ತಿರುವನಂತಪುರಂ: 2019ರ ಲೋಕಸಭಾ ಚುನಾವಣೆಯಲ್ಲಿ ತಾನು ಅನುಭವಿಸಿದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕೇರಳದ ಸಿಪಿಐ(ಎಂ) 2024ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದು, ಪಕ್ಷದ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದ ಹಾಲಿ ಒಬ್ಬ ಸಚಿವರು, ನಾಲ್ವರು ಮಾಜಿ ಸಚಿವರು, ಪೊಲಿಟ್ಬ್ಯುರೊ ಸದಸ್ಯರು ಮತ್ತು ನಾಲ್ವರು ಹಾಲಿ ಶಾಸಕರು ಸೇರಿದಂತೆ ಪಕ್ಷದ ದಿಗ್ಗಜರನ್ನು ಕಣಕ್ಕಿಳಿಸಲು ಸಿಪಿಐ(ಎಂ) ನಿರ್ಧರಿಸಿದೆ.
ಪ್ರತಿ ಕ್ಷೇತ್ರದ ಅಭ್ಯರ್ಥಿಯನ್ನು ನಿರ್ಧರಿಸುವ ಮೊದಲು ಪಕ್ಷವು ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ ಎಂದು ಸಿಪಿಐ(ಎಂ)ನ ಹೇಳಿದ್ದಾಗಿ ವರದಿಯಾಗಿದೆ. ಪಟ್ಟಿಯಲ್ಲಿ, ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್, ಮಾಜಿ ಸಚಿವರಾದ ಟಿ.ಎಂ.ಥಾಮಸ್ ಐಸಾಕ್, ಕೆ.ಕೆ.ಶೈಲಜಾ, ಎಳಮರಮ್ ಕರೀಂ ಮತ್ತು ಸಿ.ರವೀಂದ್ರನಾಥ್ ಇದ್ದಾರೆ. ಅಲ್ಲದೆ, ಪಾಲಿಟ್ಬ್ಯುರೊ ಸದಸ್ಯ ಎ.ವಿಜಯರಾಘವನ್ ಮತ್ತು ನಟ, ರಾಜಕಾರಣಿ ಮುಖೇಶ್ ಅವರ ಹೆಸರು ಸಿಪಿಎಂ ಪಕ್ಷದ ರಾಜ್ಯ ಸಮಿತಿ ಬುಧವಾರ ಪ್ರಕಟಿಸಿದೆ.
ಇದನ್ನೂ ಓದಿ: ಲೋಕಸಭೆಗೆ ಇಂಡಿಯಾ ಮೈತ್ರಿ | ದೆಹಲಿ ಮಾತುಕತೆ ಫಲಪ್ರದ; ಎಎಪಿಗೆ 4, ಕಾಂಗ್ರೆಸ್ಗೆ 3
ಅದರಲ್ಲೂ ಮುಖ್ಯವಾಗಿ, ಮುಸ್ಲಿಂ ಲೀಗ್ ಭದ್ರಕೋಟೆಯೆಂದೆ ಕರೆಯಲ್ಪಡುವ ಪೊನ್ನಾನಿಗೆ ಮುಸ್ಲಿಂ ಲೀಗ್ನ ಮಾಜಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ಹಂಸ ಅವರನ್ನು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸಿಪಿಐ(ಎಂ) ಹೆಸರಿಸಿದೆ. ಕೆ.ಎಸ್. ಹಂಸ ಅವರು ಸಮಸ್ತ ಕೇರಳ ಜೆಮಿಯ್ಯತುಲ್ ಉಲಮಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಸ್ಥಳೀಯ ಮುಸ್ಲಿಮರ ನಡುವೆ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ.
ಉಳಿದಂತೆ, ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಪಕ್ಷದ ಸಂಪ್ರದಾಯದಂತೆ ಮೂರು ಜಿಲ್ಲಾ ಕಾರ್ಯದರ್ಶಿಗಳಾದ ವಿ ಜಾಯ್, ಎಂವಿ ಜಯರಾಜನ್ ಮತ್ತು ಎಂವಿ ಬಾಲಕೃಷ್ಣನ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಸಿಪಿಎಂನ ಏಕೈಕ ಹಾಲಿ ಸಂಸದ ಎ.ಎಂ. ಆರಿಫ್ ಅವರಿಗೆ ಅಲಪ್ಪುಳವನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಇಬ್ಬರು ಮಹಿಳೆಯರಾದ ಶೈಲಜಾ ಮತ್ತು ಹೊಸ ಮುಖ ಕೆ.ಜೆ. ಶೈನ್, ಡಿವೈಎಫ್ಐ ರಾಜ್ಯಾಧ್ಯಕ್ಷ ವಿ. ವಸೀಫ್ ಅವರನ್ನೂ ಒಳಗೊಂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೇರಳ ರಾಜಕೀಯದಲ್ಲಿ ತನಗೊಂದು ಸ್ಥಾನವನ್ನು ಕಲ್ಪಿಸಿಕೊಂಡಿರುವ ಶೈಲಜಾ ಅವರ ಮೂಲಕ 15 ವರ್ಷಗಳ ನಂತರ ತನ್ನ ಹಿಂದಿನ ಭದ್ರಕೋಟೆಯಾದ ವಡಕರವನ್ನು ವಶಪಡಿಸಿಕೊಳ್ಳುವ ಗುರಿಯನ್ನು ಅವರ ಮೂಲಕ ಪಕ್ಷ ಹೊಂದಿದೆ.
