ಹೊಸದಿಲ್ಲಿ: ಕೇರಳದಲ್ಲಿ ‘ಲವ್ ಜಿಹಾದ್’ ಒಂದು ಬಹಳ ಗಂಭೀರ ಸಮಸ್ಯೆಯಲ್ಲ ಎಂದು ಮೆಟ್ರೋ ಮ್ಯಾನ್’ ಇ ಶ್ರೀಧರನ್ ಅಭಿಪ್ರಾಯ ಪಟ್ಟಿದ್ದಾರೆ. ದಿ ಪ್ರಿಂಟ್ ವರದಿಗಾರ ನಿಲಂಪಾಂಡೆ ನಡೆಸಿದ ಸಂದರ್ಶನದಲ್ಲಿ ಈ ಮಹತ್ವದ ಅಭಿಪ್ರಯಾಯವನ್ನು ಹಂಚಿಕೊಂಡಿದ್ದಾರೆ.
ತಾವು ಸಕ್ರಿಯ ರಾಜಕಾರಣವನ್ನು ತೊರೆಯುವುದಾಗಿ ಹಾಗೂ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದ ‘ಮೆಟ್ರೋ ಮ್ಯಾನ್’ ಇ ಶ್ರೀಧರನ್, ಇದೀಗ ಬಿಜೆಪಿಗೆ ಒಂದು ಸಲಹೆ ನೀಡಿದ್ದಾರೆ. ಹಿಂದುತ್ವ ರಾಜಕಾರಣ ಬಿಟ್ಟು ಬಿಡಿ ಹಾಗೂ ಎಲ್ಲಾ ವರ್ಗಗಳ ಜನರ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಕೇರಳದ ಸಾಕ್ಷರರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ – ಬಿಜೆಪಿ ಶಾಸಕ !
ಕೇರಳದಲ್ಲಿ ‘ಲವ್ ಜಿಹಾದ್’ ಒಂದು ಬಹಳ ಗಂಭೀರ ಸಮಸ್ಯೆಯಲ್ಲ ಎಂದಿದ್ದಾರೆ. “ಅವರು ತಮ್ಮ ಧೋರಣೆಯನ್ನು ಕೊಂಚ ಬದಲಾಯಿಸಬೇಕು. ಉದಾಹರಣೆಗೆ ಬಿಜೆಪಿಯು ಹಿಂದು ಧರ್ಮ ಮತ್ತು ಹಿಂದುತ್ವದ ಮೇಲೆಯೇ ಹೆಚ್ಚು ಗಮನ ನೀಡಬಾರದು ಅವರು ಹಿಂದುಗಳಿಗೆ ಮಾತ್ರವಲ್ಲದೆ ಕೇರಳದ ಎಲ್ಲಾ ವರ್ಗದ ಜನತೆಯ ಪರ ಇದ್ದಾರೆ ಎಂಬ ಸಂದೇಶವನ್ನು ನೀಡಬೇಕು. ಅವರು ಎಲ್ಲಾ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆಂಬ ಭಾವನೆ ಮೂಡಬೇಕು. ಈ ಮೂಲಭೂತ ಬದಲಾವಣೆಯ ಅಗತ್ಯವಿದೆ,” ಎಂದು ಅವರು ಹೇಳಿದರು.
ಅದೇ ಸಮಯ ತಾವು ತಮ್ಮ ಇಳಿವಯಸ್ಸಿನ ಕಾರಣ ಸಕ್ರಿಯ ರಾಜಕಾರಣ ತೊರೆಯುತ್ತಿರುವುದಾಗಿ ಅವರು ತಿಳಿಸಿದರು ಹಾಗೂ ಬಿಜೆಪಿ ತೊರೆಯುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. “ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಅಥವಾ ಹರತಾಳಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ನಾನು ಬಿಜೆಪಿಗೆ ಲಭ್ಯನಿದ್ದೇನೆ. ನನ್ನ ಬುದ್ಧಿಮತ್ತೆ ಮತ್ತು ಅನುಭವ ಪ್ರಮುಖವಾಗಿದೆ, ಅದು ಲಭ್ಯ,” ಎಂದರು.
ಬಿಜೆಪಿ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನು ಏಕೆ ಗೆದ್ದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಪಕ್ಷದ ತಂತ್ರಗಾರಿಕೆಗಳು ಇದಕ್ಕೆ ಕಾರಣ. ಕೇರಳ ಬಿಜೆಪಿ ಅಧ್ಯಕ್ಷರನ್ನು ಆಗಾಗ ಬದಲಾಯಿಸುವುದೂ ತಪ್ಪು. ಪಕ್ಷ ಒಗ್ಗಟ್ಟು ಪ್ರದರ್ಶಿಸಿಲ್ಲ. ಕೇಂದ್ರ ಮಾಡಿದ ಕೆಲಸಗಳ ಶ್ರೇಯವನ್ನು ಇತರ ಪಕ್ಷಗಳು ಪಡೆಯುತ್ತಿವೆ. ಇದನ್ನು ತಡೆಯಲು ನಮಗೆ ಸಾಧ್ಯವಾಗಿಲ್ಲ,” ಎಂದು ಅವರು ಹೇಳಿದರು.