ಹಾಸನ: ಅನಾರೋಗ್ಯ ಪೀಡಿತ ಮಹಿಳೆಯನ್ನು ಕಾಯಿಲೆಯನ್ನು ಗುಣಪಡಿಸುವ ನೆಪದಲ್ಲಿ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮವಾಗಿ, ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಚನ್ನರಾಯಪಟ್ಟಣದ ಬೆಕ್ಕ ಗ್ರಾಮದಲ್ಲಿ ನಡೆದಿದೆ.
ಪೂಜೆಯ ನೆಪದಲ್ಲಿ ವಂಚನೆ ಮಾಡುವ ಹಿರಿಯಾಪಟ್ಟಣದಮ್ಮ ದೇವಸ್ಥಾನದ ಪೂಜಾರಿ ಮಧು ಎಂಬಾತ ನನಗೆ ದೇವರು ಬಂದಿದೆ, ನಾನು ನಿನ್ನನ್ನು ಕಾಯಿಲೆಯಿಂದ ಗುಣಪಡಿಸುತ್ತೇನೆಂದು ಬೆತ್ತದ ಕೋಲಿನಿಂದ ಬಲವಾಗಿ ಹೊಡೆದು, ಓರ್ವ ಮಹಿಳೆಯ ಸಾವಿಗೆ ಕಾರಣವಾಗಿದ್ದಾನೆ. ಪೂಜಾರಿ ನೀಡಿದ ಬೆತ್ತದ ಏಟಿಗೆ 47 ವರ್ಷದ ಪಾರ್ವತಿ ಮೃತಪಟ್ಟಿರುವ ಮಹಿಳೆಯಾಗಿದ್ದಾಳೆ.
ಕಳೆದ ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಪಾರ್ವತಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ದೇವಸ್ಥಾನದ ಪೂಜಾರಿ ತಿಳಿಸಿದ್ದಾನೆ.
ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಹೇಳಿ ಮಹಿಳೆ ತಲೆಗೆ ಪೂಜಾರಿ ಬೆತ್ತದಿಂದ ಹೊಡೆದಿದ್ದಾರೆ. ಬೆತ್ತದಿಂದ ತಲೆಗೆ ಹೊಡೆದ ಪರಿಣಾಮ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಆಕೆ ಚಿಕಿತ್ಸೆ ಫಲಕಾರಿಯಾಗದೇ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ನಂತರ ಪೂಜಾರಿ ನಾಪತ್ತೆಯಾಗಿದ್ದು, ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜನರು ಮೂಢನಂಬಿಕೆಯನ್ನು ನಂಬುವುದು ಬಿಟ್ಟಿಲ್ಲ. ದೇವರ ಮೇಲೆ ನಂಬಿಕೆ ವಿನಃ ಪೂಜಾರಿ ಮೇಲಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.