ತಿರುವನಂತಪುರ: ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಯಾಕೆ? ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಒಕ್ಕೂಟ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೇರಳದ ಕೋಟಾಯಂ ನಿವಾಸಿ ಎಂ ಪೀಟರ್ ಲಸಿಕೆ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೋದಿ ಭಾವಚಿತ್ರ ಇಲ್ಲದ ಪ್ರಮಾಣ ಪತ್ರ ನೀಡಬೇಕೆಂದು ಅವರ ಮನವಿಯಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ನಗರೇಶ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ವಾರದಲ್ಲಿ ಉತ್ತರಿಸುವಂತೆ ಹೇಳಿದೆ.
ಅರ್ಜಿದಾರ ಎಂ ಪೀಟರ್ ಇತರ ದೇಶದಲ್ಲಿ ವಿತರಣೆ ಮಾಡುವ ಲಸಿಕೆ ಪ್ರಮಾಣ ಪತ್ರವನ್ನು ನ್ಯಾಯಾಲಕ್ಕೆ ಸಲ್ಲಿಸಿದ್ದಾರೆ. ಇಂಡೋನೇಷಿಯಾ, ಇಸ್ರೇಲ್, ಜರ್ಮನಿ ಸೇರಿದಂತೆ ಇತರ ದೇಶಗಳಲ್ಲಿ ಲಸಿಕೆ ಪ್ರಮಾಣ ಪತ್ರದಲ್ಲಿ ಮಹತ್ವದ ಮಾಹಿತಿಗಳು ಇದೆ. ಆದರೆ ಅಲ್ಲಿನ ನಾಯಕರ ಫೋಟೋ ಇಲ್ಲ. ಹೀಗಾಗಿ ಭಾರತದಿಂದ ವಿದೇಶಕ್ಕೆ ತೆರಳುವ ವೇಳೆ ಮೋದಿ ಫೋಟೋ ಇರುವ ಪ್ರಮಾಣ ಪತ್ರಕ್ಕಿಂತ ಯಾವುದೇ ಫೋಟೋ ಇಲ್ಲದ ಪ್ರಮಾಣ ಪತ್ರ ನೀಡುವಂತೆ ಎಂ ಪೀಟರ್ ಮನವಿ ಮಾಡಿದ್ದಾರೆ.
ಭಾರತದ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಅಪ್ರಸ್ತುತ. ವಕೀಲ ಅಜಿತ್ ಜೊಯ್ ನೆರವಿನಲ್ಲಿ ಅರ್ಜಿಯನ್ನು ಸಲ್ಲಿಸಿದ ಎಂ ಪೀಟರ್ ತಮ್ಮ ಅರ್ಜಿಯಲ್ಲಿ ಕೊರೊನಾ ವಿರುದ್ಧದ ಹೋರಾಟವನ್ನು ಕೇಂದ್ರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಲಸಿಕೆ ಪ್ರಮಾಣ ಪತ್ರ ಮೋದಿಯಿಂದ ಮಾತ್ರ ಎಲ್ಲವೂ ಸಾಧ್ಯವಾಗಿದೆ ಅನ್ನುವಂತಿದೆ. ಹೀಗಾಗಿ ದೇಶದ ಪ್ರಜೆಗಳಿಗೆ ಮೋದಿ ಭಾವಚಿತ್ರ ಇಲ್ಲದ ಲಸಿಕೆ ಪ್ರಮಾಣ ಪತ್ರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.