ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗಾಗಿ ನ.26ಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಬಂದ್‌

ತುಮಕೂರು: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಚಳವಳಿ ಆರಂಭವಾಗಿ ನವೆಂಬರ್ 26ಕ್ಕೆ ಒಂದು ವರ್ಷ ಪೂರೈಸಲಿದೆ. ಅಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ತೀರ್ಮಾನಿಸಿದೆ ಎಂದು ಕರ್ನಾಟ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ನಗರದ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳು ಮತ್ತು ಉದ್ದೇಶಿತ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಜನವಿರೋಧಿ, ದೇಶವಿರೋಧಿ, ಸಂವಿಧಾನ ವಿರೋಧಿ ಕಾಯ್ದೆಗಳಾಗಿದ್ದು ಈ ಕಾಯ್ದೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರವು ವಾಪಸ್ ಪಡೆಯುವವರೆಗೂ ನಿರಂತರ ಚಳವಳಿ ನಡೆಸಲು ರೈತ, ದಲಿತ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ, ಯುವಜನತೆಯ ಎಲ್ಲಾ ಸಂಘಟನೆಗಳು ನಿರ್ಧರಿಸಿದೆ.

ಇದನ್ನು ಓದಿ: ಕೃಷಿ ಕಾಯ್ದೆಗಳ ವಾಪಸ್ಸಾತಿಗೆ ನ.26 ಕಡೆ ದಿನ: ಕೇಂದ್ರ ಸರ್ಕಾರಕ್ಕೆ ರಾಕೇಶ್‌ ಟಿಕಾಯತ್‌ ಎಚ್ಚರಿಕೆ

ಈ ಚಳವಳಿಯನ್ನು ದೇಶಾದ್ಯಂತ ಮತ್ತಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಕರ್ನಾಟಕದಲ್ಲಿ ಅಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ತಮ್ಮ ಹಸು, ಎಮ್ಮೆ, ಎತ್ತು, ಕೋಳಿ, ಕುರಿ, ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್ ಇತ್ಯಾದಿಗಳನ್ನು ರಸ್ತೆಗೆ ಇಳಿಸಲು ತೀರ್ಮಾನಿಸಿದ್ದೇವೆ ಹಾಗೂ ಚಳವಳಿ ದಿನ ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಡಿಸೆಂಬರ್‌ನಲ್ಲಿ ಮಹಾ ಪಂಚಾಯತ್

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ ʻʻರಾಜ್ಯದ ಕನಿಷ್ಠ 10 ಕಡೆ ಕಿಸಾನ್ ಮಹಾ ಪಂಚಾಯತ್‍ಗಳನ್ನು ನಡೆಸಲು ಸಂಯುಕ್ತ ಕರ್ನಾಟಕ ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೆ ಪೂರಕವಾಗಿ ಆಯಾ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಥಾ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಗುವುದು. ಮಹಾ ಪಂಚಾಯತ್‍ನಲ್ಲಿ ರಾಷ್ಟ್ರ ಮಟ್ಟದ ನಾಯಕರು ಸಹ ಭಾಗವಸಹಿಸಲಿದ್ದಾರೆʼʼ ಎಂದರು.

ಪರ್ಯಾಯ ಜನಾಧಿವೇಶನ

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ʻʻಬಜೆಟ್ ಕಲಾಪ ಪೂರ್ವ ಬೆಂಗಳೂರಿನಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಜನರು ಸಮಾವೇಶಗೊಂಡು 2022ರ ಜನವರಿ 26 ರಂದು ಪರ್ಯಾಯ ಜನಾಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಅಧಿವೇಶನದಲ್ಲಿ ಜನ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಲಾಗುವುದು ಮತ್ತು ಪರ್ಯಾಯ ಆರ್ಥಿಕ ಚಿಂತನೆಗಳ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗುವುದುʼʼ ಎಂದರು.

ನಿರಂತರ ಹೋರಾಟದ ನಿರ್ಣಯ

ರಾಜ್ಯದ ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಉಂಟಾಗಿರುವ ಸಾಮಾಜಿಕ ಪರಿಣಾಮಗಳ ಬಗ್ಗೆ ಪ್ರಸ್ತುತವಾಗಿ ಈ ಜನಾಧಿವೇಶನದಲ್ಲಿ ಚರ್ಚಿಸಿ ಈ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಇದರೊಂದಿಗೆ, ಕಬ್ಬು ಬೆಳೆಗಾರರ ಸಮಸ್ಯೆ, ಬಗರ್‌ ಹುಕುಂ ಸಾಗುವಳಿ, ಅರಣ್ಯ ಇಲಾಖೆಯಿಂದ ಸಾಗುವಳಿದಾರರಿಗೆ ಆಗುತ್ತಿರುವ ತೊಂದರೆ, ವಸತಿ ರಹಿತರ ಸಮಸ್ಯೆ, ಆದಿವಾಸಿ ಮತ್ತು ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಇವೆಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಲಾಗುವುದು ಮತ್ತು ನಿರಂತರವಾಗಿ ಹೋರಾಟ ನಡೆಸಲು ನಿರ್ಣಯಿಸಲಾಗುವುದು ಎಂದು ಗೋವಿಂದರಾಜು ತಿಳಿಸಿದರು.

ಇದನ್ನು ಓದಿ: “ಜನತೆಯನ್ನು ಉಳಿಸಿ-ದೇಶವನ್ನು ಉಳಿಸಿ” – ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಕರೆ

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿ.ಗೋಪಾಲ್, ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ವಿಭಾಗೀಯ ಕಾರ್ಯದರ್ಶಿ ಡಾ.ಚೌಕೀಮಠ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಯಾಕೂಬ್ ಷರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣರೆಡ್ಡಿ, ಕೋಲಾರ ಜಿಲ್ಲಾಧ್ಯಕ್ಷ ಮರುಗಲ್ ಶ್ರೀನಿವಾಸ್, ರಾಮನಗರ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಸುರೇಶ್‍ಬಾಬು, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಪ್ರಗತಿಪರ ಕೃಷಿಕ ರವೀಶ್ ಸೇರಿದಂತೆ ರೈತ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಪ್ಪು ಬಾವುಟ ಪ್ರದರ್ಶನ

ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ಪ್ರತಿಭಟಿಸಿ ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೇಂದ್ರ ಮಂತ್ರಿಗಳು ಮತ್ತು ಮುಖ್ಯಮಂತ್ರಿಯೂ ಸೇರಿದಂತೆ ರಾಜ್ಯದ ಸಚಿವರುಗಳ ವಿರುದ್ಧ ಕಪ್ಪು ಬಾವುಟ ತೋರಿಸಲು ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನಿಸಿದ್ದು ಈ ತಿಂಗಳ 28 ರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

Donate Janashakthi Media

Leave a Reply

Your email address will not be published. Required fields are marked *