– ಕೇಂದ್ರದ ಮೂರು ಮಸೂದೆಗಳಿಗೆ ಅಕಾಲಿದಳ ವಿರೋಧ
ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿದ್ದ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದಿದ್ದು, ಎನ್ಡಿಎ ಒಕ್ಕೂಟದಿಂದ ಹೊರಬರಲು ನಿರ್ಧರಿಸಿದೆ.
ಬಿಜೆಪಿ ಸರ್ಕಾರದ ಮೂರು ವಿವಾದಿತ ಮಸೂದೆ ಗೆ ಆಕ್ಷೇಪಿಸಿ ಸೆ.17ರಂದು ಶಿರೋಮಣಿ ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಸರ್ಕಾರ ಮಂಡಿಸಲಿರುವ ಮೂರು ಕೃಷಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಕಿತ ಆಗುವಂತೆ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿತ್ತು. ಈ ಮಸೂದೆ ರೈತ ವಿರೋಧಿಯಾಗಿದ್ದು, ಮಸೂದೆಗೆ ಒಪ್ಪಿಗೆ ನೀಡಲೇಬೇಕೆಂಬ ಕೇಂದ್ರದ ನಿರ್ಧಾರ ಮೈತ್ರಿ ಪಕ್ಷದ ನಾಯಕರಲ್ಲಿ ಅಸಮಾಧಾನ ಮೂಡಿಸಿತ್ತು. ಮೈತ್ರಿ ಮಾಡಿಕೊಂಡಿದ್ದೇವೆ ಎಂದ ಮಾತ್ರಕ್ಕೆ ಅವರ ಎಲ್ಲಾ ನಿರ್ಧಾರಗಳು ನಮಗೆ ಸಮ್ಮತಿ ಇದೆ ಎಂದಲ್ಲ ಎಂದು ಅಕಾಲಿದಳದ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಕಳೆದ ಎರಡು ತಿಂಗಳಿನಿಂದ ರೈತರ ಸಮಸ್ಯೆ ಕುರಿತು ಕೇಂದ್ರ ಸರ್ಕಾರವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೇ ಮಸೂದೆ ಪರಿಣಾಮಗಳನ್ನು ಅರ್ಥೈಸುವ ಪ್ರಯತ್ನ ಮಾಡಿದ್ದೇವೆ, ಆದರೆ ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದರು.
ಕೇಂದ್ರ ಮೂರು ವಿವಾದಿತ ಮಸೂದೆಗಳನ್ನು ಕೈಬಿಡಬೇಕು ಎಂದು ಪಂಜಾಬ್, ಹರಿಯಾಣ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಮಸೂದೆಗೆ ವಿರೋಧಿಸಿ ರಾಜ್ಯ ರಸ್ತೆ, ರೈಲು ರೊಕೋ ಚಳುವಳಿಗಳು ನಡೆದಿವೆ.