ತಿರುವನಂತಪುರಂ: ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧದ ತನಿಖೆಯ ಭಾಗವಾಗಿ, ದೆಹಲಿ ಪೊಲೀಸರ ತಂಡವು ಶುಕ್ರವಾರ ಕೇರಳಕ್ಕೆ ತೆರಳಿ ಮಾಧ್ಯಮದ ಮಾಜಿ ಉದ್ಯೋಗಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ತನಿಖೆಯ ನಂತರ ಅವರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ದೆಹಲಿ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಪೊಲೀಸರ ನಾಲ್ವರ ತಂಡವು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ ನಂತರ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಕೊಡುಮೋನ್‌ಗೆ ತೆರಳಿ, ನ್ಯೂಸ್‌ಕ್ಲಿಕ್‌ನ ಮಾಜಿ ಉದ್ಯೋಗಿ ಅನುಷಾ ಪೌಲ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅನುಷಾ ಪೌಲ್ ಅವರು ನ್ಯೂಸ್‌ಕ್ಲಿಕ್‌ನಲ್ಲಿ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್ ಕ್ಲಿಕ್ ಸಂಸ್ಥಾಪಕ; ಸೋಮವಾರ ವಿಚಾರಣೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದೆಹಲಿ ಪೊಲೀಸರು ನನ್ನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾರೆ. ಅವರು ನನ್ನ ಬ್ಯಾಂಕ್ ವಿವರಗಳನ್ನು ಕೇಳಿದರು. ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ನನ್ನದಾಗಿದ್ದು, ಅದು ನ್ಯೂಸ್‌ಕ್ಲಿಕ್‌ಗೆ ಸೇರಿದ್ದಲ್ಲ. ದೆಹಲಿಗೆ ತೆರಳಿ ಅಲ್ಲಿ ತಮ್ಮ ಮುಂದೆ ಹಾಜರಾಗುವುದು ಉತ್ತಮ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ನನಗೆ ಹೇಳಿದ್ದಾರೆ” ಎಂದು ಪ್ರಸ್ತುತ ದೆಹಲಿಯ ನಿವಾಸಿ ಆಗಿರುವ ಅನುಷಾ ಪೌಲ್ ಹೇಳಿದ್ದಾರೆ. ಅನುಷಾ ಅವರು ಕಳೆದ ವಾರವಷ್ಟೆ ಕೇರಳದ ತನ್ನ ಪೂರ್ವಿಕರ ಮನೆಗೆ ತೆರಳಿದ್ದರು.
“ಸಿಪಿಐ(ಎಂ)ನ ದೆಹಲಿ ರಾಜ್ಯ ಕಾರ್ಯದರ್ಶಿ ಕೆ.ಎಂ. ತಿವಾರಿ ಅವರು ನನಗೆ ತಿಳಿದಿದೆಯೇ ಎಂದು ನನ್ನನ್ನು ಕೇಳಲಾಯಿತು. ಖಂಡಿತ, ನಾನು ಅವರನ್ನು ಬಲ್ಲೆ. ನಾನು ಅವರಿಗೆ ಅದನ್ನು ಹೇಳಿದೆ. ಅವರು ಸಿಪಿಐ(ಎಂ) ನ ರಾಜ್ಯ ಕಾರ್ಯದರ್ಶಿಯಾಗಿದ್ದು, ನಾನು ಸಿಪಿಐ(ಎಂ) ಕಾರ್ಯಕರ್ತೆ ಆಗಿದ್ದೇನೆ. ಜೊತೆಗೆ ನಾನು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ದೆಹಲಿ ಘಟಕದ ರಾಜ್ಯ ಸಮಿತಿ ಸದಸ್ಯೆ ಹಾಗೂ ಅದರ ರಾಜ್ಯ ಖಜಾಂಚಿ ಎಂದು ಅವರಿಗೆ ಹೇಳಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಸ್ ಕ್ಲಿಕ್ ಸಂಸ್ಥೆ ಮೇಲೆ ಆಗಿರುವ ಕಾನೂನು ಬಾಹಿರ ದಾಳಿಯನ್ನು ಖಂಡಿಸಿ ಪ್ರತಿಭಟನೆ
ಅಷ್ಟೆ ಅಲ್ಲದೆ, “ದೆಹಲಿ ಪೊಲೀಸರು, ರೈತರ ಪ್ರತಿಭಟನೆ, ಎನ್‌ಆರ್‌ಸಿ-ಸಿಎಎ ವಿರೋಧಿ ಪ್ರತಿಭಟನೆಗಳು ಅಥವಾ ಕೇಂದ್ರ ಸರ್ಕಾರದ ಕೊರೊನಾ ನಿರ್ವಹಣೆಯ ಬಗ್ಗೆ ವರದಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳನ್ನೂ ಕೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ಧ್ವನಿ ಎತ್ತುತ್ತಿದ್ದ ಸಂಸ್ಥೆ ಮತ್ತು ಅದರ ನೌಕರರಿಗೆ ಬೆದರಿಸಲು ಈ ದಾಳಿ ನಡೆದಿದೆ” ಎಂದು ಪೌಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 4 ರಂದು ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿತ್ತು. ಬಂಧನಕ್ಕೆ ಮುನ್ನ ದೆಹಲಿ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 35ಕ್ಕೂ ಹೆಚ್ಚು ಪತ್ರಕರ್ತರನ್ನು ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಅವರ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಂಡಿತ್ತು.
ಅಮೆರಿಕದ ಟೆಕ್ ಉದ್ಯಮಿ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ನ್ಯೂಸ್ ಕ್ಲಿಕ್ ಹಣ ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ರಾಯ್ ಸಿಂಘಮ್ ಅವರು ಚೀನಾ ಪರವಾಗಿ ಪ್ರಚಾರ ಮಾಡುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಆರೋಪಿಸಿತ್ತು. ಇದರ ನಂತರ ನ್ಯೂಸ್‌ಕ್ಲಿಕ್ ವಿರುದ್ಧ ಆಗಸ್ಟ್‌ನಲ್ಲಿ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿತ್ತು.
ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