ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಎಚ್ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಸಿಇಟಿ- ಎಂಜಿನಿಯರಿಂಗ್ ವಿಭಾಗದ ಆರಂಭದ 10 ವಿದ್ಯಾರ್ಥಿಗಳ ವಿವರಗಳು ಬಿಡುಗಡೆಯಾಗಿದೆ. ಅವರುಗಳಲ್ಲಿ ಬೆಂಗಳೂರಿನ 9 ಮಂದಿ ಹಾಗೂ ಮೈಸೂರಿನ ಒಬ್ಬ ವಿದ್ಯಾರ್ಥಿ ಆಗಿದ್ದಾರೆ.
ಇಂದು ಸಂಜೆ ನಾಲ್ಕರ ಸುಮಾರಿಗೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಎಂಜಿನಿಯರಿಂಗ್, ಬಿಫಾರ್ಮ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಘೋಷಿಸಿದರು.
ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿಯ ಮೈಸೂರು ವಿದ್ಯಾರ್ಥಿ ಹೆಚ್.ಕೆ.ಮೇಘನ್ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದಾನೆ. ನಾಲ್ಕು ವಿಭಾಗದಲ್ಲಿಯೂ ಪ್ರಥಮ ಸ್ಥಾನ ಪಡೆದುಕೊಂಡು ಅಗ್ರಸ್ಥಾನಕ್ಕೆ ಹೊರಹೊಮ್ಮಿದ್ದಾರೆ.
ಮೈಸೂರು ವಿದ್ಯಾರ್ಥಿ ಮೇಘನ್ ಎಲ್ಲಾ ವಿಭಾಗದಲ್ಲೂ ಅಂದರೆ, ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ವಿಜ್ಞಾನ ವಿಭಾಗ, ನ್ಯಾಚುರೋಪತಿ, ಯೋಗಿಕ್ ಸೈನ್ಸ್‌ನಲ್ಲೂ ಹೆಚ್ಚಿನ ಅಂಗಗಳಿಸಿ ಮೊದಲ ಸ್ಥಾನಕ್ಕೆ ಏರಿದ್ದಾರೆ.
ಕೃಷಿ ವಿಭಾಗದಲ್ಲಿ ಮೇಘನಾ ಹೆಚ್.ಕೆ- ಮೊದಲ ಸ್ಥಾನ ಪಡೆದರೆ, ರೀತಂ .ಬಿ- ಎರಡನೇ ಸ್ಥಾನ, ಅದಿತ್ಯ ಪ್ರಭಾಶ್- ಮೂರನೇ ಸ್ಥಾನ ಪಡೆದಿದ್ದಾರೆ, ಇನ್ನು ಪಶುವೈದ್ಯಕೀಯ ವಿಜ್ಞಾನ ವಿಭಾಗ ಮೇಘನ ಹೆಚ್.ಕೆ- ಮೊದಲ ಸ್ಥಾನ, ವರುಣ್ ಆದಿತ್ಯ- ಎರಡನೇ ಸ್ಥಾನ, ರೀತಂ .ಬಿ- ಮೂರನೇ ಸ್ಥಾನ ಪಡೆದಿದ್ದಾರೆ.
ಬಿ.ಫಾರ್ಮ್ ವಿಭಾಗ ಮೇಘನ್ ಹೆಚ್.ಕೆ- ಮೊದಲು, ಪ್ರೇಮಾಂಕರ್ – ಎರಡನೇ ಸ್ಥಾನ, ಬಿ.ಎಸ್.ಅನಿರುದ್ – ಮೂರನೇ ಸ್ಥಾನ ಗಳಿಸಿದ್ದಾರೆ. ನ್ಯಾಚರೋಪತಿ ವಿಭಾಗದಲ್ಲಿ ಮೇಘನಾ ಹೆಚ್.ಕೆ – ಮೊದಲು, ವರುಣ್ ಆದಿತ್ಯ- ಎರಡನೇ ಹಾಗೂ ರೀತಂ ಬಿ- ಮೂರನೇ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ.
ಇಂದು 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಪೈಕಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಇಂಜಿನಿಯರಿಂಗ್ ಕೋರ್ಸ್ ಗೆ 1,83,231 ರ‍್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸಿಗೆ 1,52,518 ಅಭ್ಯರ್ಥಿಗಳು, 1,55,760 ಪಶುಸಂಗೋಪನೆ, 1,55,910 ಯೋಗ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಗಣಿತ ಪರೀಕ್ಷೆ ಬರೆದಿರುವ 1.89 ಲಕ್ಷ ವಿದ್ಯಾರ್ಥಿಗಳು, ಜೀವಶಾಸ್ತ್ರ ಪರೀಕ್ಷೆ ಬರೆದಿರುವ 1.62 ಲಕ್ಷ ವಿದ್ಯಾರ್ಥಿಗಳು, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ.
ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ (ಬಿಇ / ಬಿ.ಟೆಕ್): ಕೆಸಿಇಟಿ 2021ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆದಿದೆ.
ಬಿ.ಟೆಕ್ (ಆಹಾರ ತಂತ್ರಜ್ಞಾನ) ಬಿ.ಟೆಕ್ (ಡೈರಿ ತಂತ್ರಜ್ಞಾನ): 2021ರ ಕೆಸಿಇಟಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅರ್ಹತೆ ಪಡೆಯಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.
530 ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ನಡೆಸಲಾಗಿತ್ತು.