ತಿರುವನಂತಪುರಂ: ಮೇ 14 ಮತ್ತು 15 ರಂದು ಕೇರಳದಲ್ಲಿ ಚಂಡಮಾರುತಗಳು ಮತ್ತು ಭಾರಿ ಮಳೆಯಾಗುವ ಹವಾಮಾನ ಮುನ್ಸೂಚನೆಯ ಹಿನ್ನೆಲೆ ಇದೆ. ಕೇರಳಕ್ಕೆ 300 ಟನ್ ನಷ್ಟು ವೈದ್ಯಕೀಯ ಆಮ್ಲಜನಕವನ್ನು ತಕ್ಷಣ ಪೂರೈಸಬೇಕು ಮತ್ತು ದೈನಂದಿನ ಆಮ್ಲಜನಕ ಪೂರೈಕೆಯನ್ನು 450 ಟನ್‌ಗಳಿಗೆ ಹೆಚ್ಚಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಇದನ್ನು ಓದಿ: ಕಠಿಣ ಕ್ರಮದಿಂದ ಕೋವಿಡ್ ನಿಯಂತ್ರಣ-ದೇವಿಶೆಟ್ಟಿ ನೇತೃತ್ವದ ಸಮಿತಿ ರಚನೆ: ಸಿಎಂ ಯಡಿಯೂರಪ್ಪ
ಕೇರಳ ರಾಜ್ಯದಲ್ಲಿ ದಿನಕ್ಕೆ 212.34 ಟನ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ ಮೂರು ದಿನಗಳಲ್ಲಿ ದೈನಂದಿನ ಬೇಡಿಕೆಯಾಗಿ 423.6 ಟನ್‌ಗಳು ಬೇಕಾಗಿವೆ ಎಂದು ವೈಜ್ಞಾನಿಕ ಅಂದಾಜಿದೆ. ಅಲ್ಲದೆ ರಾಜ್ಯದಲ್ಲಿ ಆಮ್ಲಜನಕದ ಅಗತ್ಯವಿರುವ ಕೋವಿಡ್ ರೋಗಿಗಳ ಸಂಖ್ಯೆ ಗಣನೀಯವಾಗಿ ಏರುತ್ತದೆ. ಕೇರಳದ ಆಸ್ಪತ್ರೆಗಳಲ್ಲಿ ಪ್ರಸ್ತುತ ಆಮ್ಲಜನಕದ ಸಂಗ್ರಹವು 24 ಗಂಟೆಗಳ ಕಾಲವೂ ಸಾಕಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಕೇಂದ್ರದ ಸಹಾಯ ಅತ್ಯಗತ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದರು.
ಗಾಳಿ ಮತ್ತು ಮಳೆಯಿಂದಾಗಿ ಆಮ್ಲಜನಕ ಸ್ಥಾವರಗಳು ಮತ್ತು ಭರ್ತಿ ಕೇಂದ್ರಗಳಿಗೆ ವಿದ್ಯುತ್ ಸರಬರಾಜನ್ನು ಅಡ್ಡಿಪಡಿಸಬಹುದು. ರಸ್ತೆ ಸಂಚಾರಕ್ಕೂ ತೊಂದರೆಯಾಗಬಹುದು. ಇದರಿಂದ ರಾಜ್ಯದಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಅಡ್ಡಿಯುಂಟಾಗುವ ಸಂಭವವಿದೆ.
ಇದನ್ನು ಓದಿ: ಲಸಿಕೆಯೊಂದಿಗೆ ಪ್ರಧಾನಮಂತ್ರಿ ಕಾಣೆಯಾಗಿದ್ದಾರೆ: ರಾಹುಲ್ ಗಾಂಧಿ
ಆಮ್ಲಜನಕದ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎಲ್ಲಾ ನಿರ್ಧಾರಗಳಿಗೆ ಕೇರಳ ಬದ್ಧವಾಗಿದೆ. ಕೇರಳದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಕ್ರಮವಹಿಸಬೇಕಾಗಿ ಬಂದಿದೆ. ಅಲ್ಲದೆ ಕೇಂದ್ರದ ನಿರ್ದೇಶನದಂತೆ ಇತರ ರಾಜ್ಯಗಳಿಗೆ ಕೇರಳದಿಂದ ವೈದ್ಯಕೀಯ ಆಮ್ಲಜನಕವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಕೋವಿಡ್ ಅಲೆಯನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರಕಾರ ರಾಜ್ಯಕ್ಕೆ ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿನಂತಿಸಿಕೊಂಡಿದ್ದಾರೆ.