- ಪ್ರತಿಭಟನಾಕಾರರ ಬಂಧನ, ಬಿಡುಗಡೆ
- ರೈತ, ಕಾರ್ಮಿಕ ಕಾನೂನುಗಳ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹ
ಬೆಂಗಳೂರು : ಕೇಂದ್ರ ಸರ್ಕಾರವು ಜಾರಿ ಮಾಡುತ್ತಿರುವ ರೈತ ಮತ್ತು ಕಾರ್ಮಿಕ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಬೆಂಬಲಿಸಿ ರಾಜ್ಯದಲ್ಲಿ ರೈತ ಮತ್ತು ಕಾರ್ಮಿಕ ಸಂಘಟನೆಗಳು ನಡೆಸಿದ ಕೇಂದ್ರ ಸರ್ಕಾರಿ ಕಚೇರಿಗಳ ಪಿಕೆಟಂಗ್ ಯಶಸ್ವಿಯಾಗಿದೆ.
ಭಾರತ ಕೊರೊನಾ ಸಂಕಷ್ಟದಲ್ಲಿ ಇರುವಾಗ ಜನರನ್ನು ಲಾಕ್‍ಡೌನ್ ಹೆಸರಿನಲ್ಲಿ ಗೃಹಬಂಧನದಲ್ಲಿರಿಸಿದ ಕೇಂದ್ರ ಸರಕಾರವು ರೈತ ಮತ್ತು ಕಾರ್ಮಿಕ ಕಾನೂನುಗಳ ಮೇಲೆ ಶ್ರಮವಿರೋಧಿ ತಿದ್ದುಪಡಿಗಳನ್ನು ತಂದಿತ್ತು. ಈ ನಾಲ್ಕು ತಿದ್ದುಪಡಿಗಳನ್ನು ವಿರೋಧಿಸಿ ರೈತರು ಮತ್ತು ಕಾರ್ಮಿಕರು ಕಳೆದ ಮೂರು ತಿಂಗಳಿಂದಲೂ ಪ್ರತಿಭಟನೆ ಮಾಡುತ್ತಿದ್ದರೂ ಮೋದಿ ಸರಕಾರ ಕಿವಿಗೊಟ್ಟಿರಲಿಲ್ಲ. ರೈತರು ಮತ್ತು ಕಾರ್ಮಿಕರು ಗುರುವಾರ ಅಖಿಲ ಭಾರತ ಮುಷ್ಕರ ನಡೆಸಿದ್ದರು.
ರೈತರು ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ ದೆಹಲಿ ಚಲೋ ಹಮ್ಮಿಕೊಂಡಿದ್ದರು. ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ದೆಹಲಿ ಚಲೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಇತರ ರಾಜ್ಯಗಳ ರೈತರೂ ಈ ದೆಹಲಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರೈತರು ನಡೆಸುತ್ತಿರುವ ದೆಹಲಿ ಚಲೋ ಬೆಂಬಲಿಸಿ ಇಡೀ ರಾಷ್ಟ್ರಾದ್ಯಂತ ರೈತಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ರೈತರ ದೆಹಲಿ ಚಲೋವನ್ನು ಬೆಂಬಲಿಸಿದವು.
ಕರ್ನಾಟಕದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಂ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕೊಡಗು, ಗದಗ್, ಉಡುಪಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ ಜಿಲ್ಲೆಯಲ್ಲಿ ಮುತ್ತಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ.
ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ್ದ ರೈತ ಮತ್ತು ಕಾರ್ಮಿಕ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.