ದೆಹಲಿ: ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ (66) ಬುಧವಾರ ನಿಧನರಾಗಿದ್ದಾರೆ.
ಈ ವಿಚಾರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸುದ್ದಿ ವಾಹಿನಿಗಳಿಗೆ ದೃಢಪಡಿಸಿದ್ದಾರೆ. ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೆಹಲಿಗೆ ತೆರಳಿದ್ದ ಅವರಿಗೆ ಸೆ.11ರಂದು ಶುಕ್ರವಾರ ಕೋವಿಡ್–19 ದೃಢಪಟ್ಟಿತ್ತು. ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ನವದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಬಿಕಾಂ, ಎಲ್ಎಲ್‌ಬಿ ಓದಿದ್ದ ಸುರೇಶ ಅಂಗಡಿ ಅವರು 2004ರಿಂದ ಸತತ ನಾಲ್ಕು ಬಾರಿ ಬೆಳಗಾವಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಲಿಂಗಾಯತ– ಬಣಜಿಗ ಸಮುದಾಯಕ್ಕೆ ಸೇರಿದ್ದರು. ಯುವಕರಾಗಿದ್ದಾಗಲೇ ಬಿಜೆಪಿಗೆ ಸೇರ್ಪಡೆಯಾಗಿ, ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು. ಜತೆಗೆ ಸಿಮೆಂಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾ ಇದ್ದಾರೆ. ಮಗಳು ಶ್ರದ್ಧಾ ಅವರ ವಿವಾಹವನ್ನು ಶಾಸಕ, ಜಗದೀಶ ಶೆಟ್ಟರ್ ಅವರ ಪುತ್ರನೊಂದಿಗೆ ನೆರವೇರಿಸಿದ್ದರು.
ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕೋವಿಡ್‍ನಿಂದ ನಿಧನರಾಗಿದ್ದರು.