12 ಮಹಿಳೆಯರು ಒಳಗೊಂಡು, ಹೊಸಬರಿಗೆ ಅವಕಾಶ ನೀಡಿದ ಸಿಪಿಐ(ಎಂ) ಪಕ್ಷ
ತಿರುವನಂತಪುರಂ : ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣಾ ಕಣಕ್ಕೆ ಆಡಳಿತರೂಢ ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್)ವನ್ನು ಮುನ್ನಡೆಸುತ್ತಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಇಂದು 83 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
140 ಸ್ಥಾನಗಳ ವಿಧಾನಸಭಾ ಕ್ಷೇತ್ರಗಳಲ್ಲಿ 76 ಸ್ಥಾನಗಳಿಗೆ ಸಿಪಿಐ(ಎಂ) ಪಕ್ಷ ಹಾಗೂ ಒಂಭತ್ತು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಎಲ್‌ಡಿಎಫ್‌ನ ಸಂಚಾಲಕರು ಹಾಗೂ ಸಿಪಿಐ(ಎಂ) ಕಾರ್ಯಕಾರಿ ರಾಜ್ಯ ಕಾರ್ಯದರ್ಶಿ ಎ.ವಿಜಯರಾಘವನ್ ರವರು ಮಾತನಾಡಿದರು.ಮೊದಲಿಗೆ ʻʻಸಿಪಿಐ(ಎಂ) ಪಕ್ಷವು ಸಾಂಸ್ಥಿಕ ಚಟುವಟಿಕೆಗೆ ಸಮಾನ ಪ್ರಾಮುಖ್ಯತೆ ನೀಡುತ್ತದೆ. ಆದರೆ ಕೇವಲ ಸಂಸದೀಯ ರಾಜಕೀಯಕ್ಕೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಪಕ್ಷದ ನಿಯಮದ ಉದ್ದೇಶವು ಎರಡು ಬಾರಿ ಶಾಸಕರಾಗಿರುವವರನ್ನು ಕೈಬಿಡಲಾಗುತ್ತಿದೆ. ಇದರ್ಥ ಅವರನ್ನು ಹೊರಗಿಡುವುದಂತಲ್ಲ, ಹೊಸ ಮುಖಗಳಗೆ ಅವಕಾಶ ನೀಡಬೇಕೆಂದು ನಮ್ಮ ಉದ್ದೇಶವಾಗಿದೆʼʼ ಎಂದು ಹೇಳಿದರು.
ಕೇರಳದಲ್ಲಿ ಆಡಳಿತರೂಢ ಸಿಪಿಐ(ಎಂ) ಪಕ್ಷದಿಂದ ಆಯ್ಕೆಯಾಗಿರುವ ಐದು ಮಂದಿ ಸಚಿವರು ಒಳಗೊಂಡು ಒಟ್ಟು 33 ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಎಂದು ಪ್ರಕಟಿಸಿದೆ. ಈ ಪೈಕಿ ಹನ್ನೆರಡು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ.
30 ವರ್ಷದೊಳಗಿನ ನಾಲ್ವರಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದುವರೆದು 30 ರಿಂದ 40 ವರ್ಷದೊಳಗೆ 08 ಜನರಿಗೆ, 40 ರಿಂದ 50 ವರ್ಷದೊಳಗೆ 13 ಜನರಿಗೆ 51 ರಿಂದ 60 ವರ್ಷದೊಳಗೆ 33 ಜನರು, 60 ವರ್ಷ ಮೇಲ್ಪಟ್ಟ 24 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ.
ಅಭ್ಯರ್ಥಿಗಳಲ್ಲಿ 28 ಜನ ವಕೀಲರು ಸೇರಿದಂತೆ 42 ಮಂದಿ ಪದವೀಧರರು, 14 ಜನ ಸ್ನಾತಕೋತ್ತರ ಮದವೀಧರರು, ಇಬ್ಬರು ಪಿಹೆಚ್‌ಡಿ ಹಾಗೂ ಇಬ್ಬರು ಎಂಬಿಬಿಎಸ್ ವೈದ್ಯರು ಸ್ಪರ್ಧೆಯಲ್ಲಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರು ಜಿಲ್ಲೆಯ ಧರ್ಮಾದಂ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಕ್ಷದ ಹಿರಿಯ ನಾಯಕಿ ಮತ್ತು ಸಚಿವರಾದ ಕೆ.ಕೆ.ಶೈಲಜಾ ಟೀಚರ್ ರವರು ಮಟ್ಟನೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಹಿರಿಯ ಸಚಿವರಾದ ಎಂ.ಎಂ.ಮಣಿ ಇಡುಕ್ಕಿಯ ಉಡುಂಪಂಚೋಳ ಮತ್ತು ಜೆ ಮರ್ಸಿಕುಟ್ಟಿ ಅಮ್ಮ ಕೊಲ್ಲಂನ ಕುಂದಾರ ಕ್ಷೇತ್ರದಿಂದ ಟಿ.ವಿ. ಆಂಕರ್ ಆಗಿದ್ದ ವೀಣಾ ಜಾರ್ಜ್ ಅವರು ಪತ್ತಂತಿಟ್ಟದ ಅರಣ್ಮೂಲಾ ಕ್ಷೇತ್ರ, ನಟ ಮುಖೇಶ್ ಅವರು ಕೊಲ್ಲಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಪಾಲಕ್ಕಾಡ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಎಂ.ಬಿ.ರಾಜೇಶ್ ಅವರು ತ್ರಿಥಾಲಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಸಿಪಿಐ(ಎಂ) ಪಕ್ಷದ ಪ್ರಮುಖರಾದ ಸಚಿವರಾದ ಥಾಮಸ್ ಇಸಾಕ್, ಜಿ.ಸುಧಾಕರನ್, ಇ.ಪಿ.ಜಯರಾಜನ್, ಎ.ಕೆ.ಬಾಲನ್ ಮತ್ತು ಸಿ.ರವೀಂದ್ರನಾಥ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.
ಇಡುಕ್ಕಿ ಜಿಲ್ಲೆಯ ದೇವಿಕುಲಂ ಮತ್ತು ಕಾಸರಗೂಡಿನ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮಾತ್ರ ಪ್ರಕಟಿಸಲಿಲ್ಲ.