ಅಧಿಕ ಸಂಪಾದನೆಯ ಆಸೆಗೆ ಕೆಂಡೋನಿಯ ದೇಶಕ್ಕೆ ಹೊರಟ ನಿರುದ್ಯೋಗಿ

  • ನಾಟಕ : ಕೆಂಡೋನಿಯನ್ಸ್‌ (ಕನ್ನಡ)
  • ನವೆಂಬರ್‌ 11, 2022 – ಸಂಜೆ 7.30ಕ್ಕೆ – 90 ನಿಮಿಷ ಪ್ರದರ್ಶನ
  • ಕಥೆ : ಎಂ. ಪಿ. ರಾಜೇಶ್‌
  • ನಾಟಕ ರೂಪ/ ನಿರ್ದೇಶನ : ಅರುಣ್‌ ಲಾಲ್‌
  • ತಂಡ : ಅಸ್ತಿತ್ವ, ಮಂಗಳೂರು
  • ಸ್ಥಳ : ರಂಗಶಂಕರ, ಜೆ.ಪಿ. ನಗರ, ಬೆಂಗಳೂರು.

ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿಯಲ್ಲಿ ಆಯೋಜಿಸುವ ಅಂತರಾಷ್ಟ್ರೀಯ ನಾಟಕೋತ್ಸವ ʻʻಭಾರಂಗಂ-2022ʼʼ ಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಪ್ರಶಸ್ತಿ ವಿಜೇತ ನಾಟಕ ಕೆಂಡೋನಿಯನ್ಸ್‌ ನವೆಂಬರ್‌ 11, 2022ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ನಾಟಕವು ಒಂದೆಡೆ ನಿರುದ್ಯೋಗ ಮತ್ತೊಂದೆಡೆ ಐಹಿಕವಾದ ಮತ್ತು ಬ್ರಾಂಡ್ ಗಳ ಭರಾಟೆಯ ನಡುವೆ ನಲುಗುವ ಜನಸಾಮಾನ್ಯರ ಕತೆ ಇದು. ತನ್ನ ಹಳ್ಳಿಯಲ್ಲಿ ಒಂದು ಟೀ ಅಂಗಡಿ ಇಟ್ಟುಕೊಂಡಿರುವ ದಾಮಣ್ಣ ಸುಖವಾಗಿರುತ್ತಾನೆ. ಅಲ್ಲಿಗೆ ಬರುವ ಒಬ್ಬ ವೀಸಾ ಕೊಡಿಸುವವನು ಅವನಿಗೆ ಅತ್ಯಧಿಕ ಸಂಬಳದ ಆಮಿಷ ತೋರಿಸಿ ಕೆಂಡೋನಿಯ ಎನ್ನುವ ದೇಶಕ್ಕೆ ಹೋಗಲು ಪ್ರೇರೇಪಿಸುತ್ತಾನೆ.

ದುಡಿಯುವ ಮನಸ್ಸಿದ್ದರೂ ತನ್ನೂರಿನಲ್ಲಿ ಸೂಕ್ತವಾದ ಕೆಲಸವಿರದೆ ಬಸವಳಿದು ವಿದೇಶಕ್ಕೆ ಸಾಗಿಸುವ ಏಜೆಂಟರ ಬಣ್ಣದ ಬಲೆಗೆ ಬಿದ್ದು ಕನಸ ಕಿಂಡಿ ತೆರೆದು ಅಲ್ಲಿಗೆ ತೆರಳಿ ವೀಸಾ ಕಳೆದುಕೊಂಡು ಸರ್ಕಸ್‌ ಕಂಪನಿ ಸೇರುವ ರೀತಿಯಲ್ಲಿ ದೃಶ್ಯಗಳನ್ನೇ ಬದುಕಿನ ಸರ್ಕಸ್‌ಗೆ ಉಪಮೆಯಂತೆ ಬಳಸಿಕೊಂಡ ಬಗೆ ನಾಟಕದಲ್ಲಿ ಬಿಂಬಿಸಲಾಗಿದೆ.

ಆ ಅಪರಿಚಿತ ಜಾಗಕ್ಕೆ ಹೋದ ಮೇಲೆ ತಾನು ಮೋಸ ಹೋಗಿರುವುದು ಹಾಗು ತನ್ನ ಹಳೆಯ ನೆಮ್ಮದಿಗೆ ಹಿಂದಿರುಗಲಾಗುವುದಿಲ್ಲ ಎನ್ನುವುದು ದಾಮಣ್ಣನಿಗೆ ಅರಿವಾಗುತ್ತದೆ. ಅದನ್ನು ಸೋಸುತ್ತಲೇ ನಾಟಕ ಇಂದು ಬ್ರಾಂಡ್ ಗಳೇ ನಮ್ಮ ಮುಖವಾಡಗಳಾಗಿ ಬದಲಾಗಿರುವ ವ್ಯಂಗವನ್ನು ಕುರಿತು ಹೇಳುತ್ತದೆ.

ಮುಖವಾಡ ಧರಿಸಿಕೊಂಡ ಮಾನವನ ಜೀವನ ಹಾಗೂ ವೇಷ ಬದಲಿಸಿಕೊಂಡವರ ನಡುವೆ ಬಸವಳಿದ ಮಾನವೀಯತೆಯ ಅಂತಿಮ ಕ್ಷಣಗಳನ್ನು ಸಾದರಪಡಿಸುವ ನಾಟಕ. ಮಾನವ ಅನಾಗರಿಕನಾಗುತ್ತಿದ್ದಾನೆ ಎಂದು ಪ್ರತಿಬಿಂಬಿಸುವ ಮಾನವನಿಂದ ಮಂಗನಾಗಿಲ್ಲ ಮಂಗನಿಂದ ಮಾನವನಾಗಿದ್ದಾನೆ ಎಂದು ಹೇಳುತ್ತಲೇ ಅನ್ಯದೇಶದಲ್ಲಿ ನಮ್ಮೂರಿನ ಮುಗ್ಧ ಯುವಕರು ಹೋಗಿ ಕಷ್ಟಪಡುವುದನ್ನು ಬಿಂಬಿಸಲಾಗಿದೆ.

ನಿರ್ದೇಶಕ ಅರುಣ್ ಲಾಲ್: ಕೇರಳದವರಾದ ಇವರ ನಾಟಕಗಳು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಟಕೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು, ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ.

Donate Janashakthi Media

Leave a Reply

Your email address will not be published. Required fields are marked *