ತಿರುವನಂತಪುರಂ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರಿಗೆ ಕೇರಳದ ಎಡರಂಗ ಸರಕಾರವು 2 ಕೋಟಿ ರೂ. ನಗರ ಬಹುಮಾನ ಹಾಗೂ ಕ್ರೀಡಾ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡುವುದಾಗಿ ಪ್ರಕಟಿಸಿದೆ. ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದರು.
ಪಿ.ಆರ್ ಶ್ರೀಜೇಶ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕ (ಕ್ರೀಡೆ) ಹುದ್ದೆಯನ್ನು ಹೊಂದಿದ್ದರು. ಇದೀಗ ಅವರನ್ನು ಜಂಟಿ ನಿರ್ದೇಶಕರಾಗಿ (ಕ್ರೀಡೆ) ಬಡ್ತಿ ನೀಡಲಾಗುವುದು ಎಂದು ಕೇರಳ ರಾಜ್ಯ ಸರ್ಕಾರ ಪ್ರಕಟಣೆ ನೀಡಿದೆ. ಅಲ್ಲದೆ, ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಕೇರಳದ 8 ಕ್ರೀಡಾಪಟುಗಳಿಗೂ ತಲಾ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡುವುದಾಗಿ ಕೇರಳದ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಅವರು ತಿಳಿಸಿದ್ದಾರೆ.
ಇದನ್ನು ಓದಿ: ಭಾರತ ಒಲಿಂಪಿಕ್ಸ್ನಲ್ಲಿ ವಿಶ್ವಗುರು ಆದೀತೆ?
ಅಷ್ಟೇ ಅಲ್ಲದೆ, ಅವರಿಗೆ ಈ ಹಿಂದೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಆಟಗಾರನಿಗೆ ಕೇರಳ ಸರ್ಕಾರ ಯಾವುದೇ ಪ್ರೋತ್ಸಾಹ ಧನ ಘೋಷಿಸಿಲ್ಲ ಎಂದು ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಶ್ರೀಜೇಶ್ ಅವರಿಗೆ ತಮ್ಮ ಹುದ್ದೆಯಲ್ಲಿ ಬಡ್ತಿಯೊಂದಿಗೆ ಬಹುಮಾನ ಮೊತ್ತ ಘೋಷಿಸಲಾಗಿದೆ.
ಒಲಿಂಪಿಕ್ಸ್ನಲ್ಲಿ 41 ವರ್ಷಗಳ ಬಳಿಕ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಗೋಲ್ ಕೀಪರ್ ಶ್ರೀಜೇಶ್ ಅವರಿಗೆ ಮತ್ತು ಇತರ ಆಟಗಾರರಿಗೆ ಇದೀಗ ಕೇರಳ ಸರ್ಕಾರ ಕೂಡ ರಾಜ್ಯದ ಆಟಗಾರರಿಗೆ ಬಹುಮಾನ ಮೊತ್ತವನ್ನು ಘೋಷಿಸಿದೆ. ಟೋಕಿಯೊ 2020 ಒಲಿಂಪಿಕ್ಸ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡ ಕಂಚಿನ ಪದಕ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ.
ಶ್ರೀಜೇಶ್ ಅವರಿಗೆ ಈ ಹಿಂದೆ ದುಬೈ ಮೂಲದ ಉದ್ಯಮಿ ವಿಪಿಎಸ್ ಹೆಲ್ತ್ಕೇರ್ ಮುಖ್ಯಸ್ಥ ಡಾ. ಶಂಸೀರ್ ವಯಲಿಲ್ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದರು.