– ಆತ್ಮನಿರ್ಭರ ಭಾರತ 3.0 ಪ್ಯಾಕೇಜ್ ಘೋಷಣೆ
ಹೊಸದಿಲ್ಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರಕಾರ ದೇಶದ ಜನತೆಗೆ ಸಂತಸದ ಸುದ್ದಿ ನೀಡಿದೆ. ದೇಶದ ಆರ್ಥಿಕ ಚೇತರಿಕೆಗೆ ಮತ್ತೊಮ್ಮೆ ಬೃಹತ್ ಮೊತ್ತದ ಪ್ಯಕೇಜ್ ಘೋಷಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸದಿಲ್ಲಿಯಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆತ್ಮನಿರ್ಭರ ಭಾರತ 3.0 ಪ್ಯಾಕೇಜ್ ಘೋಷಿಸಿದರು. ಹೊಸ ಪ್ಯಾಕೇಜ್ ಭಾಗವಾಗಿ ಹಲವು ಪ್ರೋತ್ಸಾಹಕಗಳನ್ನು ಘೋಷಿಸಿದರು. ಒಟ್ಟು 29.89 ಲಕ್ಷ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಿದ್ದು, ಈ ಪ್ಯಾಕೇಜ್‌ನಡಿ ಪ್ರಮುಖ 12 ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.
ಘೋಷಣೆಗಳಿವು
- ಕೊರೊನಾ (ಕೋವಿಡ್-19) ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಗೆ 900 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
- ರೈತರಿಗೆ ರಸಗೊಬ್ಬರ ಸಹಾಯಧನವಾಗಿ ಒಟ್ಟು 65,000 ಕೋಟಿ ರೂ. ನೀಡಲಾಗುವುದು. ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಕೆ ಹೆಚ್ಚಿಸುವುದರಿಂದ ದೇಶದ 14 ಕೋಟಿ ರೈತ ಕುಟುಂಬಗಳಿಗೆ ಸಹಾಯವಾಗಲಿದೆ.
- ಎನ್ಐಐಎಫ್‌ನ ಸಾಲ ವೇದಿಕೆಯಲ್ಲಿ 6,000 ಕೋಟಿ ರೂ. ಈಕ್ವಿಟಿ ಹೂಡಿಕೆ ಮಾಡಲಾಗುವುದು. ಇದು ಮೂಲಸೌಕರ್ಯ ಯೋಜನೆಗಳಿಗೆ 2025 ರ ವೇಳೆಗೆ1 ಲಕ್ಷ ಕೋಟಿ ರೂ. ಸಂಗ್ರಹಿಸಲು ಎನ್ಐಐಎಫ್‌ಗೆ ಸಹಕಾರಿಯಾಗಲಿದೆ.
- ಪಿಎಂ ಗರಿಬ್ ಕಲ್ಯಾಣ್ ಯೋಜನೆಗಾಗಿ ಹೆಚ್ಚುವರಿ ಕೋಟಿ 10,000 ಕೋಟಿ ರೂ. ಮೀಸಲು.
- ಐಡಿಯಾಸ್(IDEAS) ಯೋಜನೆಯಡಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭಾರತ ನೀಡುವ ನೆರವಿನ ಮೂಲಕ ಯೋಜನಾ ರಫ್ತಿಗೆ 3,000 ಕೋಟಿ ರೂ. ಮೀಸಲಿಟ್ಟಿದೆ.
- ರಕ್ಷಣಾ ಉಪಕರಣಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ಹಸಿರು ಶಕ್ತಿಯ ಮೇಲಿನ ಬಂಡವಾಳ ಮತ್ತು ಕೈಗಾರಿಕಾ ವೆಚ್ಚಗಳಿಗಾಗಿ 10,200 ಕೋಟಿ ರೂ. ಮೀಸಲು.
- ಕೋವಿಡ್ ಚೇತರಿಕೆಯ ಹಂತದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸಲು ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ
- ಎಂಎಸ್‌ಎಂಇ (ಸಣ್ಣ ಉದ್ಯಮಗಳು), ಮುದ್ರಾ ಸಾಲಗಾರರು ಮತ್ತು ವೈಯಕ್ತಿಕ ಸಾಲಕ್ಕಾಗಿ (ವ್ಯಾಪಾರ ಉದ್ದೇಶಗಳಿಗಾಗಿ ಸಾಲಗಳು) ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
- ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ಕ್ರೆಡಿಟ್ ಗ್ಯಾರಂಟಿ ಬೆಂಬಲ ಯೋಜನೆ ಮತ್ತು ಕೋವಿಡ್ ಕಾರಣದಿಂದಾಗಿ 26 ವಲಯಗಳಿಗೆ ಒತ್ತು ನೀಡಲಾಗಿದೆ.
- ಉತ್ಪಾದನಾ ಕ್ಷೇತ್ರದ 10 ಆದ್ಯತಾ ವಲಯಗಳಿಗೆ ಮುಂದಿನ 5 ವರ್ಷಗಳವರೆಗೆ46 ಲಕ್ಷ ಕೋಟಿ ರೂ. ಪ್ರೋತ್ಸಾಹಕ ನಿಧಿ ಮೀಸಲು.
- ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
- ಪಿಎಂ ಆವಾಸ್ ಯೋಜನೆ ನಗರಕ್ಕೆ 18,000 ಕೋಟಿ ರೂ. ಮೀಸಲಿಡಲಾಗಿದೆ.