ಕೊಚ್ಚಿ: ಕೊಚ್ಚಿನ್ ದೇವಸ್ವಂ ಬೋರ್ಡ್‌ನ ಅಧೀನದಲ್ಲಿರುವ ತ್ರಿಪುಣಿತೂರಿನ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ‘ಪಂತ್ರಂದು ನಮಸ್ಕಾರಂ’ ಕುರಿತ ಫೆಬ್ರವರಿ 4ರಂದು ‘ಕೇರಳ ಕೌಮುದಿ’ ದಿನಪತ್ರಿಕೆಯು ‘ಪಂತ್ರಂದು ನಮಸ್ಕಾರಂ’ ಕುರಿತಂತೆ ವರದಿಯನ್ನು ಆಧರಿಸಿ ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ವಿಚಾರಣೆ ಕೈಗೊಂಡಿದೆ.
ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.
ತ್ರಿಪುಣಿತುರಾದ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ಭಕ್ತರು ತಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಹನ್ನೆರಡು ಬ್ರಾಹ್ಮಣರ ಪಾದ ತೊಳೆದಿರುವ ಸಂಬಂಧ ಮಲಯಾಳಂ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಕೇರಳ ಹೈಕೋರ್ಟ್ ವಿಚಾರಣೆ ಆರಂಭಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಚ್ಚಿನ್ ದೇವಸ್ವಂ ಬೋರ್ಡ್‌ನ ವಕೀಲರು ಸುದ್ದಿಯಲ್ಲಿ ಉಲ್ಲೇಖಿಸಿರುವಂತೆ ಭಕ್ತರು ಬ್ರಾಹ್ಮಣರ ಪಾದವನ್ನು ತೊಳೆಯುವುದಿಲ್ಲ. ದೇವಸ್ಥಾನದ ತಂತ್ರಿ 12 ಅರ್ಚಕರ ಪಾದಗಳನ್ನು ತೊಳೆಯುತ್ತಾನೆ ಎಂದಿದ್ದಾರೆ.
ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೊಚ್ಚಿನ್ ದೇವಸ್ವಂ ಬೋರ್ಡ್‌ನ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಫೆಬ್ರವರಿ 25ರಂದು ನ್ಯಾಯಾಲಯವು ಈ ವಿಷಯವನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.