ಬೆಂಗಳೂರು: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ವಿರುದ್ಧ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಬೃಹತ್ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಯಲ್ಲಿ ಅಡಿಗೆ ಅನಿಲ ಸಿಲಿಂಡರ್‌ಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು.
ಇದನ್ನು ಓದಿ: ಕೂಲಿದರಗಳನ್ನು ಇಳಿಸುವ ಬಂಡವಾಳದ ಗೀಳು ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು
“ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ” ಹೆಸರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಡಿ.ಕೆ.ಶಿವಕುಮಾರ್ ಸಾಲಿಗಿ ಇರಿಸಲಾಗಿದ್ದ ಅಡುಗೆ ಅನಿಲ ಸಿಲಿಂಡರುಗಳಿಗೆ ಹಾಗೂ ಸ್ಕೂಟರುಗಳಿಗೆ ಹೂವಿನ ಹಾರಗಳನ್ನು ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರು ಜಾಗಟೆ ಬಾರಿಸಿ ಸಾಥ್ ನೀಡಿದರು. ಕಾರ್ಯಕರ್ತರು ಹಾಗೂ ಮುಖಂಡರು ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದು ಮಾರ್ಚ್ 31 ಆರ್ಥಿಕ ವರ್ಷ ಮುಕ್ತಾಯದ ದಿನ. ಹೀಗಾಗಿ ಇಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಕಳೆದ 11 ದಿನಗಳಲ್ಲಿ ಕೇಂದ್ರ ಸರ್ಕಾರ 10 ಬಾರಿ ಇಂಧನ ಬೆಲೆ ಏರಿಕೆ ಮಾಡಿದೆ. ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ. ಜನರ ಆದಾಯ ಪಾತಾಳಕ್ಕೆ ಹೋಗಿದೆ. ಆದರೆ, ಬೆಲೆ ಏರಿಕೆ ಗಗನ ಮುಟ್ಟಿದೆ. ಬಿಜೆಪಿ ಸರ್ಕಾರಗಳು ಜನರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನೂರು ಬಾರಿ ಚಪ್ಪಲಿ ಏಟನ್ನಾದರೂ ತಿನ್ನಬಹುದು. ಆದರೆ, ದುಡ್ಡಿನ ಏಟನ್ನು ತಿನ್ನಲಾಗುವುದಿಲ್ಲ ಎಂದು ಹೇಳಿದರು.
ಇದನ್ನು ಓದಿ: ನಾಳೆಯಿಂದಲೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ
ಜನರ ಸಮಸ್ಯೆಗಳ ಬದಲು ಭಾವನಾತ್ಮಕ ವಿಚಾರ ಚುನಾವಣೆ ಅಜೆಂಡಾ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಅವರು ಸಮಾಜ ಒಡೆಯುವವರಾದರೆ, ನಾವು ಸಮಾಜವನ್ನು ಒಂದು ಮಾಡುತ್ತೇವೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ’ವೆಂದ ಅವರು, ಜನರ ನೋವಿಗೆ ಸ್ಪಂದಿಸದೆ ಅನಗತ್ಯ ವಿಷಯಗಳ ಬಗ್ಗೆ ವಿವಾದ ಮಾಡಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಉಳಿಗಾಲ ಇಲ್ಲ ಎಂದು ತಿಳಿಸಿದರು.
ಚೆಪ್ಪಲಿ ಏಟು ಬಿದ್ದರೆ ತಡೆದುಕೊಳ್ಳಬಹುದು ಆದರೆ, ದುಡ್ಡಿನ ಏಟಿಗೆ ಪರಿಹಾರವೇ ಇಲ್ಲ. ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಸರ್ಕಾರ ನಿರಂತರವಾಗಿ ದರ ಏರಿಕೆ ಮಾಡುತ್ತಿದೆ. ಜನ ಸಾಮಾನ್ಯರು ತತ್ತರಿಸುವಂತಾಗಿದೆ. ಮುಂದಿನ ಚುನಾವಣೆವರೆಗೂ ಇದು ಮುಂದುವರೆಯಲಿದೆ ಎಂಬ ಆತಂಕವಿದೆ ಎಂದರು
ಇಂದು ರಾಜ್ಯಕ್ಕೆ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಆಗಮಿಸುತ್ತಿದ್ದಾರೆ. ಅತಿ ಹೆಚ್ಚು ನೊಂದಾಯಿಸಿದವರಿಗೆ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದು, ಪ್ರಧಾನಿ ಮತ್ತು ಕೇಂದ್ರ ಮಂತ್ರಿಗಳು ಆಗಮಿಸುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ ಹೇಳಿದರು.