ಬೆಂಗಳೂರು : ಕೋವಿಡ್ ಸೋಂಕಿನಿಂದಾಗಿ ದಲಿತ ಕವಿ, ಸಾಹಿತಿ ಡಾ ಸಿದ್ದಲಿಂಗಯ್ಯ ಅವರು ಸಾವನ್ನಪ್ಪಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ನಿಮೋನಿಯಾ ತೀವ್ರಾಗಿದ್ದ ಹಿನ್ನಲೆ ಅವರು ಆರೋಗ್ಯ ಸ್ಥಿತಿ ಬಿಗಾಡಾಯಿಸಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954 ರಲ್ಲಿ ಜನಿಸಿದರು.ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಬರೀ ಚಲನಚಿತ್ರ ಗೀತೆಯಾಗಿ ಉಳಿಯಲಿಲ್ಲ, ಜಾನಪದದಂತೆ ಎಲ್ಲರನ್ನು ತಲುಪಿತು. “ದಲಿತರು ಬರುವರು ದಾರಿಬಿಡಿ, ದಲಿತರ ಕೈಗೆ ರಾಜ್ಯ ಕೊಡಿ”, ಎಂಬ ಸಾಲುಗಳು ಹೋರಾಟದ ಯುವಕರ ಬಾಯಿಯಲ್ಲಿ ಸದಾ ಗುನುಗುತ್ತಿದ್ದವೂ, ಸ್ಪೂರ್ತಿ ತುಂಬುತ್ತಿದ್ದವು. “ಇಕ್ರಲಾ ವದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೇ ಅಂತಾರೆ, ಓಣೆಗೊಂದ್ ತರ ಗುಡಿ ಕಟ್ಸವ್ರೆ” ಹೀಗೆ ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದವರಿ ಸಿದ್ದಲಿಂಗಯ್ಯ. ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿದ ಅವರು, ರಾಜ್ಯದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ದಲಿತ ಚಳವಳಿಗೆ ಹೊಸ, ಸಂಚಲನ ನೀಡಿದ್ದ ಅಪರೂಪದ ಸಾಹಿತಿ, ಸದಾಕಾಲ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಕೊಂಡವರು. ಎಪ್ಪತ್ತರ ದಶಕದಿಂದಲೂ ರಾಜ್ಯದಲ್ಲಿ ಬೆಳೆದು ಬಂದ ದಲಿತ,ಬಂಡಾಯ, ಸಾಂಸ್ಕೃತಿಕ ಹಾಗೂ ಮಹಿಳಾ ಮೊದಲಾದ ಚಳವಳಿಯ ಭಾಗವಾಗಿಯೇ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಸಿದ್ದಲಿಂಗಯ್ಯ ಆ ಎಲ್ಲ ಚಳವಳಿಗಳನ್ನು ರಾಜ್ಯಾದ್ಯಂತ ಬೆಳೆಸಲು ಅಮೂಲ್ಯ ಕೊಡುಗೆಯನ್ನು ನೀಡಿದ್ದರು.
ವೃತ್ತಿ ಬದುಕು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸಿದ್ದಲಿಂಗಯ್ಯನವರ ಮಾರ್ಗದರ್ಶನದಲ್ಲಿ 11 ಮಂದಿ ಎಂ.ಫಿಲ್ ಮತ್ತು 8 ಮಂದಿ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯ ಬೂಸಾ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿ, ಡಾ|| ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿಗಳಲ್ಲಿ ಸಹ ತೊಡಗಿಸಿಕೊಂಡಿದ್ದರು.
