ಕೇಂದ್ರದ ಬಿಜೆಪಿ ಸರಕಾರದ ನೀತಿಗಳ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆಯು ದೇಶದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳಿಗೆ ಕಾರಣವಾಗಿದೆ. ಕೊರೊನಾ ನಿಯಂತ್ರಿಸಿ ಲಸಿಕೆ ಹಂಚಿಕೆ ಮಾಡಿ ಜನರಿಗೆ ಧೈರ್ಯ ನೀಡಬೇಕಾಗಿದ್ದ ಪ್ರಧಾನಮಂತ್ರಿಗಳು ಮೊಸಳೆ ಕಣ್ಣೀರು ಸುರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿವೈಎಫ್‍ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಟೀಕಿಸಿದರು.

ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಇಂದು ಹಮ್ಮಿಕೊಂಡಿದ್ದ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ಕೊರೊನಾ ಲಸಿಕೆ ನೀಡಲು ವಿಫಲ ಆಗಿರುವ ಕೇಂದ್ರ ಸರ್ಕಾರದ ವಿರುದ್ಧ ವಿವಿದೆಡೆ ಪ್ರತಿಭಟನೆಗಳು ನಡೆದವು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಸರಕಾರದ ಸಾಲು ಸಾಲು ವೈಫಲ್ಯಗಳು ಎದ್ದು ಕಾಣುತ್ತಿದೆ. ಜನರು ಆಕ್ಸಿಜನ್, ಲಸಿಕೆ ಸಿಗದೆ ಸಾಯುತ್ತಿದ್ದಾರೆ. ಸ್ಮಶಾನಗಳು ತುಂಬಿ ತುಳುಕುತ್ತಿವೆ ಜನರ ನೆರವಿಗೆ ಬರಬೇಕಿದ್ದ ಸರಕಾರ ಮಕಾಡೆ ಮಲಗಿದೆ ಎಂದು ಸಂತೋಷ್ ಬಜಾಲ್ ಆರೋಪಿಸಿದರು.

ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಡಿಯ ಘಟಕಗಳ ವ್ಯಾಪ್ತಿಯಲ್ಲಿ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಿಂದಲೇ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಕೊಡಗಿನಲ್ಲಿ ಯುವಜನತೆಯಿಂದ ಪ್ರತಿಭಟನೆ

ದೇಶದಲ್ಲಿ ಬಡ ಕೂಲಿ ಕಾರ್ಮಿಕರನ್ನು ಸರಕಾರ ಕಡೆಗಣಿಸುತ್ತಿದ್ದು, ಸೋಂಕಿತರಿಗೆ ಉಚಿತ ಚಿಕಿತ್ಸೆ, ಉಚಿತ ವ್ಯಾಕ್ಸಿನ್ ನೀಡುವಂತೆ ಒತ್ತಾಯಿಸಿ ಕೊಡಗು ಜಿಲ್ಲೆಯಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಮನೆ ಮನೆಯಿಂದಲೇ ಬಿಜೆಪಿ ಸರಕಾರದ ನೀತಿಗಳ ವಿರುದ್ಧ ಕರಾಳ ದಿನ ಆಚರಿಸಲಾಯಿತು.

ಕೊಡಗು ಜಿಲ್ಲಾ ಮತ್ತು ವಿರಾಜಪೇಟೆ ತಾಲ್ಲೂಕು ಘಟಕಗಳ ವತಿಯಿಂದ ಮನೆ ಮನೆಯಿಂದಲೇ ಪ್ರತಿಭಟನೆ ನಡೆಸಿದರು. ಕರಾಳ ದಿನ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಡಿವೈಎಫ್ಐ, ಎಸ್ಎಫ್ಐ ಕಾರ್ಯಕರ್ತರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದುಡಿಯುವ ಜನರಿಗೆ ಉಚಿತವಾಗಿ ದಿನಸಿ ಸಹಿತ ನಗದು ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವಂತೆ ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *