ತಿರುವನಂತಪುರ: “ರಾಜ್ಯಪಾಲರಿಗೆ ಸಲಹೆ ನೀಡುವ ಪೂರ್ಣ ಹಕ್ಕು ಮುಖ್ಯಮಂತ್ರಿ ಮತ್ತು ಸಚಿವರಿಗೆ ಇದೆ. ಆದರೆ, ರಾಜ್ಯಪಾಲರ ಘನತೆಯನ್ನು ಕುಗ್ಗಿಸುವಂತೆ ಸಚಿವರು ಹೇಳಿಕೆ ನೀಡಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಸಚಿವರನ್ನು ವಜಾಗೊಳಿಸುವುದೂ ಸೇರಿದೆ” ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಎಚ್ಚರಿಕೆ ರವಾನೆಯಾಗಿದೆ.
ಕೇರಳ ಎಡರಂಗ ಸರ್ಕಾರದ ವಿರುದ್ಧ ಒಂದಲ್ಲ ಒಂದು ಖ್ಯಾತೆ ತೆಗೆದು ವಿವಾದ ಎಬ್ಬಿಸುತ್ತಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, “ವಜಾ ಮಾಡ್ತೀನಿ ಹುಷಾರ್” ಎಂಬ ಹೇಳಿಕೆ ಇದೀಗ ವಿವಾದವನ್ನು ಎಬ್ಬಿಸಿದೆ.
ಇದರೊಂದಿಗೆ ಕೇರಳ ಎಡರಂಗ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆದಿರುವ ಮುನಿಸು-ಮಾತಿನ ಕದನ ಈಗ ಬೀದಿಗೆ ಬಂದಿದೆ. “ರಾಜ್ಯಪಾಲ ಅರಿಫ್ ಮೊಹ್ಮದ್ ಖಾನ್ ಅವರು ರಾಜ್ಯದಲ್ಲಿ ಆರ್‌ಎಸ್‌ಎಸ್ ಅಜೆಂಡಾ ಜಾರಿಗೆ ತರುತ್ತಿದ್ದಾರೆ” ಎಂದು ಕೇರಳ ಶಿಕ್ಷಣ ಸಚಿವೆ ಆರ್. ಬಿಂದು ಅವರು ಇತ್ತೀಚಿಗೆ ಮಾಡಿದ್ದ ಆರೋಪವು ರಾಜ್ಯಪಾಲರನ್ನು ಕೆರಳಿಸಿದ್ದು, ಈ ಬೆದರಿಕೆಯು ಅದರ ಪರಿಣಾಮ ಎಂದೇ ವಿಶ್ಲೇಷಿಸಲಾಗುತ್ತಿದೆ.
ಶಿಕ್ಷಣ ಸಚಿವೆ ಆರ್. ಬಿಂದು ಅವರು, ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಹೌದು. ಅರಿಫ್ ಮೊಹ್ಮದ್ ಖಾನ್ ಅವರು ಇತ್ತೀಚೆಗೆ ತಮ್ಮ ಅಧಿಕಾರ ಬಳಸಿ ಕೇರಳ ವಿಶ್ವವಿದ್ಯಾಲಯದ 15 ಸೆನೆಟ್ ಸದಸ್ಯರನ್ನು ವಜಾಗೊಳಿಸಿದ್ದರು. ಈ ಸೆನೆಟ್ ಸದಸ್ಯರು ತಮ್ಮ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿದ್ದಾರೆ ಎನ್ನುವುದು ರಾಜ್ಯಪಾಲರು ನೀಡಿದ್ದ ವಿವರಣೆ. ಈ ಹಿನ್ನೆಲೆಯಲ್ಲಿ, ವಿಧಾನಸಭೆಯಲ್ಲಿ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ ಮಂಡಿಸಿದ ಸಮಯದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಸಚಿವರು, ರಾಜ್ಯಪಾಲರ ಮೇಲೆ ಆರೋಪ ಮಾಡಿದ್ದರು.
ಈಗ ಆರಿಫ್ ಮೊಹ್ಮದ್ ಖಾನ್ ಅವರು ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ಟ್ವಿಟ್ ಒಂದನ್ನು ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವರ ವಜಾಕ್ಕೆ ರಾಜ್ಯಪಾಲರಿಗೆ ಅಧಿಕಾರ ಇದೆಯೆ?
ಸಂವಿಧಾನ ತಜ್ಞರ ಪ್ರಕಾರ, ಮುಖ್ಯಮಂತ್ರಿಯ ಶಿಫಾರಸ್ಸು ಇಲ್ಲದೆ, ಯಾವುದೇ ಸಚಿವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂಬ ಸ್ಪಷ್ಟ ಅಂಶವಿದೆ. ಹೆಚ್ಚೆಂದರೆ, ಅವರು ಮುಖ್ಯಮಂತ್ರಿಗಳನ್ನು ತಮ್ಮ ಕಚೇರಿಗೆ ಕರೆಸಿ ಸಚಿವರ ಬಗ್ಗೆ ಇರುವ ಅಸಮಾಧಾನವನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಚುನಾಯಿತ ಸರ್ಕಾರವೇ ಇಲ್ಲದ ಸಮಯದಲ್ಲಿ ಮಾತ್ರ ರಾಜ್ಯಪಾಲರಿಗೆ ಪರಮಾಧಿಕಾರ ಇದೆಯೇ ಹೊರತು; ಒಂದು ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸಚಿವರ ನೇಮಕ, ಅವರ ವಜಾ ಎಲ್ಲವೂ ಮುಖ್ಯಮಂತ್ರಿಗಳ ಇಚ್ಛೆಯನ್ನೇ ಅವಲಂಬಿಸಿದೆ ಎನ್ನುತ್ತಾರೆ ತಜ್ಞರು.
ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಸಿಪಿಐ(ಎಂ) ಮನವಿ
ರಾಜ್ಯಪಾಲರ ಬೆದರಿಕೆಯಿಂದ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ರಾಷ್ಟ್ರಪತಿಗಳನ್ನು ಕೋರಿದೆ.
“ಆರಿಫ್ ಮೊಹ್ಮದ್ ಖಾನ್ ಅವರ ಹೇಳಿಕೆಯು ಸಂವಿಧಾನ ವಿರೋಧಿಯಾಗಿದೆ, ಪ್ರಜಾತಂತ್ರ ವಿರೋಧಿಯೂ ಆಗಿದೆ. ತಮಗೆ ಅಸಮಾಧಾನ ಇದೆ ಎಂದಾಕ್ಷಣ ಸಚಿವರೊಬ್ಬರನ್ನು ವಜಾಗೊಳಿಸುವ ನಿರಂಕುಶಾಧಿಕಾರವನ್ನು ಸಂವಿಧಾನವು ರಾಜ್ಯಪಾಲರಿಗೆ ನೀಡಿಲ್ಲ. ಈ ಹೇಳಿಕೆ ನೀಡುವ ಮೂಲಕ ಅವರು ತಮ್ಮ ರಾಜಕೀಯ ಪಕ್ಷಪಾತವನ್ನೂ ಮತ್ತು ಕೇರಳದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಅವರಿಗಿರುವ ದ್ವೇಷವನ್ನು ಬಹಿರಂಗಪಡಿಸಿದ್ದಾರೆ” ಎಂದು ಸಿಪಿಐ(ಎಂ) ಕಿಡಿಕಾರಿದೆ.