ಇದನ್ನೂ ಓದಿ: ರಷ್ಯಾ – ಉಕ್ರೇನ್ ಯುದ್ಧ ಭೂಮಿಯಲ್ಲಿ ಗುಜರಾತ್, ಕರ್ನಾಟಕ & ಯುಪಿಯ ಯುವಕರು; ಸರ್ಕಾರದ ಮಧ್ಯಪ್ರವೇಶಕ್ಕೆ ಓವೈಸಿ ಪತ್ರ
ಕೇರಳದಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿದ್ದು 2019ರ ಚುನಾವಣೆಯಲ್ಲಿ ಸಿಪಿಐ(ಎಂ) 1ಸ್ಥಾನಗಳಲ್ಲಷ್ಟೆ ಗೆಲುವು ಕಂಡಿತ್ತು.
ಸಿಪಿಎಂ ಘೋಷಿಸಿದ 15 ಜನರ ಪಟ್ಟಿ ಇಂತಿದೆ
- ಅಟ್ಟಿಂಗಲ್ – ವಿ. ಜಾಯ್ (ಸಿಪಿಐ(ಎಂ) ತಿರುವನಂತಪುರಂ ಜಿಲ್ಲಾ ಕಾರ್ಯದರ್ಶಿ, ವರ್ಕಳ ಶಾಸಕ)
- ಕೊಲ್ಲಂ – ಎಂ. ಮುಖೇಶ್ (ಕೊಲ್ಲಂ ಶಾಸಕ, ನಟ)
- ಪತ್ತನಂತಿಟ್ಟಾ – ಟಿ.ಎಂ. ಥಾಮಸ್ ಐಸಾಕ್ (ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ, ಮಾಜಿ ಸಚಿವ)
- ಆಲಪ್ಪುಳ – ಎ.ಎಂ. ಆರಿಫ್ (ಹಾಲಿ ಸಂಸದ)
- ಇಡುಕ್ಕಿ – ಜಾಯ್ಸ್ ಜಾರ್ಜ್ (ಮಾಜಿ ಸಂಸದ)
- ಎರ್ನಾಕುಲಂ – ಕೆ.ಜೆ. ಶೈನ್ (ಉತ್ತರ ಪರವೂರ್ ಕೌನ್ಸಿಲರ್, ಹೊಸ ಮುಖ)
- ಚಾಲಕುಡಿ – ಸಿ. ರವೀಂದ್ರನಾಥ್ (ಮಾಜಿ ಸಚಿವ)
- ಪಾಲಕ್ಕಾಡ್ – ಎ. ವಿಜಯರಾಘವನ್ (ಪಾಲಿಟ್ ಬ್ಯೂರೋ ಸದಸ್ಯ)
- ಆಲತ್ತೂರು – ಕೆ. ರಾಧಾಕೃಷ್ಣನ್ (ಹಾಲಿ ಸಚಿವ, ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ)
- ಪೊನ್ನಾನಿ – ಕೆ.ಎಸ್. ಹಂಸ (ಸ್ವತಂತ್ರ)
- ಮಲಪ್ಪುರಂ – ವಿ. ವಸೀಫ್ (ಡಿವೈಎಫ್ಐ ರಾಜ್ಯಾಧ್ಯಕ್ಷ)
- ಕೋಝಿಕ್ಕೋಡ್ – ಎಲಮರಮ್ ಕರೀಂ (ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ, ರಾಜ್ಯ ಸಭಾ ಸದಸ್ಯ, ಮಾಜಿ ಸಚಿವ)
- ವಡಕರ – ಕೆ.ಕೆ. ಶೈಲಜಾ (ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ, ಮಟ್ಟನೂರು ಶಾಸಕಿ, ಮಾಜಿ ಸಚಿವೆ)
- ಕಣ್ಣೂರು – ಎಂ.ವಿ. ಜಯರಾಜನ್ (ಪಕ್ಷದ ಕಣ್ಣೂರು ಜಿಲ್ಲಾ ಕಾರ್ಯದರ್ಶಿ)
- ಕಾಸರಗೋಡು – ಎಂ.ವಿ. ಬಾಲಕೃಷ್ಣನ್ (ಪಕ್ಷದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ)
ವಿಡಿಯೊ ನೋಡಿ: ಧರೆ ಬಗೆದು ನೀರಿನ ದಾಹ ತೀರಿಸುವ ಗೌರಿ Janashakthi Media