ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಕನ್ನಡಿಗರು ಪ್ರಶ್ನೆ ಮಾಡಬೇಕು: ಕುಮಾರಸ್ವಾಮಿ

ಬೆಂಗಳೂರು: ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಳುತ್ತಿರುವ ಬಿಜೆಪಿಯ ವಿರುದ್ಧ ತೀವ್ರವಾಗಿ ಆರೋಪಿ ಮಾಡಿ ಸರಣಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಸಬೇಕೆಂದು ಕರ್ನಾಟಕ ಹೈಕೋರ್ಟ್‌ ಆದೇಶದ ನಂತರವೂ ಕೇಂದ್ರ ಸರಕಾರವು ರಾಜ್ಯಕ್ಕೆ ಪೂರೈಸಿದ್ದು 120 ಮೆಟ್ರಿಕ್‌ ಟನ್‌ ಮಾತ್ರ. ಅತ್ತ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ  1680 ಮೆಟ್ರಿಕ್‌ ಟನ್‌ ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಿ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ

ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಂದ ಬಯಲಾಗಿದೆ. ಕರ್ನಾಟಕ, ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ?ʼʼ ಎಂದು ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಲಸಿಕೆ ವಿಚಾರವಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ವಿವರಗಳ ಬಗ್ಗೆ ತಿಳಿಸಿರುವ ಕುಮಾರಸ್ವಾಮಿ ಅವರು ಆಮ್ಲಜನಕ ಕರ್ನಾಟಕದ ಈ ಹೊತ್ತಿನ ಅಗತ್ಯ. ಈ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನೇ ಕನ್ನಡಿಗರಾಗಿ ನಾವು ಪ್ರಶ್ನೆ ಮಾಡದೇ ಹೋದರೆ ಇನ್ನ್ಯಾವ ವಿಚಾರದಲ್ಲಿ ನಾವು ನ್ಯಾಯ ಪಡೆಯಲು ಸಾಧ್ಯ. ಪರಿಹಾರ, ಅನುದಾನಗಳಲ್ಲಿ ಕರ್ನಾಟಕಕ್ಕೆ ಈಗ ಆಗಿರುವ ಅನ್ಯಾಯ ಸಹಿಸಿದ್ದಾಗಿದೆ. ಜೀವದ ವಿಚಾರದಲ್ಲಿ ನಡೆಯುತ್ತಿರುವ ಈ ತಾರತಮ್ಯ ಸಹಿಸುವುದು ಬೇಡ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ‘ಕನ್ನಡಿಗರಿಗೆ ಆಗುತ್ತಿರುವ ತಾರತಮ್ಯವನ್ನು ಪ್ರಶ್ನೆ ಮಾಡಿ ಕುಮಾರಸ್ವಾಮಿ ಅವರು ಮಾಡಿದ ಟ್ವೀಟ್‌ ಅನ್ನು ಸುಳ್ಳು ಎಂದಿರುವ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದರು ಆ ಟ್ವೀಟ್‌ಗಳನ್ನು ತೆಗೆದುಹಾಕಬೇಕು ಎಂದಿದ್ದಾರೆ. ಸಂಸದರೇ, ಹಾಗೊಂದು ವೇಳೆ ಸುಳ್ಳಿನ ಟ್ವೀಟ್‌ ತೆಗೆದುಹಾಕುವುದಿದ್ದರೆ ನಿಮ್ಮ ಇಡೀ ಟ್ವಿಟರ್‌ ಖಾತೆಯನ್ನೇ ತೆಗೆದುಹಾಕಬೇಕು’ ಎಂದು ಜೆಡಿಎಸ್‌ ಪಕ್ಷವೂ ಸಹ ಟ್ವೀಟ್‌ ಮಾಡಿದೆ.

 

Donate Janashakthi Media

Leave a Reply

Your email address will not be published. Required fields are marked *