ತಿರುವನಂತಪುರಂ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ದುರಹಂಕಾರದ ಮುಂದೆ ‘ಕೇರಳ’ ತಲೆಬಾಗುವುದಿಲ್ಲ ಎಂದು ರಾಜ್ಯದ ಎಲ್‌ಡಿಎಫ್ ಸರ್ಕಾರದ ಸಚಿವ ವಿ. ಶಿವನ್‌ಕುಟ್ಟಿ ಶುಕ್ರವಾರ ಹೇಳಿದ್ದಾರೆ. ಕಳೆದ ಎರಡು ದಿನಗಳಲ್ಲಿ ನಡೆದ ವಿದ್ಯಮಾನಗಳು ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವನ್ನು ಕೆರಳಿಸಿದ್ದು ತೀವ್ರ ಆಕ್ರೋಶ ವ್ಯಕ್ತಪವಾಗಿದೆ.
ಶುಕ್ರವಾರ ಗಣರಾಜ್ಯೋತ್ಸವ ಭಾಷಣ ಮುಗಿಸಿದ ಆರೀಫ್ ಖಾನ್ ಅವರು ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದು, ಕೇರಳದ ಪಿಣರಾಯಿ ವಿಜಯನ್ ಅವರ ಆಡಳಿತವನ್ನು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಶಿವನ್‌ಕುಟ್ಟಿ ಅವರು, “ರಾಜ್ಯವನ್ನು ಮತ್ತು ರಾಜ್ಯದ ಆಡಳಿತವನ್ನು ಕೀಳು ಮಟ್ಟದಲ್ಲಿ ಬಿಂಬಿಸಲು ಹೊರಟಿರುವ ರಾಜ್ಯಪಾಲರ ದುರಹಂಕಾರದ ಮುಂದೆ ಕೇರಳ ತಲೆಬಾಗುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜೆಡಿಎಸ್ – ಬಿಜೆಪಿ ಸೀಟು ಮಾತುಕತೆ | ಯಾವುದೆ ಕಾರಣಕ್ಕೂ ಮಂಡ್ಯ ಬಿಟ್ಟುಕೊಡಲ್ಲ ಎಂದ ಸುಮಲತಾ
“ಆರಿಫ್ ಖಾನ್ ಅವರು ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ಅವರನ್ನು ಅಕ್ಷರಶಃ ನಿಂದಿಸಿ, ಅವರನ್ನು ಗೂಂಡಾ ಎಂದು ಕರೆದಿದ್ದಾರೆ. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ರೋಹಿಂಗ್ಟನ್ ನಾರಿಮನ್ ಮತ್ತು ಪ್ರಮುಖ ವಕೀಲ ಫಾಲಿ ಎಸ್. ನಾರಿಮನ್ ಕೂಡ ಖಾನ್ ಅವರಿಂದ ಛೀಮಾರಿ ಹಾಕಲ್ಪಟ್ಟರು” ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ.
ಅಲ್ಲದೆ, ಆರಿಫ್ ಖಾನ್ ಅವರು ಮುಖ್ಯಮಂತ್ರಿ ವಿಜಯನ್ ಜೊತೆ ನಡೆದುಕೊಳ್ಳುತ್ತಿದ್ದ ರೀತಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಶಿವನ್‌ಕುಟ್ಟಿ, “ಆರಿಫ್ ಖಾನ್‌ಗೆ ಇಂತಹ ನಕಾರಾತ್ಮಕ ಧೋರಣೆ ಇರುವಾಗ, ಯಾವುದಾದರು ಕೇರಳಿಗರು ಅವರ ನಡವಳಿಕೆಯನ್ನು ಸಹಿಸಿಕೊಳ್ಳುವುದು ಹೇಗೆ” ಎಂದು ಕೇಳಿದ್ದಾರೆ.
ಗುರುವಾರ ರಾಜ್ಯ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ ಆರಿಫ್ ಖಾನ್ ಅವರು ಮೊದಲ ಮತ್ತು ಕೊನೆಯ ಪ್ಯಾರಾವನ್ನು ಮಾತ್ರ ಒಂದು ನಿಮಿಷದಲ್ಲಿ ಓದಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಇದಕ್ಕೆ ಸಿಪಿಐ(ಎಂ) ಪ್ರತಿಕ್ರಿಯಿಸಿ, “ರಾಜ್ಯಪಾಲರಿಗೆ ಕೆಲವು ಆರೋಗ್ಯ ಸಮಸ್ಯೆಗಳಿರಬಹುದು, ಆದ್ದರಿಂದ ಸಂಪೂರ್ಣ ಭಾಷಣವನ್ನು ಓದಲಿಲ್ಲ” ಎಂದು ಹೇಳುವ ಮೂಲಕ ತಿರುಗೇಟು ನೀಡಿದೆ.
ಇದನ್ನೂ ಓದಿ: 75 ನೇ ಗಣರಾಜ್ಯೋತ್ಸವ ಆಚರಿಸಿದ ಭಾರತ | ಮಹಿಳಾ ಮತ್ತು ಮಿಲಿಟರಿ ಶಕ್ತಿಯ ಭವ್ಯ ಪ್ರದರ್ಶನ!
ತಿರುವನಂತಪುರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಕೇರಳ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಆರಿಫ್ ಖಾನ್ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಆರಿಫ್ ಖಾನ್ ಅವರು ರಾಜ್ಯಪಾಲರು ಹೇಗೆ ವರ್ತಿಸಬೇಕೋ ಹಾಗೆ ವರ್ತಿಸುತ್ತಿಲ್ಲ. ಬಿಜೆಪಿಯೇತರ ಆಡಳಿತದ ರಾಜ್ಯಗಳ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇಡಿ) ಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿದೆ” ಎಂದು ಹೇಳಿದ್ದಾರೆ.
ಅಲ್ಲದೆ, ಈ ಎರಡೂ ಸಂದರ್ಭಗಳಲ್ಲಿ ಆರಿಫ್ ಖಾನ್ ಮತ್ತು ಪಿಣರಾಯಿ ವಿಜಯನ್ ಯಾವುದೇ ಶುಭಾಶಯ ವಿನಿಮಯ ಮಾಡಿಕೊಳ್ಳಲಿಲ್ಲ. ಸಾಮಾನ್ಯವಾಗಿ ರಾಜ್ಯದ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಸಾರ್ವಜನಿಕ ಸ್ಥಳದಲ್ಲಿ ಭೇಟಿಯಾದಾಗ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ರೂಢಿಗತವಾಗಿ ನಡೆದುಕೊಂಡು ಬಂದಿದೆ.
ವಿಡಿಯೊ ನೋಡಿ: ಶ್ರಮಿಕರ ಬದುಕು ಉಳಿಸಿ – ಮೋದಿ ಸರ್ಕಾರದ ವಿರುದ್ಧ ಬೀದಿಗಿಳಿದ ಕಾರ್ಮಿಕರು Janashakthi Media