ತಿರುವನಂತಪುರ: ಕೇರಳದಲ್ಲಿ ಮತ್ತೊಮ್ಮೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಪಿಣರಾಯಿ ವಿಜಯನ್ ಸಂಪುಟದಲ್ಲಿ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡವರ ವಿವರಗಳು ಹೀಗಿವೆ.
ನೂತನ ಮುಖ್ಯಮಂತ್ರಿಯಾಗಿ ನೆನ್ನೆ ಪ್ರಮಾಣ ಸ್ವೀಕರಿಸಿದ ಪಿಣರಾಯಿ ವಿಜಯನ್ ಅವರು ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಪಟ್ಟಿಯನ್ನು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರಿಗೆ ಸಲ್ಲಿಸಿದರು. ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೇತೃತ್ವದ ಎಡರಂಗ ಸರಕಾರದಲ್ಲಿ ಪಿಣರಾಯಿ ವಿಜಯನ್ ಅವರು ಗೃಹ ಹಾಗೂ ಐಟಿ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಮೊದಲ ಬಾರಿಗೆ ಶಾಸಕರಾಗಿರುವ ಕೆ.ಎನ್.ಬಾಲಗೋಪಾಲ್ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಈಗಾಗಲೇ ರಾಜ್ಯವು ಸಂಕಷ್ಟದಲ್ಲಿರುವ ಬೊಕ್ಕಸಕ್ಕೆ ಆರ್ಥಿಕ ಚೈತನ್ಯ ನೀಡುವ ಜವಾಬ್ದಾರಿ ಅವರದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿದ್ಯಾರ್ಥಿ ಸಂಘಟನೆಯ ಮೂಲಕ ಚಳುವಳಿಗೆ ಬಂದು ನಂತರದಲ್ಲಿ ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ವೀಣಾ ಜಾರ್ಜ್ ಅವರಿಗೆ ಆರೋಗ್ಯ ಖಾತೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಜವಾಬ್ದಾರಿ ನೀಡಲಾಗಿದೆ.
ಐದು ಬಾರಿ ಶಾಸಕರು ಹಾಗೂ ಮಾಜಿ ಸ್ಪೀಕರ್ ಕೆ.ರಾಧಾಕೃಷ್ಣನ್ ಅವರಿಗೆ ದೇವಸ್ವಂ ಖಾತೆ ನೀಡಲಾಗಿದೆ. ಇವರು ವಿಜಯನ್ ನೇತೃತ್ವದ ಸಂಪುಟದಲ್ಲಿನ ಪರಿಶಿಷ್ಟ ಜನಾಂಗದವರು. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಸೇರಿದಂತೆ ರಾಜ್ಯದಲ್ಲಿರುವ ನೂರಾರು ದೇವಸ್ಥಾನಗಳ ನಿರ್ವಹಣೆಯ ಸವಾಲು ಅವರ ಮುಂದಿದೆ. ಸರಳ ಹಾಗೂ ಭ್ರಷ್ಟಾಚಾರದ ಕಳಂಕ ರಹಿತರು ಎಂಬ ಖ್ಯಾತಿ ರಾಧಾಕೃಷ್ಣನ್ ಅವರದು.
ಆರ್.ಬಿಂದು ಅವರಿಗೆ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ, ಜೆ.ಚಿಂಚುರಾಣಿ ಅವರಿಗೆ ಪಶು ಸಂಗೋಪನೆ ಹಾಗೂ ಡೇರಿ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.
