ಬೈಂದೂರು: ಮದುವೆ ಸಹಾಯ ಧನದ ಮೊತ್ತ ರೂ.1 ಲಕ್ಷಕ್ಕೆ ಹೆಚ್ಚಿಸಬೇಕು, ಸಹಜ ಮರಣ ಪರಿಹಾರ ನಿಧಿ ರೂ. 2 ಲಕ್ಷಕ್ಕೆ ಹೆಚ್ಚಿಸಬೇಕು, ಮನೆ ನಿರ್ಮಾಣಕ್ಕೆ ರೂ. 5 ಲಕ್ಷ ಸಹಾಯಧನ ನೀಡಬೇಕು ಇತ್ಯಾದಿ ಬೇಡಿಕೆಗಳ ಪರಿಹಾರಕ್ಕಾಗಿ ಬೈಂದೂರು ಸಿಐಟಿಯು ಕಚೇರಿ ಬಳಿ ಕಟ್ಟಡ ಕಾರ್ಮಿಕರು ಪ್ರತಿಭಟನಾ ಪ್ರದರ್ಶನ ನಡೆಸಿದರು.
ಅಖಿಲ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಡಬ್ಲ್ಯೂಎಫ್‌ಐ)ಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಸಮಿತಿಯ ಮೇರೆಗೆ ಕಟ್ಟಡ ಕಾರ್ಮಿಕರ ಬೇಡಿಕೆ ದಿನಾಚರಣೆ ಆಚರಿಸಿದರು.
ಅಲ್ಲದೆ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ವಿಶೇಷ ಯೋಜನೆಗಳಲ್ಲಿ ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು, ಅಡುಗೆ ಅನಿಲ, ಕನ್ನಡಕ, ಅಂಗವಿಕಲ ಪರಿಕರಕೊಳ್ಳಲು ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಮೆರಿಟ್ ವಿದ್ಯಾರ್ಥಿ ವೇತನ ಜಾರಿಮಾಡಬೇಕು ಇತ್ಯಾದಿ ಬೇಡಿಕೆಗಳನ್ನು ಪರಿಹರಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಹೋರಾಟ ನೇತೃತ್ವವನ್ನು ಸಂಘಟನೆಯ ಮುಖಂಡರಾದ ರಾಜೀವ ಪಡುಕೋಣೆ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಶ್ರೀಧರ ಉಪ್ಪುಂದ, ಅಮ್ಮಯ್ಯ ಪೂಜಾರಿ, ವೆಂಕಟೇಶ್ ಕೋಣಿ ಮೊದಲಾದವರು ವಹಿಸಿದ್ದರು.