ಕೆಲಸದ ಒತ್ತಡ: ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಹೆಚ್ಚಳ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ನಗರದ ಹೆಚ್ಚಿನ ಸಂಖ್ಯೆಯ ವೈದ್ಯರು ಮತ್ತು ನರ್ಸ್‌ಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇದರ ಪರಿಣಾಮ ಆಸ್ಪತ್ರೆಗಳು ಸಿಬ್ಬಂದಿ ಕೊರತೆ ಎದುರಿಸುವಂತಾಗಿದೆ.

”ಈಗ ಕೆಲಸದ ಹೊರೆ ಹೆಚ್ಚಿದೆ. ಆಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಬರುತ್ತಿರುವ ಕೋವಿಡ್‌ ಪಾಸಿಟಿವ್‌ ರೋಗಿಗಳಲ್ಲಿ ರೋಗ ಲಕ್ಷಣಗಳ ತೀವ್ರತೆ ಕಡಿಮೆಯಿದೆ. ಆನ್‌ಲೈನ್‌ ಕನ್ಸಲ್ಟೇಶನ್‌ ಹೆಚ್ಚು ಮಾಡಲಾಗುತ್ತಿದೆ. ಇದರಿಂದ ಕೆಲಸದ ಒತ್ತಡ ಹೆಚ್ಚಿದೆ” ಎಂದು ವೈದ್ಯರು ತಿಳಿಸಿದ್ದಾರೆ.

ಮಣಿಪಾಲ್‌ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್‌ ಬಲ್ಲಾಳ್‌ ‘ಆಸ್ಪತ್ರೆಯಲ್ಲಿ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ವೈದ್ಯರು ಮತ್ತು ನರ್ಸ್‌ಗಳಿಗಿಂತ ಆಡಳಿತ ಸಿಬ್ಬಂದಿಯಲ್ಲಿ ಸೋಂಕು ಪ್ರಕರಣ ಹೆಚ್ಚಿದೆ. ಆದಾಗ್ಯೂ ಯಾರಿಗೂ ಸೋಂಕು ತೀವ್ರವಾಗಿಲ್ಲ” ಎಂದು ತಿಳಿಸಿದ್ದಾರೆ.

”ಮೊದಲ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಅನೇಕರು ಸೋಂಕಿಗೆ ತುತ್ತಾದರು. ಕೆಲವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆ ಸಮಯದಲ್ಲಿ ರೋಗದ ಬಗ್ಗೆ ತಿಳುವಳಿಕೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದರ ಮಾಹಿತಿ ಕಡಿಮೆಯಿತ್ತು. ಆಗ ಲಸಿಕೆ ರಕ್ಷಣೆ ಇರಲಿಲ್ಲ. ಎರಡನೇ ಅಲೆ ಸಂದರ್ಭದಲ್ಲಿ ಬಹುತೇಕ ಆರೋಗ್ಯ ಸಿಬ್ಬಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಈಗ, ಮತ್ತೆ ಸೋಂಕು ಪ್ರಕರಣಗಳು ಉಲ್ಬಣಗೊಂಡಿವೆ. ಆದರೆ ಸದ್ಯ ಇದುವರೆಗೂ ಯಾರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡುವ ಸ್ಥಿತಿ ಉಂಟಾಗಿಲ್ಲ” ಎಂದು ಹೇಳಿದರು.

ಕಳೆದ ಒಂದು ವಾರದಲ್ಲಿ ವೈದ್ಯರು, ತಾಂತ್ರಿಕ ಸಿಬ್ಬಂದಿ, ನರ್ಸ್‌ಗಳು ಸೇರಿ ಬನ್ನೇರಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯ 10 ಮಂದಿ ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಬೆಂಗಳೂರಿನ ಅಪೋಲೊ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳ ನಿರ್ದೇಶಕಿ ಡಾ. ಸಹನಾ ಗೋವಿಂದಯ್ಯ ”ನಾವು ತುಂಬಾ ಜಾಗರೂಕರಾಗಿದ್ದೇವೆ. ರೋಗ ಲಕ್ಷಣಗಳನ್ನು ಹೊಂದಿದವರಿಗೆ ಮಾತ್ರ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದೇವೆ. ಸೋಂಕಿತ ಸಿಬ್ಬಂದಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ, ಅವರಿಗೂ ಸಹ ಪರೀಕ್ಷೆ ಮಾಡುತ್ತಿದ್ದೇವೆ. ಸದ್ಯ ಇದುವರೆಗೆ ಆಸ್ಪತ್ರೆಯ ಕೆಲಸಗಳ ಮೇಲೆ ಪರಿಣಾಮ ಬೀರಿಲ್ಲ” ಎಂದು ಹೇಳಿದರು.

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್‌.ಮಂಜುನಾಥ್‌, ʻʻಕಳೆದ ನಾಲ್ಕು ದಿನಗಳಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಐವರು ವೈದ್ಯರು, ಮೂವರು ನರ್ಸ್‌ಗಳು, ವಾರ್ಡ್‌ ಬಾಯ್‌ ಹಾಗೂ ಡೇಟಾ ಎಂಟ್ರಿ ಅಪರೇಟರ್‌ಗಳು ಸೇರಿ 20 ಮಂದಿ ಸಿಬ್ಬಂದಿಗೆ ಕೋವಿಡ್‌ ಸೋಂಕು ತಗುಲಿದೆ. ಮೂರನೇ ಅಲೆಯ ಹಿನ್ನೆಲೆಯಲ್ಲಿ ವೈದ್ಯರ ಮಾನಸಿಕ ಆರೋಗ್ಯ ಕುರಿತು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕಳವಳ ವ್ಯಕ್ತಪಡಿಸಿದೆ. ವೈದ್ಯಕೀಯ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿವೆ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಕಾರ್ಯಾಭಾರ ಒತ್ತಡ ಹೆಚ್ಚಿದೆ. ನವೆಂಬರ್‌ನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಿದ್ದರೆ, ಮೂರನೇ ಅಲೆಯ ಈ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ರಕ್ಷಣೆ ದೊರೆಯುತ್ತಿತ್ತು ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *