ಅಂಕೋಲಾ : ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯಾಚರಣೆಗೆ ಕೇರಳದ ಇಬ್ಬರೂ ಶಾಸಕರು ಹಾಗೂ ಯುವಜನ ಸಂಘಟನೆಯ ನಾಯಕರು ಕೈ ಜೋಡಿಸಿದ್ದಾರೆ.
ಕೇರಳದಿಂದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐಎಂ ನ ಇಬ್ಬರು ಶಾಸಕರು ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ ಐ ) ನ ರಾಜ್ಯ ಪದಾಧಿಕಾರಿಗಳು ಅಂಕೋಲಾ ಶಿರೂರಿನಲ್ಲಿ ಬೀಡುಬಿಟ್ಟಿದ್ದು ಕಾರ್ಯಾಚರಣೆಗೆ ಸಹಾಯ ಸಹಕಾರ ನೀಡುತ್ತಿದ್ದಾರೆ.
ಗಂಗಾವಳಿ ನೀರಿನ ಮಧ್ಯ ಮಣ್ಣೊಳಗೆ ಸಿಲುಕಿರುವ ಲಾರಿ ಡ್ರೈವರ್ ಅರ್ಜುನ್ ನ ಮೂಲ ಊರಾದ ಕ್ಯಾಲಿಕಟ್ ನಿಂದ ಬಂದಿರುವ ಬಾಲುಶೆರಿ ಶಾಸಕರಾದ ಸಚಿನ್ ದೇವ್ ಹಾಗೂ ತಿರುವಂಬಾಡಿ ಶಾಸಕರಾದ ಲಿಂಟೋ ಜೊಸೆಫ್, ಡಿವೈಎಫ್ ಐ ಕೇರಳ ರಾಜ್ಯಾಧ್ಯಕ್ಷರಾದ ವಿ ವಾಸಿಫ್, ಕೋಜಿಕ್ಕೋಡ್ ಜಿಲ್ಲಾ ಮುಖಂಡರಾದ ಪಿಸಿ ಶೈಜು, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ ವೆಲ್ಲಟ್ಟ, ರಾಜ್ಯ ಸಮಿತಿ ಸದಸ್ಯ ಸುಮೇಶ್ ಟಿಕೆ, ಚೆಂಗಳ ಕಾರ್ಯದರ್ಶಿ ಪ್ರದೀಪ ಟಿಜೆ ಸ್ಥಳದಲ್ಲೇ ಇದ್ದು ಮಾನ್ಯ ಡಿಸಿಯವರೊಂದಿಗೆ ಚರ್ಚಿಸಿ, ಕೇರಳ ಸರ್ಕಾರದ ಪರವಾಗಿ ಅಗತ್ಯ ಸಹಕಾರ ನೀಡುತ್ತಿದ್ದಾರೆ.
ಇದನ್ನೂ ಓದಿ : ಶಿರೂರು ಗುಡ್ಡ ಕುಸಿತ – ವೃದ್ದೆಯ ಶವಕ್ಕೆ ಹೆಗಲು ಕೊಟ್ಟ ಪರ್ತಕರ್ತರು
ಅಕ್ಕಪಕ್ಕದಲ್ಲಿ ನೆರೆಹಾವಳಿಗೆ ಈಡಾದ ಪ್ರದೇಶಕ್ಕೂ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಶಿರೂರಿನ ಬೇಬಿ ನಾಯ್ಕ ಹಾಗೂ ಅವರ ಮೂವರು ಮಕ್ಕಳ ಜೊತೆ ಮಾತನಾಡಿದ ಈ ನಿಯೋಗ ಅವರಿಗೆ ಅಗತ್ಯ ಸಹಾಯ, ಸಹಕಾರ ನೀಡುವ ಭರವಸೆಯನ್ನು ನೀಡಿದೆ. ಶಿರೂರು ಗುಡ್ಡದ ದುರಂತದಲ್ಲಿ ಕಾಣೆಯಾದ ಜಗನ್ನಾಥರನ್ನು ಆದಷ್ಟು ಬೇಗ ಹುಡುಕಿ ಕೊಡಿ, ತಮ್ಮ ಮನೆಗೆ ಬೇರೆ ಆಶ್ರಯವಿಲ್ಲ ಎಂದು ದುಃಖ ಹೇಳಿಕೊಂಡರು. ವಿದ್ಯಾವಂತರಾದ ಮೂವರು ಮಕ್ಕಳಿಗೆ ಖಾಯಂ ಉದ್ಯೋಗಕ್ಕೆ ಮತ್ತು ಗರಿಷ್ಠ ಪರಿಹಾರಧನ ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಈ ವೇಳೆ ತಿಳಿಸಿದರು.
ನಿಯೋಗದಲ್ಲಿ ಕೇರಳ ಸಿಪಿಐಎಂ ಶಾಸಕರಾದ ಸಚಿನ್ ದೇವ್, ಲಿಂಟೋ ಜೊಸೆಫ್, ಡಿವೈಎಫ್ ಐ ಕೇರಳ ರಾಜ್ಯಾಧ್ಯಕ್ಷರಾದ ವಿ ವಾಸಿಫ್, ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್, ಉತ್ತರ ಕನ್ನಡ ಡಿವೈಎಫ್‌ಐ ನಾಯಕ ಶ್ಯಾಮಸನ್ ಇದ್ದರು.