ಕೇಂದ್ರದ ಹಠಮಾರಿ ಧೋರಣೆ, ದೆಹಲಿಯಲ್ಲಿ ರೈತರಿಗೆ ಚಳಿ ಕಾಟ!

ದೆಹಲಿ: ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಇಂದು(ಡಿ.01-ಮಂಗಳವಾರ) ಸಭೆ ಸೇರಿದ್ದ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳು, ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಡಿ.3(ಗುರುವಾರ) ಮತ್ತೊಂದು ಸುತ್ತಿನ ಚರ್ಚೆ ನಡೆಸಲು ಸಹಮತ ಸೂಚಿಸಲಾಗಿದೆ.

ದಿನವೀಡಿ ನಡೆದ ಸಭೆಯಲ್ಲಿ ತಾರ್ಕಿಕ ನಿರ್ಣಯ ಹೊರಬೀಳದಿರುವ ಹಿನ್ನೆಲೆಯಲ್ಲಿ, ಮೂರನೇ ಸುತ್ತಿನ ಸಭೆಗೆ ಎರಡೂ ಬಣಗಳು ಒಪ್ಪಿಗೆ ನೀಡಿವೆ. ಕೃಷಿ ನೀತಿಗಳ ಒಳಿತು-ಕೆಡಕುಗಳ ಕುರಿತು ಚರ್ಚಿಸಲು ತಜ್ಞ ಸಲಹಾ ಸಮಿತಿ ರಚೆನೆಯ ಕೇಂದ್ರ ಸರ್ಕಾರದ ಸಕಹೆಯನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ಕೃಷಿ ಕಾನೂನು ರದ್ದುಗೊಳಿಸುವಂತೆ ಪಟ್ಟು ಹಿಡಿದವು. ಎರಡೂ ಬಣಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ, ಸರ್ವಸಮ್ಮತವಾದ ನಿರ್ಣಯಕ್ಕೆ ಬರುವಲ್ಲಿ ಸಾಧ್ಯವಾಗಲಿಲ್ಲ. ಡಿ.03(ಗುರುವಾರ)ರ ಸಭೆಯಲ್ಲಿ ಸರ್ವಸಮ್ಮತವಾದ ನಿರ್ಣಯ ಹೊರಬೀಳಲಿ ಎಂದೇ ಎಲ್ಲರೂ ಆಶಯ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಕೇಂದ್ರ ಹಾಗೂ ರೈತ ಸಂಘಟನೆಗಳ ಇಂದಿನ ಸಭೆಯ ಬೆಳವಣಿಗೆಗಳತ್ತ ಗಮನಹರಿಸುವುದಾದರೆ…

ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ಸೇರಿದ ಕೇಂದ್ರರೈತ ಸಂಘಟನೆಗಳು!

ಇಂದು(ಡಿ.01-ಮಂಗಳವಾರ) ಮಧ್ಯಾಹ್ನ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಹಾಗೂ ರೈತ ಸಂಘಟನೆಗಳ ನಡುವೆ ಸಭೆ ಆರಂಭವಾಯಿತು. ಆರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ಬಳಿಕ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಸಭೆ ಆರಂಭವಾಯಿತು.

ಮಾತುಕತೆಗೆ ಕೇಂದ್ರ ಸರ್ಕಾರ ಯಾವುದೇ ಪೂರ್ವಭಾವಿ ಷರತ್ತುಗಳನ್ನು ಹಾಕದ ಹಿನ್ನೆಲೆಯಲ್ಲಿ, ಇಂದಿನ ಸಭೆಯಲ್ಲಿ ಭಾಗವಹಿಸಲು ರೈತ ಸಂಘಟನೆಗಳೂ ಕೂಡ ಒಪ್ಪಿಗೆ ನೀಡಿದವು. ವಿವಿಧ ರೈತ ಸಂಘಟನೆಗಳ ಒಟ್ಟು 35 ಪ್ರತಿನಿಧಿಗಳು ಕೇಂದ್ರ ಸರ್ಕಾರದೊಂದಿಗಿನ ಮಾತುಕತೆಯಲ್ಲಿ ಭಾಗವಹಿಸಿದ್ದರು.

ಎಂಎಸ್ಪಿ, ಎಪಿಎಂಸಿ ಕಾಯ್ದೆಗಳ ಕುರಿತು ಬಿಸಿಬಿಸಿ ಚರ್ಚೆ!

ಕನಿಷ್ಠ ಬೆಂಬಲ ಬೆಲೆ ಹಾಗೂ (ಎಂಎಸ್‌ಪಿ) ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ಕುರಿತು, ಕೇಂದ್ರ ಸರ್ಕಾರ ರೈತ ಸಂಘಟನೆಗಳಿಗೆ ವಿವರವಾದ ಮಾಹಿತಿ ನೀಡಿದ್ದು, ಈ ಕಾಯ್ದೆಗಳ ಕುರಿತು ಆವರಿಸುವ ಭಯವನ್ನು ಬಿಡುವಂತೆ ಮನವಿ ಮಾಡಿತು.