ಸಾಹಿತ್ಯ ಸೃಷ್ಟಿ : ಬೆಂಗಳೂರು ವಿಶ್ವವಿದ್ಯಾಲಯಕ್ಕಾಗಿ ಸಮಕಾಲೀನ ಕನ್ನಡ ಕವಿತೆಗಳು 3 ಮತ್ತು 4ನೆಯ ಸಂಪುಟಗಳನ್ನು ಸಂಪಾದಿಸಿಕೊಟ್ಟಿದ್ದ ಅವರು 1975 ರಲ್ಲಿ ಪ್ರಕಟಿಸಿದ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಅವರನ್ನು ಕಾವ್ಯ ಜಗತ್ತಿಗೆ ಪರಿಚಯಿಸಿಕೊಟ್ಟಿತು. ‘ಸಾವಿರಾರು ನದಿಗಳು’, ‘ಆಯ್ದ ಕವಿತೆಗಳು’, ‘ಮೆರವಣಿಗೆ’, ‘ಕಪ್ಪು ಕಾಡಿನ ಹಾಡು’ ಮುಂತಾದವು ಅವರು ಪ್ರಮುಖ ಕವನ ಸಂಕಲನಗಳು. ಇವರ ‘ಊರುಕೇರಿ’ ಆತ್ಮ ಚರಿತ್ರೆ ಸಹ ಅಷ್ತೇ ಪ್ರಸಿದ್ದವಾಗಿದ್ದು ತಮಿಳು ಹಾಗೂ ಇಂಗ್ಲೀಷ್ ಭಾಷೆಗೂ ಅನುವಾದಗೊಂಡಿದೆ ಮಾತ್ರವಲ್ಲದೆ ಇಂಗ್ಲೀಷ್ ಅವತರಣೆಕೆಯನ್ನು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಕಟಿಸಿತ್ತು. ‘ಪಂಚಮ ಮತ್ತು ನೆಲಸಮ’, ‘ಏಕಲವ್ಯ’ ನಾಟಕಗಳು, .’ಅವತಾರಗಳು’ ಪ್ರಬಂಧ ಕೃತಿ. ‘ಹಕ್ಕಿ ನೋಟ’, ‘ಜನಸಂಸ್ಕೃತಿ’, ‘ ಉರಿಕಂಡಾಯ’ ಎನ್ನುವ ಲೇಖನ ಸಂಗ್ರಹ ಇವರ ಹೆಸರಿನಲ್ಲಿದೆ’.
ಚಲನಚಿತ್ರ ಸಾಹಿತ್ಯದಲ್ಲೂ ಸೈ : ಕ್ರಾಂತಿಗೀತೆ, ನೊಂದವರ ಪಾಡುಗಳನ್ನೇ ಹಾಡಾಗಿಸುತ್ತಿದ್ದ ಸಿದ್ದಲಿಂಗಯ್ಯ, ಶೃಂಗಾರ ಗೀತೆಗಳನ್ನು ಬರೆಯಬಲ್ಲರು ಎಂದು ನಿರೂಪಿಸಿದವರು. ಬಾ ನಲ್ಲೆ ಮಧುಚಂದ್ರಕ್ಕೆ ಚಲನಚಿತ್ರದ ಜನಪ್ರಿಯ ಗೀತೆ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಎಂಬ ಅದ್ಬುತ ಹಾಡನ್ನು ಕೊಟ್ಟವರು. ಇನ್ನು ಪುಟ್ಟಣ್ಣ ಕಣಗಾಲರ ನಿರ್ದೇಶನದ ‘ಧರಣೆ ಮಂಡಲು ಮಧ್ಯದೊಳಗೆ’ ಚಿತ್ರಗೀತೆಗಾಗಿ ಇವರಿಗೆ 1983-84ರ ರಾಜ್ಯಪ್ರಶಸ್ತಿ ಪಡೆದಿದ್ದರು.
ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಮುಂತಾದ ಗೌರವಗಳು ಅವರಿಗೆ ಬಂದಿವೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94 ಮತ್ತು 1995-2001ರವರೆಗೆ ಎರಡುಬಾರಿ ನಾಮಕರಣಗೊಂಡಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇತ್ತೀಚೆಗೆ ಅವರ ರಾಜಕೀಯ ನಡೆಗಳು ಪ್ರಗತಿಪರರಿಗೆ ಬೇಸರ ತರಿಸಿದ್ದವು, ಏಕೆಂದರೆ ಅವರ ಕೃತಿಗಳಲ್ಲಿ ಅವರು ಪ್ರಭುತ್ವದ ವಿರುದ್ಧ ವ್ಯಕ್ತಪಡಿಸುತ್ತಿದ್ದ ಆಕ್ರೋಶ, ಆ ವಿಷಯದಲ್ಲಿನ ಅವರ ಸ್ಪಷ್ಟತೆ, ಬದ್ಧತೆ, ಈ ವ್ಯವಸ್ಥೆಯನ್ನು ಬದಲಾಯಿಸಲೇಬೇಕು ಎಂದು ತುಡಿಯುತ್ತಿದ್ದ ಅವರ ನಿಲುವು