ತಿರುವನಂತಪುರಂ : ಕೇಂದ್ರ ಸರ್ಕಾರದ ಆರೋಗ್ಯ ಮಂಥನ್ 4.0 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಉಚಿತ ಚಿಕಿತ್ಸೆಗಳನ್ನು ಒದಗಿಸಿದ ರಾಜ್ಯಕ್ಕೆ ನೀಡುವ ಪ್ರಶಸ್ತಿಯನ್ನು ಕೇರಳ ಗೆದ್ದಿದೆ. ರಾಜ್ಯದ ‘ಕಾರುಣ್ಯ ಆರೋಗ್ಯ ಸುರಕ್ಷಾ ಪಧಥಿ’(ಕೆಎಎಸ್‍ಪಿ) ಯೋಜನೆಯ ಅತ್ಯುತ್ತಮ ಅನುಷ್ಠಾನದಿಂದಾಗಿ ಈ ಪ್ರಶಸ್ತಿಯನ್ನು ಅದು ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯರಿಂದ ಕೇರಳದ ಎಲ್‍ಡಿಎಫ್ ಸರಕಾರದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಶಸ್ತಿ ಸ್ವೀಕರಿಸಿದರು.
ಆಯುಷ್ಮಾನ್ ಭಾರತ-ಪ್ರಧಾನ ಮಂತ್ರಿ ಆರೋಗ್ಯ ಯೋಜನಾ(ಪಿಎಂಜೆಎವೈ)ಕ್ಕೆ ನಾಲ್ಕು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಕೇರಳ ಪಡೆದಿದೆ. ಆಯುಷ್ಮಾನ್ ಭಾರತ ಯೋಜನೆಯ ಭಾಗವಾಗಿ ರಾಜ್ಯದ ಕೆಎಎಸ್‍ಪಿ ಅಡಿಯಲ್ಲಿ ಇಡೀ ದೇಶದಲ್ಲಿ ಒದಗಿಸಿರುವ ಉಚಿತ ವೈದ್ಯಕೀಯ ಚಿಕಿತ್ಸೆಗಳಲ್ಲಿ 15%ದಷ್ಟನ್ನು ಕೇರಳದಲ್ಲೇ ಒದಗಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಕೊಝಿಕೋಡ್ ಮತ್ತು ಕೊಟ್ಟಾಯಂ ಈ ಉಚಿತ ವೈದ್ಯಕೀಯ ಚಿಕಿತ್ಸೆಯ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿವೆ.
ಇದನ್ನೂ ಓದಿ : ಕೋವಿಡ್-19 ನಿರ್ವಹಣೆಯಲ್ಲಿ ಕೇರಳದ್ದು ಈಗಲೂ ಮಾದರಿ ದಾಖಲೆ
ಒಂದು ಗಂಟೆಯಲ್ಲಿ 180 ರೋಗಿಗಳಿಗೆ (ಒಂದು ನಿಮಿಷದಲ್ಲಿ 3 ರೋಗಿಗಳು) ಚಿಕಿತ್ಸೆ ಒದಗಿಸಲು ಸಾಧ್ಯವಾದುದರಿಂದ ಕೇರಳ ಈ ನಿಟ್ಟಿನಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯವು ಈ ಕೆಎಎಸ್‍ಪಿ ಯೋಜನೆಯ ಮೂಲಕ 1636.07 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ 43.4 ಲಕ್ಷ ಉಚಿತ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡಿದೆ. ಪ್ರಸ್ತುತ, ಈ ಯೋಜನೆಯ ಸೇವೆಯು ಕೇರಳದ 200 ಸರ್ಕಾರಿ ಆಸ್ಪತ್ರೆಗಳು ಮತ್ತು 544 ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ , ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ, ರಾಜ್ಯ ಆರೋಗ್ಯ ಇಲಾಖೆಯ ಅಡಿಯಲ್ಲಿ ರಾಜ್ಯ ಆರೋಗ್ಯ ಸಂಸ್ಥೆ(ಎಸ್‍ಹೆಚ್‍ಎ) ಯನ್ನು ರಚಿಸಿ ಖಾಸಗಿ ಆಸ್ಪತ್ರೆಗಳನ್ನು ಸಹ ಒಳಗೊಳ್ಳುವ ಮೂಲಕ ಚಿಕಿತ್ಸೆಯನ್ನು ಸಂಯೋಜಿಸಲು ಸಾಧ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಕೇರಳ ಆರೋಗ್ಯ ಮಂತ್ರಿಗಳು ನೀಡಿದ ಹೇಳಿಕೆ ತಿಳಿಸಿದೆ.