ಪಿ.ರಾಜೀವ್ ಅವರಿಗೆ ಕಾನೂನು ಮತ್ತು ಕೈಗಾರಿಕೆ ಖಾತೆ ನೀಡಲಾಗಿದೆ. ರಾಜೀವ್ ಅವರು ರಾಜ್ಯಸಭಾ ಸದಸ್ಯರಾಗಿದ್ದ ವೇಳೆಯಲ್ಲಿ ‘ಸಂಸದ ರತ್ನ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಮೊದಲ ಬಾರಿಗೆ ಸಚಿವರಾಗಿ ಪಿ.ಎ. ಮೊಹಮ್ಮದ್ ರಿಯಾಸ್‌ಗೆ ಲೋಕೋಪಯೋಗಿ ಖಾತೆ ನೇಮಮ್ ಕ್ಷೇತ್ರದಿಂದ ಶಾಸಕರಾಗಿರುವ ವಿ.ಶಿವನ್‌ಕುಟ್ಟಿ ಅವರಿಗೆ ಸಾರ್ವತ್ರಿಕ ಶಿಕ್ಷಣ ಹಾಗೂ ಕಾರ್ಮಿಕ ಖಾತೆ ನೀಡಲಾಗಿದೆ.
ಎಂ.ವಿ.ಗೋವಿಂದನ್ ಅವರಿಗೆ ಸ್ಥಳೀಯ ಸಂಸ್ಥೆಗಳು ಹಾಗೂ ಅಬಕಾರಿ ಖಾತೆ ನೀಡಲಾಗಿದೆ.
ಇತರ ಸಚಿವರ ಖಾತೆಗಳು ಹೀಗಿವೆ:
ಕೆ ರಾಜನ್ (ಕಂದಾಯ), ಜಿ.ಆರ್ ಅನಿಲ್ (ಆಹಾರ ಮತ್ತು ನಾಗರಿಕ ಸರಬರಾಜು), ರೋಶಿ ಅಗಸ್ಟೀನ್ (ನೀರಾವರಿ), ಸಾಜಿ ಚೆರಿಯನ್ (ಮೀನುಗಾರಿಕೆ ಮತ್ತು ಸಾಂಸ್ಕೃತಿಕ ವ್ಯವಹಾರಗಳು), ವಿ.ಎನ್.ವಾಸವನ್ (ಸಹಕಾರ ಮತ್ತು ನೋಂದಣಿ), ವಿ ಅಬ್ದುರಹ್ಮಾನ್ (ಕ್ರೀಡೆ), ಪಿ ಪ್ರಸಾದ್ (ಕೃಷಿ), ಕೆ ಕೃಷ್ಣಂಕುಟ್ಟಿ (ವಿದ್ಯುತ್), ಎ.ಕೆ.ಸಸೀಂದ್ರನ್ (ಅರಣ್ಯ), ಆಂಟನಿ ರಾಜು (ಸಾರಿಗೆ) ಮತ್ತು ಅಹಮದ್ ದೇವರ್ಕೋವಿಲ್ (ಬಂದರು, ವಸ್ತು ಸಂಗ್ರಹಾಲಯಗಳು ಮತ್ತು ಪುರಾತತ್ವ).
21 ಸಚಿವರನ್ನು ಒಳಗೊಂಡ ಸಂಪುಟದಲ್ಲಿ ಸಿಪಿಎಂನ 11 ಸಚಿವರು ಹೊಸಬರೇ ಆಗಿರುವುದು ವಿಶೇಷ.
ಸಿಪಿಐನ ನಾಲ್ವರು, ಕೇರಳ ಕಾಂಗ್ರೆಸ್ (ಎಂ), ಜೆಡಿಎಸ್ ಹಾಗೂ ಎನ್‌ಸಿಪಿಯ ತಲಾ ಒಬ್ಬರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಒಬ್ಬರೇ ಶಾಸಕರನ್ನು ಹೊಂದಿರುವ ಮೈತ್ರಿಕೂಟದ ಇತರ ನಾಲ್ಕು ಪಕ್ಷಗಳಿಗೆ ಅವಧಿ ಆಧಾರದ ಮೇಲೆ ಸಚಿವ ಸ್ಥಾನ ನೀಡಲು ಎಲ್‌ಡಿಎಫ್ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.