ್ನು ಸ್ಥಳಾಂತರಿಸಲು ತಾಂತ್ರಿಕ ಪರಿಣತಿಯನ್ನು ಹುಡುಕಲಾಗುತ್ತಿದೆ, ಅವುಗಳನ್ನು ಹಾಗೆಯೇ ಇರಿಸಲಾಗುತ್ತದೆ. ಭೂಸ್ವಾಧೀನದ ಪ್ರದೇಶವನ್ನು ಕಡಿಮೆ ಮಾಡಲು, ‘ಕಟ್ ಅಂಡ್ ಕವರ್’ ನಿರ್ಮಾಣ ಶೈಲಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಪುನರ್ವಸತಿ ಕಾನೂನುಗಳ ಪ್ರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ, ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಮತ್ತು ನಗರ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆಯ ಎರಡು ಪಟ್ಟು ಪರಿಹಾರವನ್ನು ಪಾವತಿಸಲಾಗುತ್ತದೆ. ಭೂಸ್ವಾಧೀನ ಸೇರಿದಂತೆ ಒಟ್ಟು ರೂ.13,265 ಕೋಟಿಗಳನ್ನು ಹಾನಿ ಪರಿಹಾರಕ್ಕೆ ಮೀಸಲಿಡಲಾಗಿದೆ. ಇದರಲ್ಲಿ ರೂ. 1,730 ಕೋಟಿಗಳನ್ನು ಪುನರ್ವಸತಿ ಹಾಗೂ ರೂ.4,460 ಕೋಟಿಗಳನ್ನು ಮನೆಗಳ ಪರಿಹಾರಕ್ಕಾಗಿ ನೀಡಲಾಗುವುದು. ಈ ವಿಷಯದ ಬಗ್ಗೆ ಹಣಕಾಸು ಸಂಸ್ಥೆಗಳೊಂದಿಗೆ ಚರ್ಚೆಯನ್ನು ಪ್ರಾರಂಭಿಸಲಾಗಿದೆ. ಕೊಚುವೇಲಿಯಿಂದ ಚೆಂಗನ್ನೂರು ವರೆಗಿನ ಸಿಲ್ವರ್‌ಲೈನ್‌ಗಾಗಿ ಮೊದಲ ಹಂತದ ಭೂಸ್ವಾಧೀನಕ್ಕಾಗಿ ಹುಡ್ಕೊ ಈಗಾಗಲೇ ರೂ.3,000 ಕೋಟಿ ಮುಂಗಡ ನೀಡಿದೆ.

ಈ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಬಿಜೆಪಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಪರಿಸರವಾದಿಗಳ ಒಂದು ವಿಭಾಗ ‘ಸಿಲ್ವರ್‌ಲೈನ್ ವಿರುಧ ಜನಕೀಯ ಸಮಿತಿ’  ನೇತೃತ್ವದಲ್ಲಿ ಪ್ರತ್ಯೇಕ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದೆ. ಸಿಲ್ವರ್ ಲೈನ್ ಯೋಜನೆಯಿಂದ ರಾಜ್ಯದ ಸಾಲ ಹೆಚ್ಚಾಗಲಿದ್ದು, ಭಾರೀ ಹಗರಣ ನಡೆಯುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಯೋಜನೆಯು ಆರ್ಥಿಕವಾಗಿ ದುಸ್ತರವಾಗಿದೆ ಮತ್ತು ಇದು 30,000 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲು ಕಾರಣವಾಗುತ್ತದೆ ಎಂದು ವಿರೋಧ ಪಕ್ಷದ ಸಂಸದರು ಸಹಿ ಮಾಡಿದ ಮನವಿಯಲ್ಲಿ ತಿಳಿಸಲಾಗಿದೆ. ಪ್ರಸ್ತಾವಿತ ಮಾರ್ಗವು ಅಮೂಲ್ಯವಾದ ಜೌಗು ಪ್ರದೇಶಗಳು, ಭತ್ತದ ಗದ್ದೆಗಳು ಮತ್ತು ಬೆಟ್ಟಗಳ ಮೂಲಕ ಸಾಗುವುದರಿಂದ ಸಿಲ್ವರ್‌ಲೈನ್ ರಾಜ್ಯದ ಪರಿಸರಕ್ಕೆ ಹಾನಿಕಾರಕವಾಗಿದೆ ಎಂದು ಪರಿಸರವಾದಿಗಳು ವಾದಿಸುತ್ತಾರೆ.

“ರಚನಾತ್ಮಕ ಟೀಕೆಗಳನ್ನು ಕೇಳಲು ಸರ್ಕಾರ ಸದಾ ಸಿದ್ಧವಿದೆ. ಆದರೆ ಅಭಿವೃದ್ಧಿ ಯೋಜನೆಗಳನ್ನು ಅಡ್ದಿಪಡಿಸುವ ಉದ್ದೇಶದಿಂದ ಯಾವುದೇ ವಿರೋಧವು ಜನರಿಗೆ ನಾವು ನೀಡಿದ ಭರವಸೆಯನ್ನು ಈಡೇರಿಸದಂತೆ ತಡೆಯುವುದಿಲ್ಲ. ಕೇರಳದ ಅಭಿವೃದ್ಧಿಗಾಗಿ ನಾವು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ. ಅಂತಹ ಅಭಿವೃದ್ಧಿ ಯೋಜನೆಗಳನ್ನು ಹಳಿತಪ್ಪಿಸಲು ಪ್ರಯತ್ನಿಸಿದರೆ, ಅದು ನಮ್ಮ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ, ಅದನ್ನು ನಾವು ಅವಕಾಶ ಕೊಡುವುದಿಲ್ಲ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಅನು: ರಾಮು ಎಸ್.ಕೆ. –  ಕೃಪೆ: ಪೀಪಲ್ಸ್ ಡೆಮಾಕ್ರಸಿ

Donate Janashakthi Media

Leave a Reply

Your email address will not be published. Required fields are marked *