ಬೆಂಗಳೂರು: ಮೇ 9 ಶುಕ್ರವಾರದಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತ ಮತ್ತು ಪಾಕ್ ನಡುವೆ ಹೆಚ್ಚಿದ ಉದ್ವಿಗ್ನತೆ ಹಿನ್ನೆಲೆ 3 ಗಂಟೆಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಬರಲು ಪ್ರಯಾಣಿಕರಿಗೆ ಸೂಚನೆ ನೀಡಿದೆ.
ಹೆಚ್ಚಿನ ಭದ್ರತಾ ಕ್ರಮಗಳಿಂದಾಗಿ ಪ್ರಯಾಣಿಕರು ತಮ್ಮ ನಿಗದಿತ ವಿಮಾನ ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ಆಗಮಿಸಬೇಕೆಂದು ತಿಳಿಸಿದೆ.
ರಾಷ್ಟ್ರೀಯ ಭದ್ರತಾ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಲಹೆ ಮಾರ್ಗಸೂಚಿಯಲ್ಲಿ ಹೊಸ ಅಂಶಗಳು ಸೇರ್ಪಡೆಯಾಗಿದ್ದು, ವಿಮಾನ ಹೊರಡುವ ಸಮಯಕ್ಕಿಂತ ಮೂರು ಗಂಟೆಗಳ ಮೊದಲೇ ನಿಲ್ದಾಣ ತಲುಪಬೇಕೆಂದು ಕೆಐಎ ತಿಳಿಸಿದೆ.
ಇದನ್ನೂ ಓದಿ: ಜಮ್ಮುವಿನ ಮೇಲೆ ಪಾಕಿಸ್ತಾನದಿಂದ ಕ್ಷಿಪಣಿ ದಾಳಿ ಯತ್ನ
‘ದೇಶಾದ್ಯಂತ ಹೆಚ್ಚಿದ ಭದ್ರತಾ ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ, ನಾವು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವರ್ಧಿತ ಸ್ಕ್ರೀನಿಂಗ್ ಕಾರ್ಯವಿಧಾನಗಳನ್ನು ಜಾರಿಗೆ ತಂದಿದ್ದೇವೆ. ಸುಗಮ ಚೆಕ್-ಇನ್, ಭದ್ರತೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು, ಪ್ರಯಾಣಿಕರು ತಮ್ಮ ವಿಮಾನ ಹರಡುವ ಮೂರು ಗಂಟೆಗಳ ಮೊದಲು ಬರಲು ಸೂಚಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಪರಿಣಾಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಎಲ್ಲಾ ವಿಮಾನಗಳಿಗೆ ಕಡ್ಡಾಯ ದ್ವಿತೀಯ ಲ್ಯಾಡರ್ ಪಾಯಿಂಟ್ ತಪಾಸಣೆ, ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಗಳಲ್ಲಿ ಸಂದರ್ಶಕರ ಮೇಲೆ ನಿಷೇಧ ಮತ್ತು ಒಟ್ಟಾರೆ ಭದ್ರತಾ ವರ್ಧನೆಗಳು ಸೇರಿದಂತೆ ಕಠಿಣ ಕ್ರಮಗಳನ್ನು ವಿಧಿಸಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಸಲಹೆ
ಭಾರತದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ’ ನಂತರ ವಿಧಿಸಲಾದ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಸಂಭಾವ್ಯ ವಿಮಾನ ರದ್ದತಿ ಮತ್ತು ವಿಳಂಬಗಳ ಬಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬುಧವಾರ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ಸಾಮಾಜಿಕ ಮಾಧ್ಯಮ ಮತ್ತು ಅಧಿಕೃತ ಚಾನೆಲ್‌ಗಳಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ‘ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ’ ಎಂದು ದೃಢಪಡಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ವಿಮಾನ ಸ್ಥಿತಿಯ ಕುರಿತು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುವಂತೆ ಸಲಹೆ ನೀಡಿದೆ.
ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಹಲವಾರು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿದ ಕೇವಲ ಒಂದು ದಿನದ ನಂತರ, ಪಾಕಿಸ್ತಾನವು ಮೇ 7-8 ರ ರಾತ್ರಿ ಜಮ್ಮು, ಜೈಸಲ್ಮೇರ್ ಮತ್ತು ಶ್ರೀನಗರ ಸೇರಿದಂತೆ ಭಾರತೀಯ ನಗರಗಳ ಮೇಲೆ ಡ್ರೋನ್ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಳ್ಳಲ ಮುಂದಾಗಿತ್ತು, ಆದರೆ ಅವರ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ.
ಇದನ್ನೂ ನೋಡಿ: ಪ್ರೀತಿಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು Janashakthi Media