ಡಿ.5: ಎಲ್ಲ ಹಳ್ಳಿಗಳಲ್ಲೂ ಮೋದಿ ಸರಕಾರ-ಅಂಬಾನಿ-ಅದಾನಿ ಪ್ರತಿಕೃತಿ ದಹನ
ಪಂಜಾಬಿನ ರೈತರು ಬಂದು ನೆರೆದಿರುವ ಸಿಂಘು ಗಡಿಯಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎ.ಐ.ಕೆ.ಎಸ್.ಸಿ.ಸಿ.)ಯ ಕಾರ್ಯಕಾರಿ ಗುಂಪು, ಪಂಜಾಬ್ ರೈತ ಸಂಗಟನೆಗಳ ಸಮನ್ವಯ ಸಮಿತಿ, ಆರ್.ಕೆ.ಎಂಎಸ್ ಮತ್ತು ಭಾರತೀಯ ಕಿಸಾನ್ ಯೂನಿಯನ್‍ನ ಗುಂಪುಗಳ ಜಂಟಿ ಸಭೆ ಡಿಸೆಂಬರ್ 2ರಂದು ನಡೆದು ಸಂಯುಕ್ತ ಕಿಸಾನ್ ಮೋರ್ಚಾದ ಅಡಿಯಲ್ಲಿ ದಿಲ್ಲಿ ಚಲೋ ಹೋರಾಟವನ್ನು ಮತ್ತು ದೇಶವ್ಯಾಪಿ ಚಳುವಳಿಯನ್ನು ತೀವ್ರಗೊಳಿಸಬೇಕು ಎಂದು ನಿರ್ಧರಿಸಲಾಯಿತು ಎಂದು ಎ.ಐ.ಕೆ.ಎಸ್.ಸಿ.ಸಿ ಹೇಳಿದೆ. ಸುಮಾರು 3ಲಕ್ಷ ಜನಗಳು ಈ ಅಭೂತಪೂರ್ವ ರೈತ ಭುಗಿಲಿನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಈ ಚಾರಿತ್ರಿಕ ಹೋರಾಟವನ್ನು ಹತ್ತಿಕ್ಕಲಿಕ್ಕಾಗಿ ಮೋದಿ ಸರಕಾರ ರೈತ ಮುಖಂಡತ್ವವನ್ನು ವಿಭಜಿಸಲು ಮತ್ತು ಜನಗಳನ್ನು ದಾರಿ ತಪ್ಪಿಸಲು ಹಟ ತೊಟ್ಟಂತಿದೆ. ಈ ಸಂದರ್ಭದಲ್ಲಿ ಈ ಸಭೆ ಈ ನಿರ್ಧಾರಗಳನ್ನು ಮಾಡಿದೆ:
1. ಮೂರು ಕಾರ್ಪೊರೇಟ್-ಪರ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ರದ್ದು ಮಾಡಬೇಕು ಎಂಬ ಬೇಡಿಕೆಯ ಮೇಲೆ ಚರ್ಚೆಯ ಪ್ರಶ್ನೆಯೆ ಇಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಲಿಖಿತವಾಗಿ ಸಲ್ಲಿಸುತ್ತದೆ ಮತ್ತು ಇದನ್ನು ಕೂಡಲೇ ಅನುಮೋದಿಸಬೇಕು ಹಾಗೂ ಹೋರಾಟವನ್ನು ಬಗೆಹರಿಸಬೇಕು ಎಂದು ಸರಕಾರಕ್ಕೆ ಪತ್ರವನ್ನು ಸಲ್ಲಿಸುತ್ತದೆ.
2. ಈ ಮೇಲಿನ ಕಾಯ್ದೆಗಳ ವಿವರವಾದ ವಿಮರ್ಶೆಯನ್ನು ಪತ್ರಕ್ಕೆ ಲಗತ್ತಿಸಲಾಗುವುದು. ಆದರೆ, ಇದರ ಮೆಲೆ ಪರಿಚ್ಛೇದವಾರು ಚರ್ಚೆಯನ್ನು ಒಪ್ಪುವುದಿಲ್ಲ.