ಸರ್ಕಾರ ಯಾವುದೇ ಕಾರಣಕ್ಕೂ ಎಂಎಸ್‌ಪಿ ಹಾಗೂ ಎಪಿಎಂಸಿ ವ್ಯವಸ್ಥೆಗಳನ್ನು ದುರ್ಬಲಗೊಳಿಸುವುದಿಲ್ಲ. ಹೊಸ ಕೃಷಿ ಕಾನೂನು ಈಗ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ನಿಷ್ಕ್ರೀಯಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ರೈತ ಸಂಘಟನೆಗಳಿಗೆ ಭರವಸೆ ನೀಡಿತು.

ಕೇಂದ್ರದ ಸಮಿತಿ ಸಲಹೆ ತಿರಸ್ಕರಿಸಿದ ರೈತ ಸಂಘಟನೆಗಳು!

ಕೃಷಿ ನೀತಿಗಳ ಪೂರ್ವಾಪರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ, ರೈತ ಸಂಘಟನೆಗಳು ಹಾಗೂ ಕೃಷಿ ತಜ್ಞರನ್ನೊಳಗೊಂಡ ಸಮಿತ ರಚನೆಗೆ ಕೇಂದ್ರ ಸರ್ಕಾರ ಸಲಹೆ ನೀಡಿತು. ರೈತ ಸಂಘಟನೆಗಳನ್ನು ಪ್ರತಿನಿಧಿಸಲು ಸಂಘಟನೆಗಳೇ 5-6ಜನರ ಹೆಸರನ್ನು ಶಿಫಾರಸ್ಸು ಮಾಡುವಂತೆ ಕೋರಿರುವ ಕೇಂದ್ರ ಸರ್ಕಾರ, ತಜ್ಞ ಸಮಿತಿ ರಚನೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗೋಣ ಎಂದು ಕರೆ ನೀಡಿತು.

ಆದರೆ ಕೇಂದ್ರದ ಈ ಸಲಹೆಯನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ಸರ್ಕಾರ ನೇರವಾಗಿ ರೈತ ಸಂಘಟನೆಗಳೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸಿದವು ಎನ್ನಲಾಗಿದೆ. ಕೃಷಿ ತಜ್ಞರ ಹೆಸರಲ್ಲಿ ಕೇಂದ್ರ ಸರ್ಕಾರ ತನ್ನ ಪರ ಇರುವವರನ್ನು ಸಮಿತಿಗೆ ಸೇರಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ತಜ್ಞ ಸಲಹಾ ಸಮಿತಿ ರಚನೆಗೆ ಸಮ್ಮಿತಿ ಇಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿದವು.

ಒಮ್ಮತದ ತೀರ್ಮಾನಕ್ಕೆ ಬರಲು ಸಭೆ ವಿಫಲ!

ಕೇಂದ್ರದ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ನಡೆದ ಸಭೆ, ಯಾವುದೇ ನಿರ್ದಿಷ್ಟ ತೀರ್ಮಾನಗಳಿಲ್ಲದೇ ಅಂತ್ಯಗೊಂಡಿತು. ಆದರೂ ಡಿ.03ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಲು ಎರಡೂ ಬಣ ಒಪ್ಪಿಕೊಂಡಿವೆ.

ಕೃಷಿ ಕಾನೂನನ್ನು ರದ್ದುಪಡಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದವು. ಎರಡೂ ಬಣ ತಮ್ಮ ಹಠ ಬಿಡಲು ಒಪ್ಪದಾದಾಗ, ಡಿ.03ಕ್ಕೆ ಮೂರನೇ ಸುತ್ತಿನ ಸಭೆ ನಡೆಸುವ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಒಟ್ಟಿನಲ್ಲಿ ಕೃಷಿ ಕಾನೂನಿನ ಕುರಿತಾದ ಇಂದಿನ(ಡಿ.01-ಮಂಗಳವಾರ) ಕೇಂದ್ರ ಮತ್ತ ಉರೈತ ಸಂಘಟನೆಗಳ ನಡುವಿನ ಸಭೆ ವಿಫಲವಾಗಿದ್ದು, ಡಿ.3(ಗುರುವಾರ)ರ ಸಭೆಯಲ್ಲಿ ಸರ್ವಸಮ್ಮತವಾದ ತೀರ್ಮಾನ ಹೊರಬೀಳಲಿ ಎಂಬುದೇ ಎಲ್ಲರ ಆಶಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *