ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಹಾಗೂ ಸೋಷಿಯಲ್ ಡೆಮೆಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆಗಳ ಪದಾಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ದಾಳಿ ಹಾಗೂ ಬಂಧನವನ್ನು ಖಂಡಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಹಿಂಸಾರಕ್ಕೆ ತಿರುಗಿದೆ.
ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೇರಳದಲ್ಲಿ ನಡೆಸಲಾಗುತ್ತಿರುವ ಪ್ರತಿಭಟನೆಯಂತೂ ಹಿಂಸಾರೂಪ ಪಡೆದುಕೊಂದಿದೆ. ತಿರುವನಂತಪುರಂ, ಕೊಲ್ಲಂ, ಕೊಝಿಕೋಡ್, ವೈನಾಡು ಮತ್ತು ಆಲಪ್ಪುಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಸುದ್ದಿ ಪತ್ರಿಕೆಯನ್ನು ಕೊಂಡೊಯ್ಯುತ್ತಿದ್ದ ವಾಹನವೊಂದರ ಮೇಲೆ ಪೆಟ್ರೋಲ್ ಬಾಂಬು ಎಸೆದಿರುವುದು ವರದಿಯಾಗಿದೆ.
ಆಲಪ್ಪುಳದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಟ್ಯಾಂಕರ್ ಲಾರಿ ಮತ್ತಿತರ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿ ಹಾನಿಗೊಳಿಸಲಾಗಿದೆ. ಕೋಝಿಕೋಡ್ ಮತ್ತು ಕಣ್ಣೂರಿನಲ್ಲಿ ಕ್ರಮವಾಗಿ ಪಿಎಫ್‌ಐ ಕಾರ್ಯಕರ್ತರ ಕಲ್ಲು ಎಸೆತದಿಂದ 15 ವರ್ಷದ ಬಾಲಕಿ ಹಾಗೂ ಆಟೋ ರೀಕ್ಷಾ ಚಾಲಕರೊಬ್ಬರಿಗೆ ಗಾಯಗಳಾಗಿವೆ.
ಈ ಮಧ್ಯೆ ಕೇರಳ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆ ಒದಗಿಸಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ.
ಕೇರಳ ಬಂದ್ ನಡೆಸುವಂತೆ ಪಿಎಫ್‌ಐ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಂಘಟನೆ ನಾಯಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೇರಳ ಕೋರ್ಟ್ ಸೂಚನೆ ನೀಡಿದೆ. ಬಂದ್ಗೆ ಕರೆ ನೀಡಿರುವ ಪಿಎಫ್‌ಐ ವರ್ತನೆಯ ಬಗ್ಗೆ ನ್ಯಾಯಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೊಂಡಿತು.
ಯಾರೂ ಅನುಮತಿಯಿಲ್ಲದೆ ರಾಜ್ಯದಲ್ಲಿ ಬಂದ್ ನಡೆಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಪಿಎಫ್‌ಐ ವಿರುದ್ಧ ತರಾಟೆಗೆ ತೆಗೆದುಕೊಂಡಿದೆ. ಪ್ರತಿಭಟನೆಯ ನೆಪದಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕೇರಳ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಕೇರಳ ರಾಜ್ಯ ಪೊಲೀಸರು “ಸರ್ಕಾರ ಮತ್ತು ಮುಷ್ಕರವನ್ನು ಬೆಂಬಲಿಸದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಯಾವುದೇ ಹಾನಿ ಅಥವಾ ದಾಳಿ ತಡೆಗಟ್ಟಲು ಕಠಿಣಕ್ರಮಗಳನ್ನು ಜಾರಿಗೆ ತರಬೇಕು” ಎಂದು ನ್ಯಾಯಾಲಯ ಸೂಚನೆ ನೀಡಿದೆ.
ನೆನ್ನೆ(ಸೆಪ್ಟಂಬರ್ 22) ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಐಎ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎನ್ಐಎಯೊಂದಿಗೆ, ಜಾರಿ ನಿರ್ದೇಶನಾಲಯ(ಇಡಿ) ಮತ್ತು ಗುಪ್ತದಳದ ಅಧಿಕಾರಿಗಳು ಸಹ ದಾಳಿಯಲ್ಲಿ ಭಾಗಿಯಾಗಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸುವುದು, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಸೇರಿದಂತೆ ಹಲವು ಆರೋಪಗಳು ಪಿಎಫ್‌ಐ ವಿರುದ್ಧ ಕೇಳಿಬಂದಿವೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 11 ರಾಜ್ಯಗಳಲ್ಲಿ ಪಿಎಫ್‌ಐನ 106 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ ಇದು ದೇಶದ ಅತಿ ದೊಡ್ಡ ದಾಳಿಯಾಗಿದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ದೆಹಲಿ, ಮಧ್ಯಪ್ರದೇಶ, ಪುದುಚೇರಿ, ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.