3. ರೈತ ಕೃಷಿಯ ಕಂಪನೀಕರಣದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ನರೇಂದ್ರ ಮೋದಿ ಸರಕಾರದ ಮತ್ತು ಜತೆಯಲ್ಲಿ ಕಾರ್ಪೊರೇಟ್ ದೈತ್ಯರಾದ ಅಂಬಾನಿ ಮತ್ತು ಅದಾನಿಯ ಪ್ರತಿಕೃತಿಗಳನ್ನು ಡಿಸೆಂಬರ್ 5ರಂದು ರೈತರು ದೇಶಾದ್ಯಂತ ಎಲ್ಲ ಹಳ್ಳಿಗಳಲ್ಲಿ ದಹನ ಮಾಡುವರು. ಈಮೂಲಕ ಇದನ್ನು ಕಾರ್ಪರೇಟ್-ವಿರೋಧಿ ಆಂದೋಲನವಾಗಿ ಬೆಳೆಸಲಾಗುವುದು.
4. ದೇಶವ್ಯಾಪಿ ಚಳುವಳಿಯನ್ನು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನ, ಮಹಿಳೆಯರು ಮುಂತಾದ ಸಮಾಜದ ಇತರ ವಿಭಾಗಗಳೊಂದಿಗೆ ಕೈಜೋಡಿಸುವ ಮೂಲಕ ತೀವ್ರಗೊಳಿಸಬೇಕಾಗಿದೆ.
ಇದಕ್ಕೆ ಮೊದಲು ಹನ್ನನ್ ಮೊಲ್ಲರವರಿಗೆ ಡಿಸೆಂಬರ್ 1 ರ ಮಾತುಕತೆಯಲ್ಲಿ ಭಾಗವಹಿಸಲು ಸರಕಾರದಿಂದ ಪತ್ರ ಬಂದಾಗ, ಇಡೀ ಎ.ಐ.ಕೆ.ಎಸ್.ಸಿ.ಸಿ ಕಾರ್ಯಕಾರಿ ಗುಂಪನ್ನು ಕರೆಯದಿರುವ ಬಗ್ಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಒಂದು ಪತ್ರವನ್ನು ಹನ್ನನ್ ಮೊಲ್ಲ ಮತ್ತು ಎ.ಐ.ಕೆ.ಎಸ್.ಸಿ.ಸಿ ಪರವಾಗಿ ಭಾರತ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಯಿತು ಎಂದು ಎಐಕೆಎಸ್ ಹೇಳಿದೆ.
ಎ.ಐ.ಕೆ.ಎಸ್.ಸಿ.ಸಿ ಸುಮಾರಾಗಿ ಎಲ್ಲ ಪ್ರಮುಖ ರಾಜ್ಯಗಳ 250ಕ್ಕೂ ಹೆಚ್ಚು ಸಂಘಟನೆಗಳ ಅಖಿಲ ಬಾರತ ವೇದಿಕೆಯಾಗಿದ್ದು ರಾಷ್ಟ್ರೀಯ ಕಾರ್ಯಕಾರಿ ಗುಂಪಿನ ಮೂಲಕ ಸಾಮೂಹಿಕ ನೇತೃತ್ವದಲ್ಲಿದೆ. ಈ ಗುಂಪಿನ ಸದಸ್ಯರೆಲ್ಲರೂ ವಿವಿಧ ಸಂಘಟನೆಗಳ ಹಿರಿಯ ರೈತ ಮುಖಂಡರುಗಳು, ಪ್ರಾದೇಶಿಕ ಮತ್ತು ವಲಯವಾರು ಪ್ರಾತಿನಿಧ್ಯ ಹೊಂದಿರುವವರು. ಈ ಕಾಯ್ದೆಗಳು ಮತ್ತು ಮಸೂದೆ ಅಖಿಲ ಭಾರತ ಪರಿಣಾಮ ಹೊಂದಿರುವುದರಿಂದ ಈ ಬಗ್ಗೆ ಯಾವುದೇ ಅರ್ಥಪೂರ್ಣ ಚರ್ಚೆಯಲ್ಲಿ ಅಖಿಲ ಭಾರತ ಪ್ರಾತಿನಿಧ್ಯ ಅಗತ್ಯವಾಗುತ್ತದೆ, ಆದ್ದರಿಂದ ಪೂರ್ಣ ಕಾರ್ಯಕಾರಿ ಗುಂಪನ್ನು ಕರೆಯಬೇಕಾಗಿದೆ ಎಂದು ಈ ಪತ್ರದಲ್ಲಿ ತಿಳಿಸಲಾಗಿತ್ತು.