ಮೈಸೂರು: ರಾಜ್ಯದಲ್ಲಿ ಕೋಮು ಗಲಭೆ, ಹಿಂದೂ-ಮುಸ್ಲಿಮರ ನಡುವೆ ವಿಷಬೀಜ ಬಿತ್ತುವ ಕೆಲಸಗಳು ಮಾಡುತ್ತಿದ್ದು, ಅದರೊಂದಿಗೆ ಅಲ್ಲಲ್ಲಿ ಕೋಮು ಗಲಭೆಗಳು ಘಟಿಸುತ್ತಿವೆ. ಇದರ ನಡುವೆ ಮತ್ತೊಂದು ಘಟನೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ನಡೆದಿದೆ.
ಮೇ 3ರ ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆ ಮುಗಿಸಿ ಹೊರ ಬರುವ ವೇಳೆ ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ ಎಂಬ ವಿಡಿಯೋ ಇದೀಗ ವೈರಲ್ ಆಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
30 ಸೆಕೆಂಡ್‌ಗಳ ವಿಡಿಯೋದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರ ಎಲ್ಲರೂ ಒಂದೆಡೆ ಸೇರಿದ್ದರು. ಎಲ್ಲರೂ ರಸ್ತೆ ಬದಿಯಲ್ಲಿ ನಿಂತಿದ್ದು, ಅವರು “ನಾರಾ ಇ ತಕ್ಬೀರ್ ಅಲ್ಲಾಹು ಅಕ್ಬರ್” ಎಂದು ಕೂಗುವುದನ್ನು ಕೇಳಬಹುದು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದು, ದೃಶ್ಯ ಸೆರೆ ಹಿಡಿಯುವಾಗ ಆ ವ್ಯಕ್ತಿ ಕವಲಂದೆ ಗ್ರಾಮ ಚೋಟಾ ಪಾಕಿಸ್ತಾನ ಎಂದು ಹೇಳಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಮೈಸೂರು ಎಸ್‌ಪಿಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಐಪಿಸಿ 1860(ಯು/ಎಸ್-153ಎ,153ಬಿ,505(2),34ರಡಿಯಲ್ಲಿ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
ವಿಡಿಯೋ ಕುರಿತು ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ. ಈಗಾಗಲೇ ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಮಾತುಗಳನ್ನು ಆಡಿದ ವ್ಯಕ್ತಿಗಳ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.