ಹೋರಾಟಗಾರರಿಗೆ ಕಿಚ್ಚನ್ನು ಹಚ್ಚಿದ್ದವು. ಅಷ್ಟು ಗಟ್ಟಿಯಾಗಿದ್ದ ಅವರ ನಿಲುವು ಬದಲಾದಾಗ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಇತ್ತಿಚೆಗೆ ಅವರಿಂದ ಮೊನಚಾದ ಸಾಹಿತ್ಯವೂ ಹೊರ ಬರಲಿಲ್ಲ ಎಂದು ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
“ನಮ್ಮ ಪ್ರಭುತ್ವದ ಶಕ್ತಿ ಎಷ್ಟು ಪ್ರಬಲವಾಗಿದೆ ಎಂದರೆ ಸಿದ್ದಲಿಂಗಯ್ಯನವರಂತಹ ಸಿದ್ದಲಿಂಗಯ್ಯನವರನ್ನು ಆಪೋಶನ ತೆಗೆದುಕೊಂಡುಬಿಟ್ಟಿತು” ಸೈದ್ಧಾಂತಿಕವಾಗಿ ಅಷ್ಟು ಗಟ್ಟಿಯಾಗಿದ್ದ ಅವರ ನಿಲುವು ಬದಲಾದಾಗ ತಪ್ಪು ಅವರದ್ದಲ್ಲ, ಪ್ರಭುತ್ವದ್ದು ಎಂದು ಪ್ರಭುತ್ವದ ವಿರುದ್ಧ ನಮಗೆ ಕೋಪ ಬಂದಿತ್ತು. ಅವರ ಬಗ್ಗೆ ಅನುಕಂಪ ಇತ್ತು. ಆದರೆ ನೀವು ಕೋಮುವಾದಿಗಳ ಬೆನ್ನುಹತ್ತಿರುವ ಸಂಗತಿ ನಮಗೆ ತೀರಾ ನಿರಾಸೆ ಮೂಡಿಸಿತ್ತು. ಇಡೀ ಪ್ರಜಾಸತ್ತೆ ಇಷ್ಟಪಡದ ಅಮಿತ್ ಶಾ ನಿಮ್ಮ ಮನೆಗೆ ಭೇಟಿ ನೀಡಿದ ಸಂಗತಿಯಂತೂ ಅಕ್ಷಮ್ಯವಾದುದು. ಆದರೂ, ಕವಿಗಳೆ ನಿಮ್ಮ ಬಗ್ಗೆ ಪ್ರೀತಿ ಹಾಗೆಯೇ ಉಳಿದಿದೆ. ಯಾವುದೋ ಇಕ್ಕಟ್ಟಿನಲ್ಲಿ ಸಿಕ್ಕು ನೀವು ಹಾಗೆ ಮಾಡಿರಲು ಸಾಕು ಎಂದು ಕೆಲವೊಮ್ಮೆ ಸಮಾಧಾನ ಮಾಡಿಕೊಳ್ಳುತ್ತೇವೆ. ಸಿದ್ದಲಿಂಗಯ್ಯನವರು ಮುಂಚೆ ತೋರಿದ ಚಳುವಳಿಯ ಹಾದಿಯಲ್ಲೇ ಹೋಗುತ್ತೇವೆ, ದುಡಿಯುವ ಜನ ಅಧಿಕಾರ ಹಿಡಿಯುವ ದಿನಗಳಿಗಾಗಿ ನಮ್ಮ ಶಕ್ತಿಮೀರಿ ಶ್ರಮಿಸುತ್ತೇವೆ ಎಂದು ಸಮುದಾಯ ಸಂಘಟನೆಯ ಸುರೇಂದ್ರ ರವರು ಸಿದ್ದಲಿಂಗಯ್ಯನವರ ಒಡನಾಟವನ್ನು ಮೆಲಕು ಹಾಕಿದ್ದಾರೆ.
ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ಪ್ರಾಧ್ಯಾಪಕ, ವಿಧಾನಪರಿಷತ್ ನ ಮಾಜಿ ಸದಸ್ಯ ಹಾಗೂ ನನ್ನ ಬಹುಕಾಲದ ಮಿತ್ರ ಸಿದ್ದಲಿಂಗಯ್ಯನವರ ಸಾವು ನನ್ನ ಪಾಲಿಗೆ ಆಘಾತಕಾರಿಯಾದುದು ಮಾತ್ರವಲ್ಲ ಅನಿರೀಕ್ಷಿತವೂ ಹೌದು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಓದುಗರ ಕಣ್ಮಣಿ ಕವಿ ಸಿದ್ದಲಿಂಗಯ್ಯ ಅವರು ಕೊನೆಗೂ ಹೊರಟು ಹೋದರು. 1975 ರಲ್ಲಿ ಅವರ ಹೊಲೆಮಾದಿಗರ ಹಾಡು ಪ್ರಕಟವಾದಾಗ ನಾನು ಬಿ ಎ ಓದುತ್ತಿದ್ದೆ. ಆ ಕವನ ಸಂಕಲನ ಮಾತ್ರ ಇವತ್ತಿಗೂ ಹೋರಾಟದ ಒಂದು ಸಂಕೇತವಾಗಿಯೇ ನನ್ನೊಳಗೆ ಉಳಿದುಬಿಟ್ಟದೆ ಎಂದು ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆ ಸಂತಾಪ ಸೂಚಿಸಿದ್ದಾರೆ.