ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರಕಾರದಲ್ಲಿ ನೂತನವಾಗಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಈಗಾಗಲೇ ಸಚಿವರಾಗಿರುವವರ ಖಾತೆಗಳ ಬದಲಾವಣೆಯೊಂದಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕೋವಿಡ್ 19 ಮಾರ್ಗಸೂಚಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.
ಕರ್ನಾಟಕದಿಂದ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯ ಸಚಿವರಾಗಿರುವ ನಾಲ್ವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರಿಗೆ (ಸಹಾಯಕ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ (ಸಹಾಯಕ) ಕೃಷಿ, ರೈತರ ಕಲ್ಯಾಣ ಖಾತೆ, ಬೀದರ್ ಸಂಸದ ಭಗವಂತ್ ಖೂಬಾ ಅವರಿಗೆ (ಸಹಾಯಕ) ರಾಸಾಯನಿಕ, ರಸಗೊಬ್ಬರ ಹಾಗೂ ಮರುಬಳಕೆ ಇಂಧನ ಖಾತೆ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ (ಸಹಾಯಕ)ಕೌಶಲಾಭಿವೃದ್ಧಿ , ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆಯನ್ನು ನೀಡಲಾಗಿದೆ.
ಇದನ್ನು ಓದಿ: ಕೇಂದ್ರ ಸಚಿವ ಸಂಪುಟ: ರಾಜ್ಯದ ನಾಲ್ವರು ಒಳಗೊಂಡು 43 ಮಂದಿ ಪ್ರಮಾಣ ವಚನ ಸ್ವೀಕಾರ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂಸದ ಡಿ.ವಿ.ಸದಾನಂದಗೌಡ ಅವರ ನಿರ್ವಹಣೆಯಲ್ಲಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಮನ್ಸುಖ್ ಮಾಂಡವೀಯಾ ಅವರಿಗೆ ನೀಡಲಾಗಿದೆ.
ಕೆಲ ಸಚಿವರ ಖಾತೆಗಳನ್ನು ಸಹ ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹೆಚ್ಚುವರಿಯಾಗಿ ಸಹಕಾರ ಖಾತೆ ನೀಡಲಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮ ನೀಡಿಲಾಗಿದೆ. ಪೆಟ್ರೋಲಿಯಂ ಖಾತೆಯನ್ನು ಹರ್ದೀಪ್ ಸಿಂಗ್ ಪುರಿ ಅವರಿಗೆ ನೀಡಲಾಗಿದೆ.
ಅಶ್ವಿನಿ ವೈಷ್ಣವ್ ಅವರಿಗೆ ರೈಲ್ವೆ ಖಾತೆಯೊಂದಿಗೆ ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ರೈಲ್ವೆ ಸಚಿವರಾಗಿದ್ದ ಪೀಯೂಷ್ ಗೋಯಲ್ ಅವರಿಗೆ ರೈಲ್ವೆ ಬದಲಾಗಿ ವಾಣಿಜ್ಯ ಹಾಗೂ ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ಪೂರೈಕೆ, ಜವಳಿ ಖಾತೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯಸಭೆ ಸದಸ್ಯ ಮನ್ಸುಖ್ ಮಾಂಡವೀಯಾ ಅವರಿಗೆ ನೀಡಲಾಗಿದೆ. ಆರೋಗ್ಯದೊಂದಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ.
ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಜೋಷಿ ಅವರ ಪ್ರಮುಖ ಖಾತೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕೇಂದ್ರ ಸರಕಾರದಲ್ಲಿ ಹಂಚಿಕೆ ಮಾಡಲಾದ ಖಾತೆ ವಿವರಗಳು | ||
---|---|---|
ಸಂಖ್ಯೆ | ಸಚಿವರ ಹೆಸರು | ಖಾತೆ |
00 | ನರೇಂದ್ರ ಮೋದಿ | ಪ್ರಧಾನ ಮಂತ್ರಿ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ, ಪ್ರಮುಖ ಯೋಜನಾ, ಸಾರ್ವಜನಿಕ ಕುಂದು ಕೊರತೆ ಮತ್ತು ಹಂಚಿಕೆಯಾಗದೆ ಉಳಿದ ಎಲ್ಲಾ ಖಾತೆಗಳು |
ಸಂಪುಟ ದರ್ಜೆ ಸಚಿವರು | ||
01 | ರಾಜನಾಥ್ ಸಿಂಗ್ | ರಕ್ಷಣಾ ಖಾತೆ |
02 | ಅಮಿತ್ ಶಾ | ಗೃಹ, ಸಹಕಾರ |
03 | ನಿತಿನ್ ಗಡ್ಕರಿ | ರಸ್ತೆ ಸಾರಿಗೆ ಹಾಗೂ ಹೆದ್ದಾರಿ |
04 | ನಿರ್ಮಲಾ ಸೀತಾರಾಮನ್ | ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರ |
05 | ನರೇಂದ್ರ ಸಿಂಗ್ ತೋಮರ್ | ಕೃಷಿ ಹಾಗೂ ರೈತ ಕಲ್ಯಾಣ |
06 | ಡಾ. ಸುಬ್ರಮಣ್ಯಂ ಜೈಶಂಕರ್ | ವಿದೇಶಾಂಗ ವ್ಯವಹಾರ |
07 | ಅರ್ಜುನ್ ಮುಂಡಾ | ಬುಡಕಟ್ಟು ವ್ಯವಹಾರ |
08 | ಸ್ಮೃತಿ ಇರಾನಿ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
09 | ಪಿಯೂಷ್ ಗೊಯೆಲ್ | ವಾಣಿಜ್ಯ ಹಾಗೂ ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ಪೂರೈಕೆ, ಜವಳಿ |
10 | ಧರ್ಮೇಂದ್ರ ಪ್ರಧಾನ್ | ಶಿಕ್ಷಣಾ, ಕೌಶಲ್ಯ ಅಭಿವೃದ್ಧಿ, ಉದ್ಯಮ |
11 | ಪ್ರಹ್ಲಾದ್ ಜೋಶಿ | ಸಂಸದೀಯ ವ್ಯವಹಾರ, ಕಲ್ಲಿದ್ದಲ್ಲು ಹಾಗೂ ಗಣಿಗಾರಿಕೆ |
12 | ನಾರಾಯಣ್ ರಾಣೆ | ಮೈಕ್ರೋ, ಸಣ್ಣ ಹಾಗೂ ಮಧ್ಯಮ ಉದ್ದಿಮೆ |
13 | ಸರ್ಬಾನಂದ್ ಸೊನೊವಾಲ್ | ಬಂದರು, ಶಿಪ್ಪಿಂಗ್, ಜಲಯಾನ, ಆಯುಷ್ |
14 | ಮುಖ್ತಾರ್ ಅಬ್ಬಾಸ್ ನಖ್ವಿ | ಅಲ್ಪಸಂಖ್ಯಾತ ವ್ಯವಹಾರ |
15 | ವೀರೇಂದ್ರ ಕುಮಾರ್ | ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ |
16 | ಗಿರಿರಾಜ್ ಸಿಂಗ್ | ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ |
17 | ಜ್ಯೋತಿರಾದಿತ್ಯ ಸಿಂಧಿಯಾ | ನಾಗರಿಕ ವಿಮಾನಯಾನ |
18 | ರಾಮಚಂದ್ರ ಪ್ರಸಾದ್ ಸಿಂಗ್ | ಉಕ್ಕು |
19 | ಅಶ್ವಿನಿ ವೈಷ್ಣವ್ | ರೈಲ್ವೆ, ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ |
20 | ಪಶು ಪತಿ ಕುಮಾರ್ ಪರಸ್ | ಆಹಾರ ಸಂಸ್ಕರಣ ಉದ್ದಿಮೆ |
21 | ಗಜೇಂದ್ರ ಸಿಂಗ್ ಶೇಖಾವತ್ | ಜಲಶಕ್ತಿ |
22 | ಕಿರಣ್ ರಿಜಿಜು | ಕಾನೂನು ಮತ್ತು ನ್ಯಾಯ |
23 | ರಾಜ್ ಕುಮಾರ್ ಸಿಂಗ್ | ಇಂಧನ ಹಾಗೂ ಹೊಸ ಪುನರ್ಬಳಕೆ ಶಕ್ತಿ |
24 | ಹರ್ದೀಪ್ ಸಿಂಗ್ ಪುರಿ | ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರ |
25 | ಮನ್ಸುಖ್ ಮಾಂಡವೀಯ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಯನಿಕ ಮತ್ತು ರಸಗೊಬ್ಬರ |
26 | ಭೂಪೇಂದ್ರ ಬಘೇಲ್ | ಪರಿಸರ, ಅರಣ್ಯ, ತಾಪಮಾನ ಬದಲಾವಣೆ, ಕಾರ್ಮಿಕ ಖಾತೆ |
27 | ಡಾ ಮಹೇಂದ್ರ ನಾಥ್ ಪಾಂಡೆ | ಭಾರಿ ಕೈಗಾರಿಕೆ |
28 | ಪರುಷೋತ್ತಮ ರುಪಾಲ | ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ |
29 | ಜಿ ಕಿಶನ್ ರೆಡ್ಡಿ | ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ |
30 | ಅನುರಾಗ್ ಸಿಂಗ್ ಠಾಕೂರ್ | ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಯುವಜನ ಮತ್ತು ಕ್ರೀಡೆ |