ಕೆಲಸದ ಅವಧಿ ಹೆಚ್ಚಳ : ಹಾಸಿಗೆ, ದಿಂಬು ಸಮೇತ ಬರುವುದಾಗಿ ಎಚ್ಚರಿಸಿದ ಸಿಬ್ಬಂದಿ

ರಾಯಚೂರು: ಕೆಲಸದ ಅವಧಿಯನ್ನು ವಿಸ್ತರಣೆ ಮಾಡಿದ್ದಕ್ಕೆ, ಹಾಸಿಗೆ ದಿಂಬು ಸಮೇತ ಕಚೇರಿಗೆ ಬರುವುದಾಗಿ ನೌಕರರು ಎಚ್ಚರಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸಲಾಗಿದ್ದು, ಇದರ ವಿರುದ್ಧ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ. ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಅವಧಿ ವಿಸ್ತರಣೆ ಮಾಡಿದ್ದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.ಕುಟುಂಬದೊಂದಿಗೆ ಆಗಮಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಹಾಸಿಗೆ, ದಿಂಬಿನೊಂದಿಗೆ ಬಂದು ಕಚೇರಿಯಲ್ಲಿ ಮಲಗಿ ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಈ ಮೊದಲು 10 ರಿಂದ 5.30 ವರೆಗಿದ್ದ ಅವಧಿ ಬಳಿಕ 9 ರಿಂದ 7 ಗಂಟೆ ವರೆಗೂ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೆ ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ಎರಡನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ. 12 ಗಂಟೆಗಳ ಕಾಲ ‌ಕಾರ್ಯ ನಿರ್ವಹಿಸಲು ಸಾಧ್ಯವಾಗಲ್ಲ ಅಂತ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ನಮಗೂ ಕುಟುಂಬಗಳಿವೆ, ವೈಯಕ್ತಿಕ ಜೀವನಕ್ಕೆ ಸಮಯ ಸಿಗ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಹಾಸಿಗೆ, ದಿಂಬು ಸಹಿತ ಕಚೇರಿಯಲ್ಲಿಯೇ ಮಲಗುವ ಅಭಿಯಾನ ಮಾಡ್ತಿವಿ ಅಂತ ಕಣ್ಣೀರು ಹಾಕಿದ್ದಾರೆ.

ಈ ಕುರಿತು ಅಧಿಕಾರಿಯ ಜೊತೆ ಮಾತನಾಡಲು ಜನಶಕ್ತಿ ಮೀಡಿಯಾ ಸಂಪರ್ಕಿಸುವ ಪ್ರಯತ್ನ ನಡೆಸಿತು. ಆದರೆ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಬೇರೆ ಜಿಲ್ಲೆಗಳಲ್ಲಿ ಇಲ್ಲದ ಆದೇಶ ರಾಯಚೂರಿನಲ್ಲಿ‌ ಮಾತ್ರ ಯಾಕಿದೆ? ಈ ಆದೇಶ ಹೊರಡಿಸಿದ್ದು ಯಾರು? ಇದು ನೌಕರರ ಹಿತಾಸಕ್ತಿಗೆ ವಿರುದ್ಧವಾಗಿಲ್ಲವೆ? ನೌಕರರ ಹಕ್ಕುಗಳು ಕಸಿದುಕೊಳ್ಳುವ ಆದೇಶ ಇದಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *