ಹುಬ್ಬಳ್ಳಿ: ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ.
ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗಕ್ಕೆ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಭೇಟಿ ನೀಡಿ ಗ್ರಾಮೋದ್ಯೋಗ ಕಾರ್ಮಿಕರ ಜೊತೆಗೆ ಹಾಗೂ ಮುಖಂಡರ ಜೊತೆಗೆ ಮಾತುಕತೆ ನಡೆಸಿದರು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕೇಂದ್ರವು ಧ್ವಜ ಸಂಹಿತೆ ತಿದ್ದುಪಡಿ ಮಾಡುವ ಮೂಲಕ ದೇಶದಲ್ಲಿ ಅನ್ಯಾಯ ಮಾಡುತ್ತಿದೆ. ಖಾದಿಯಿಂದ ತಯಾರಿಸಬೇಕಾದ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಲ್ಲೂ ತಯಾರಿಸಲು ಕೇಂದ್ರ ಸರ್ಕಾರ ಅನುಮತಿಸಿರುವುದು ಕೋಟ್ಯಂತರ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಾರೆಂದು ಆರೋಪಿಸಿದರು.
ಧ್ವಜ ಸಂಹಿತೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಸ್ವತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ. ಇದು ದೇಶಕ್ಕೆ ಗೌರವ ಕೊಡುವ ಕೆಲಸವಲ್ಲ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ಅನೇಕ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ತಿದ್ದುಪಡಿ ಮಾಡುವ ಮೂಲಕ ಉದ್ಯೋಗದಲ್ಲಿರುವವರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತದೆ. ಕೂಡಲೇ ಈ ಧ್ವಜ ಸಂಹಿತೆ ತಿದ್ದುಪಡಿಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಧ್ವಜ ಸಂಹಿತೆ ವಿಶೇಷತೆ
ಭಾರತೀಯ ಧ್ವಜವು 2:3 ಅಗಲ ಮತ್ತು ಎತ್ತರ ಆಕಾರ ಅನುಪಾತವನ್ನು ಹೊಂದಿದೆ. ಧ್ವಜದ ಮೂರು ಬಣ್ಣಗಳೂ ಕೇಸರಿ, ಬಿಳಿ ಮತ್ತು ಹಸಿರು ಸರಿ ಸಮಾನ ಗಾತ್ರದಲ್ಲಿದ್ದು ಅದರ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವು 24 ಸಮ-ಅಂತರದ ರೇಖೆಗಳನ್ನು ಹೊಂದಿರುತ್ತದೆ.
ರಾಷ್ಟ್ರ ಧ್ವಜವನ್ನು ಹೇಗೆ ಎಲ್ಲೆಂದರಲ್ಲಿ ಹೇಗೆಂದರಲ್ಲಿ ಯಾವುದೋ ರೀತಿಯ ಹಾರಿಸಲು ಸಾಧ್ಯವಿಲ್ಲವೋ, ಅದೇ ರೀತಿ ಧ್ವಜದ ಬಣ್ಣಗಳು ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವಾಗಿದೆ. ಇಂತಹ ರಾಷ್ಟ್ರದ್ವಜವನ್ನು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ತಯಾರಿಸಲ್ಪಟ್ಟಿರ ಬೇಕೆಂಬ ನಿಯವೂ ಇದೆ. ಇದಕ್ಕೆ ಉಪಯೋಗಿಸುವ ಬಟ್ಟೆಯು ಉಣ್ಣೆ, ರೇಷ್ಮೆ ಇಲ್ಲವೇ ಹತ್ತಿಯದ್ದೇ ಆಗಿರಬೇಕು ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು ಎಂಬ ನಿಯಮವಿದೆ.
ರಾಷ್ಟ್ರಧ್ವಜವನ್ನು ತಯಾರಿಸುವ ಹಕ್ಕು ಕೇವಲ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದ ಸಹಕಾರ ಸಂಘಕ್ಕೆ ಮಾತ್ರವೇ ಇದೆ. ಉತ್ತರ ಕರ್ನಾಟಕದಾದ್ಯಂತ ಅದರ ಒಟ್ಟು ಹಲವು ಘಟಕಗಳು ಇವೆ. ಹಾಗಾಗಿ ಇಲ್ಲಿ ನಿರ್ಮಾಣಗೊಂಡ ರಾಷ್ಟ್ರ ಧ್ವಜ ಮಾತ್ರವೇ ಅಧಿಕೃತ ಧ್ವಜವಾಗಿದ್ದು ರಸ್ತೆ ಬದಿಯಲ್ಲಿಯೂ ಅಥವಾ ನಮ್ಮ ಮನೆಯಗಲ್ಲಿಯ ಅಂಗಡಿಗಳಲ್ಲಿ ಕೊಳ್ಳುವ ಪ್ಲಾಸ್ಟಿಕ್ ಮತ್ತು ಯಾವುದೋ ಬಟ್ಟೆಗಳ ಧ್ವಜವು ಅಧಿಕೃತ ಮಾನ್ಯತೆ ಪಡೆಯುವುದಿಲ್ಲ.