ಕೇರಳ ಸ್ತಬ್ಧಚಿತ್ರ ಪ್ರದರ್ಶಿಸಲು ಪ್ರಧಾನಿಗೆ ಪಿಣರಾಯ್‌ ವಿಜಯನ್‌ ಪತ್ರ

ತಿರುವನಂತಪುರ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳದ ಸ್ತಬ್ಧಚಿತ್ರವನ್ನು ಸೇರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.

ಪ್ರಧಾನಿಗೆ ಪತ್ರವನ್ನು ಬರೆದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳದ ಸ್ತಬ್ಧಚಿತ್ರವನ್ನು ಸೇರಿಸದಿರುವ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಪ್ರಸಕ್ತ ವರ್ಷ ಸ್ವಾತಂತ್ರ್ಯದ 75ನೇ ವರ್ಷಾಚರಣೆ, ಇದನ್ನು ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದೆ. ಕೇರಳದ ಪ್ರಸ್ತಾವಿತ  ಸ್ತಬ್ಧಚಿತ್ರವು ಅತ್ಯಂತ ಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿರುವುದರಿಂದ ಮತ್ತು ಸಮಕಾಲೀನ ಸಾಮಾಜಿಕ ಸನ್ನಿವೇಶದಲ್ಲಿ ಹೆಚ್ಚಿನ ಪ್ರಸ್ತುತತೆ ಹೊಂದಿರುವ ಕಾರಣ ನಾನು ಮೇಲಿನ ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಶತಮಾನದಲ್ಲಿ ಕೇರಳದ ನವೋದಯ ಚಳವಳಿಯನ್ನು ಮುನ್ನಡೆಸಿದ ಮಹಾನ್ ದಾರ್ಶನಿಕ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಚಿತ್ರಣವನ್ನು ನಮ್ಮ ಸ್ತಬ್ದಚಿತ್ರ ಒಳಗೊಂಡಿದೆ. ಅವರ ಆಲೋಚನೆಗಳು ಮತ್ತು ಕಾರ್ಯಗಳು ರಾಷ್ಟ್ರೀಯ ಮಾತ್ರವಲ್ಲದೆ ಪ್ರಪಂಚದಾದ್ಯಂತ ಗಮನ ಸೆಳೆದಿವೆ. ಶ್ರೀನಾರಾಯಣ ಗುರುಗಳು ಮಾನವರ ನಡುವೆ ವಿಭಜನೆಗೆ ಕಾರಣವಾದ ಅಸ್ಪೃಶ್ಯ ಆಚರಣೆಗಳ ವಿರುದ್ಧ ಹೋರಾಡಿದರು ಮತ್ತು ಅವರು ಸಾರ್ವತ್ರಿಕ ಸಹೋದರತ್ವ, ಸ್ವಾತಂತ್ರ್ಯ ಮತ್ತು ಎಲ್ಲರಿಗೂ ಶಿಕ್ಷಣದ ಹಕ್ಕಿನ ತತ್ವಶಾಸ್ತ್ರವನ್ನು ಪ್ರಚಾರ ಮಾಡಿದರು.

ದೇಶದ ಯುವ ಪೀಳಿಗೆಗೆ ಸ್ತಬ್ಧಚಿತ್ರ ಪಸರಿಸಬಹುದಾದ ಸಂದೇಶವು ಬಹಳ ಮೌಲ್ಯಯುತವಾಗಿದೆ. ಹಾಗಾಗಿ ಮುಂಬರುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಸೇರಿಸಲು ಪ್ರಧಾನಮಂತ್ರಿಯವರಿಗೆ ತುರ್ತು ಮಧ್ಯಸ್ಥಿಕೆಯನ್ನು ಕೋರುತ್ತೇನೆ. ಕೇರಳದ ಸ್ತಬ್ಧಚಿತ್ರಗಳು ಹಿಂದೆಯೂ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಂಸೆಗೆ ಪಾತ್ರವಾಗಿವೆ ಎಂಬುದನ್ನು ವಿನಮ್ರವಾಗಿ  ತಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪತ್ರದಲ್ಲಿ ಬರೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *