ಕೀಳುಮಟ್ಟದ ರಾಜಕೀಯ ಭಾಷಣ ಪ್ರಧಾನಿ ಸ್ಥಾನದ ಗೌರವಕ್ಕೆ ಶೋಭೆ ತರುವ ಮಾತಲ್ಲ: ಸೀತಾರಾಮ್‌ ಯೆಚೂರಿ

ನವದೆಹಲಿ: ನರೇಂದ್ರ ದಾಮೋದರ ಮೋದಿ ಅವರು ತಾನೊಬ್ಬ ಭಾರತದ ಪ್ರಧಾನಿ ಎನ್ನುವುದನ್ನೂ ಮರೆತು ತನ್ನ ಹಾಗೂ ತನ್ನ ಸರ್ಕಾರವನ್ನು ಹೊಗಳುವ ಭರದಲ್ಲಿ ನಾಚಿಕೆಯಿಲ್ಲದೆ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಹೇಳಿದ್ದಾರೆ.

ನೆನ್ನೆಯಷ್ಟೇ (ಸೆಪ್ಟಂಬರ್‌ 02) ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆ ಲೋಕಾರ್ಪಣೆಯಾಗಿರುವುದು ಎಲ್ಲಾ ಭಾರತೀಯರೂ ಹೆಮ್ಮೆಪಡುವುದಾಗಿದೆ. ಇಡೀ ಭಾರತ ಎದ್ದು ನಿಂತು ಭಾರತೀಯ ನೌಕಾದಳವನ್ನು ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಐ.ಎನ್‌.ಎಸ್.‌ ವಿಕ್ರಾಂತ್‌ ಯುದ್ಧ ನೌಕೆ ನಿರ್ಮಾಣಗೊಂಡ ಧೀರ್ಘಾವಧಿಯ ಬಗ್ಗೆ ವಿವರಿಸಿದ ಸೀತಾರಾಮ್‌ ಯೆಚೂರಿ ಅವರು, ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಈ ದೇಶೀಯ ಯುದ್ಧ ನೌಕೆಯನ್ನು ಭಾರತದಲ್ಲೇ ನಿರ್ಮಿಸಬೇಕೆಂದು 2004ರಲ್ಲಿ ಎಡ ಪಕ್ಷಗಳ ಬೆಂಬಲ ಪಡೆದ ಯುಪಿಎ ಸರ್ಕಾರ ತೀರ್ಮಾನ ಮಾಡಿತು. ಆಗ ಸಂಚಾರ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷನಾಗಿ ನಾನು ನೌಕೆ ನಿರ್ಮಾಣ ಮಾಡುವ ಕೊಚಿನ್ ಹಡಗುಕಟ್ಟೆಗೆ ಹೋಗಿ ಸಮೀಕ್ಷೆ ಮಾಡಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಆ ಸಮಿತಿಯ ಶಿಫಾರಸನ್ನು ಅಂಗೀಕರಿಸಿದ ಕೇಂದ್ರ ಸರ್ಕಾರವು ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯ ನಿರ್ಮಾಣಕ್ಕೆ ತೀರ್ಮಾನಿಸಿತು. 2014ರ ಚುನಾವಣೆಗೆ ಮುಂಚೆಯೇ ಯುದ್ಧ ನೌಕೆ ಸಿದ್ಧವಾಗಿ ಲೋಕಾರ್ಪಣೆಯಾಯಿತು‌. ಬಳಕೆಗೆ ಮುಂಚೆ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕಾಗಿತ್ತು. ಈಗ ಅದು ಪೂರ್ಣ ಬಳಕೆಗೆ ಸಿದ್ಧವಾಗಿದೆ.

ನಿಜಸ್ಥಿತಿ ಹೀಗಿರುವಾಗ, ಈ ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯು ತನ್ನ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿಕೊಳ್ಳುವುದು ಪ್ರಧಾನಿ ಪಟ್ಟಕ್ಕೆ ಶೋಭೆ ತರುವ ಮಾತಲ್ಲ. ಆದ್ದರಿಂದ ಇಂತಹ ಕೀಳುಮಟ್ಟದ ರಾಜಕೀಯ ಮಾಡಬೇಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.

Donate Janashakthi Media

One thought on “ಕೀಳುಮಟ್ಟದ ರಾಜಕೀಯ ಭಾಷಣ ಪ್ರಧಾನಿ ಸ್ಥಾನದ ಗೌರವಕ್ಕೆ ಶೋಭೆ ತರುವ ಮಾತಲ್ಲ: ಸೀತಾರಾಮ್‌ ಯೆಚೂರಿ

Leave a Reply

Your email address will not be published. Required fields are marked *